

ಶಿವಮೊಗ್ಗ: ನವಜಾತ ಹೆಣ್ಣು ಶಿಶುವಿನ ಮೃತದೇಹವನ್ನು ಕಚ್ಚಿಕೊಂಡು ನಾಯಿಯೊಂದು ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಓಡಾಡಿದ್ದು ಮಕ್ಕಳ ಪಾಲಕರು, ರೋಗಿಗಳಲ್ಲಿ ಆತಂಕ ಮೂಡಿಸಿದೆ. ಭದ್ರತಾ ಸಿಬ್ಬಂದಿ ಗಮನಿಸಿ ನಾಯಿ ಓಡಿಸಿ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದು ಇದೀಗ ಪ್ರಕರಣ ದೊಡ್ಡಪೇಟೆ ಠಾಣೆ ಮೆಟ್ಟಿಲೇರಿದೆ.
ಮಾ.31ರಂದು ಬೆಳಗ್ಗೆ ನಾಯಿಯೊಂದು ಮೆಗ್ಗಾನ್ ಆಸ್ಪತ್ರೆ ಹೆರಿಗೆ ವಾರ್ಡ್ ಬಳಿ ಶಿಶುವಿನ ಮೃತದೇಹ ಕಚ್ಚಿಕೊಂಡು ಆಸ್ಪತ್ರೆ ಆವರಣದಲ್ಲಿ ಓಡಾಡಿದೆ. ಇದನ್ನು ಸಾರ್ವಜನಿಕರು ಗಮನಿಸಿ ಭದ್ರತಾ ಸಿಬ್ಬಂದಿ ಗಮನಕ್ಕೆ ತಂದಿದ್ದಾರೆ. ಈ ವೇಳೆ ನಾಯಿ ಓಡಿಸಿದ ಸಿಬ್ಬಂದಿ ಮೃತದೇಹವನ್ನು ಹೆರಿಗೆ ವಾರ್ಡ್‌ಗೆ ಕೊಂಡೊಯ್ದು ಪರೀಕ್ಷಿಸಿದಾಗ ಹೆಣ್ಣು ನವಜಾತ ಶಿಶು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಆಗಷ್ಟೆ ಹುಟ್ಟಿದ ಶಿಶುವನ್ನು ಯಾರೋ ಮೆಗ್ಗಾನ್ ಆಸ್ಪತ್ರೆ ಮಕ್ಕಳ ವಾರ್ಡ್ ಹಿಂಭಾಗ ಬಿಟ್ಟು ಹೋಗಿರುವ ಶಂಕೆ ಇದೆ. ಮೃತಪಟ್ಟ ಶಿಶುವನ್ನು ಬಿಸಾಡಿದ್ದರೋ ಅಥವಾ ಅನೈತಿಕ ಸಂಬಂಧ ಅಥವಾ ಇನ್ಯಾವುದೋ ಕಾರಣಕ್ಕೂ ಜೀವಂತವಿದ್ದ ಶಿಶುವನ್ನೇ ಬಿಸಾಡಿದ್ದರೋ ಎಂಬುದು ಇನ್ನೂ ಸ್ಪಷ್ಟತೆ ಇಲ್ಲ.
ಶಿಶು ಯಾರದ್ದೆಂದೂ ಪತ್ತೆ ಕೂಡ ಆಗಿಲ್ಲ. ಹಾಗಾಗಿ ಶಿಶುವನ್ನು ಬಿಟ್ಟು ಹೋದ ಪಾಲಕರ ಪತ್ತೆ ಮಾಡಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮೆಗ್ಗಾನ್ ಆಸ್ಪತ್ರೆ ಭದ್ರತಾ ಸಿಬ್ಬಂದಿ ದೂರು ನೀಡಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.