

ಬೆಂಗಳೂರು: ಮಧ್ಯರಾತ್ರಿ ಅಜಾಗರೂಕತೆಯಿಂದ ವೇಗವಾಗಿ ಕಾರು ಚಲಾಯಿಸಿಕೊಂಡು ಬಂದ ವ್ಯಕ್ತಿಯೊಬ್ಬ ಮನೆ ಮುಂದೆ ನಿಲ್ಲಿಸಿದ್ದ ಕಾರುಗಳಿಗೆ ಡಿಕ್ಕಿ ಹೊಡೆದು ಪರಾರಿಯಾಗಿರುವ ಪ್ರಕರಣ ಭದ್ರಪ್ಪ ಲೇಔಟ್‌ನ ಟಾಟಾ ನಗರದ ೯ನೇ ಕ್ರಾಸ್‌ನಲ್ಲಿ ನಡೆದಿದೆ.
ಆ.೩೧ರ ರಾತ್ರಿ ೧.೨೦ರ ಸುಮಾರಿಗೆ ವೇಗವಾಗಿ ತನ್ನ ಕಾರಿನಲ್ಲಿ ಬಂದಿರುವ ಅಪರಿಚಿತ ವ್ಯಕ್ತಿ. ಮನೆ ಮುಂದೆ ನಿಲ್ಲಿಸಿದ್ದ ಮುರಳಿ ಮನೋಹರ್ ಎಂಬುವವರ ಕಾರಿಗೆ ಮುಂಬದಿಯಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ. ಪರಿಣಾಮ ಮುರಳಿ ಅವರ ಕಾರಿನ ಹಿಂಭಾಗದಲ್ಲಿ ನಿಲ್ಲಿಸಿದ್ದ ಮತ್ತೊಂದು ಕಾರು ಸೇರಿ ಒಟ್ಟು ಎರಡು ಕಾರುಗಳು ಜಖಂಗೊಂಡಿವೆ. ಅಪಘಾತದಲ್ಲಿ ತನ್ನ ಕಾರಿನ ಇಂದಿನ ಬಾಗಿಲು ಸಹ ತೆರೆದಿದ್ದರೂ ಸಹ ನಿರ್ಲಕ್ಷ್ಯತೆಯಿಂದ ಆರೋಪಿ ಅತಿವೇಗವಾಗಿ ತೆರಳಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಾರಿನ ಮಾಲೀಕ ಮುರಳಿ ನೀಡಿರುವ ದೂರಿನನ್ವಯ ಹೆಬ್ಬಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿ ಮದ್ಯಪಾನ ಮಾಡಿ ಕಾರು ಚಲಾಯಿಸಿರುವ ಶಂಕೆ ವ್ಯಕ್ತವಾಗಿದೆ.