

ಬೆಂಗಳೂರು: ಗುಂಜೂರು ಮುಖ್ಯ ರಸ್ತೆಯಲ್ಲಿ ಮಿನಿ ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನಗರದ ಎಸಿಜೆಎಂ ಕೋರ್ಟ್ ಸುನಿಲ್‌ಕುಮಾರ್ ಎಂಬಾತನಿಗೆ ಜೈಲು ಶಿಕ್ಷೆ ವಿಧಿಸಿದೆ.
ಮಿನಿ ಬಸ್ ಚಾಲಕನಾದ ಸುನಿಲ್‌ಕುಮಾರ್, ಗುಂಜೂರು ಮುಖ್ಯ ರಸ್ತೆಯಲ್ಲಿ ೨೦೨೧ರ ಸೆ.೧೪ರಂದು ಕಲ್ಯಾಣ್‌ಕುಮಾರ್ ಎಂಬ ಬೈಕ್ ಸವಾರನಿಗೆ ವಾಹನ ಗುದ್ದಿಸಿದ್ದ. ತೀವ್ರವಾಗಿ ಗಾಯಗೊಂಡು ಕೋಮಾ ಸ್ಥಿತಿಗೆ ತಲುಪಿದ್ದ ಕಲ್ಯಾಣ್‌ಕುಮಾರ್, ಚಿಕಿತ್ಸೆಗೆ ಸ್ಪಂದಿಸದೆ ೨೦೨೧ರ ಡಿ.೧೦ರಂದು ಮೃತಪಟ್ಟಿದ್ದ. ಈ ಸಂಬಂಧ ವೈಟ್‌ಫೀಲ್ಡ್ ಸಂಚಾರ ಠಾಣೆ ಪೊಲೀಸರು ಅಜಾಗರೂಕ ಚಾಲನೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಸುನಿಲ್‌ಕುಮಾರ್‌ನನ್ನು ಬಂಧಿಸಿದ್ದರು. ನಂತರ ಪ್ರಕರಣದ ತನಿಖೆ ನಡೆಸಿ ಸುನಿಲ್‌ಕುಮಾರ್ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಸುನಿಲ್‌ಕುಮಾರ್ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಆತನಿಗೆ ೧ ವರ್ಷ ಮೂರು ತಿಂಗಳು ಜೈಲು ಶಿಕ್ಷೆ ಮತ್ತು ೯ ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.