ರಾಯರಲ್ಲಿ ಮೈಸೂರು ಮಹಾರಾಜರ ಭಕ್ತಿ

Shree guru raghavendra Swamiji
Published on
ವಿದ್ಯಾವಾಚಸ್ಪತಿ ಡಾ| ಅರಳುಮಲ್ಲಿಗೆ ಪಾರ್ಥಸಾರಥಿ

ರಾಘವೇಂದ್ರ ಸ್ವಾಮಿಗಳಲ್ಲಿ ವಿಶೇಷ ಭಕ್ತಿ ಮಾಡಿದವರಲ್ಲಿ ಅನೇಕ ರಾಜಮಹಾರಾಜರುಗಳು, ನವಾಬಸುಲ್ತಾನರುಗಳೂ ಇದ್ದರು. ತಂಜಾವೂರಿನ ರಘುನಾಥ ಭೂಪಾಲ, ಆದವಾನಿ ನವಾಬ ಸಿದ್ದಿ ಮಸೂದ್ ಖಾನ್, ಸವಣೂರಿನ ನವಾಬ, ಬಿಜಾಪುರದ ಆದಿಲ್ ಷಹಾ, ಈಸ್ಟ್ ಇಂಡಿಯಾ ಕಂಪನಿಯ ಸರ್ ಥಾಮಸ್ ಮನ್ರೋ ಮುಂತಾದ ರಾಯರ ಸಮಕಾಲೀನರೂ, ನಂತರದ ಕಾಲದಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರೂ, ದಿವಾನ್ ಪೂರ್ಣಯ್ಯನವರು ಮುಂತಾದ ಅತಿರಥ ಮಹಾರಥರುಗಳು ಶ್ರೀ ರಾಘವೇಂದ್ರ ಸ್ವಾಮಿಗಳ ಏಕಾಂತ ಭಕ್ತರಾಗಿದ್ದರು. ಈಚಿನ ದಿನಗಳಲ್ಲಿ ಭಾರತದ ರಾಷ್ಟ್ರಪತಿಗಳಾಗಿದ್ದ ವಿ.ವಿ. ಗಿರಿ, ಡಾ.ಎ.ಪಿ.ಜೆ ಅಬ್ದುಲ್ ಕಲಾಂ, ಪ್ರಧಾನಮಂತ್ರಿಗಳಾಗಿದ್ದ ಪಿ.ವಿ. ನರಸಿಂಹರಾವ್ ಮುಂತಾದ ರಾಷ್ಟ್ರೀಯ ನೇತಾರರೂ ರಾಘವೇಂದ್ರ ಸ್ವಾಮಿಗಳಲ್ಲಿ ವಿಶೇಷ ಭಕ್ತಿ ಗೌರವಗಳನ್ನಿಟ್ಟಿದ್ದವರು. ಆದರೆ ರಾಘವೇಂದ್ರ ಸ್ವಾಮಿಗಳನ್ನು ಕುರಿತು ಸಂಸ್ಕೃತದಲ್ಲಿ ಸ್ತೋತ್ರ ಸಾಹಿತ್ಯ ರಚಿಸಿದ ಮೈಸೂರಿನ ಮಹಾರಾಜರೂ, ರಾಜರ್ಷಿಗಳೆಂದೇ ಪ್ರಖ್ಯಾತರೂ ಆದ ಮುಮ್ಮಡಿ ಕೃಷ್ಣರಾಜ ಒಡೆಯರ ಸೇವೆ ಮಹತ್ವದ್ದು. ಈ ಬಗ್ಗೆ ನಾಡಿನ ಪ್ರಸಿದ್ಧ ವಿದ್ವಾಂಸರಾಗಿದ್ದ ವಿದ್ಯಾಲಂಕಾರ ಪೊ›.ಎಸ್.ಕೆ. ರಾಮಚಂದ್ರರಾಯರು, ರಾಘವೇಂದ್ರ ಸ್ವಾಮಿಗಳ ತ್ರಿಶತಮಾನೋತ್ಸವ ಸಂದರ್ಭದಲ್ಲಿ ‘ಪರಿಮಳ’ ವಿಶೇಷ ಸಂಚಿಕೆಯಲ್ಲಿ ಅಪೂರ್ವ ರೀತಿಯಲ್ಲಿ ಬೆಳಕು ಚೆಲ್ಲಿದ್ದಾರೆ. ಪಂಡಿತರಾಜ ರಾಜಾಶ್ರೀ ಗುರುರಾಜಾಚಾರ್ಯರ ಸಂಪಾದಕತ್ವದಲ್ಲಿ ಹೊರಬಂದಿರುವ ಈ ಸಂಚಿಕೆಯಲ್ಲಿ ಪೊ›. ಎಸ್.ಕೆ. ರಾಮಚಂದ್ರರಾಯರು ನೀಡಿರುವ ವಿವರಗಳು ಅಪೂರ್ವ ಹಾಗೂ ಅಮೂಲ್ಯವೆನಿಸುವಂತಹುದು. ಓದುಗರ ಅವಗಾಹನೆಗಾಗಿ ಆ ಪೈಕಿ ಕೆಲ ವಿವರಗಳು ಇಲ್ಲಿವೆ.

ಮುಮ್ಮಡಿ ಕೃಷ್ಣರಾಜ ಒಡೆಯರ್ ಬಹದ್ದೂರ್ ಅವರು ಮೈಸೂರು ಸಂಸ್ಥಾನದ ಜಗದ್ವಿಖ್ಯಾತ ಮಹಾರಾಜರು. ರಾಘವೇಂದ್ರ ಸ್ವಾಮಿಗಳವರ ಮೂಲಮಠಕ್ಕೆ ಗ್ರಾಮಭೂಮಿಗಳನ್ನು ನೀಡಿ, ವರ್ಷಾಶನ, ಮಾಸಾಶನಗಳನ್ನು ಏರ್ಪಡಿಸಿದವರು. ರಾಘವೇಂದ್ರ ಸ್ವಾಮಿಗಳ ಅಂತರಂಗಭಕ್ತರಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರು ಶ್ರೀಮಠದ ಗುರುಪರಂಪರೆಯ ಸುಬೋಧೇಂದ್ರತೀರ್ಥರು, ಸುಜನೇಂದ್ರ ತೀರ್ಥರು, ಸುಜ್ಞಾನೇಂದ್ರತೀರ್ಥರು ಮುಂತಾದವರಲ್ಲೂ ಶ್ರದ್ಧಾಭಕ್ತಿಗಳನ್ನು ಇರಿಸಿದ್ದವರು. ಮೈಸೂರಿನ ಅರಮನೆಯಲ್ಲಿಯೇ ರಾಘವೇಂದ್ರ ಸ್ವಾಮಿಗಳ ಒಂದು ಪುಟ್ಟ ಬೃಂದಾವನವನ್ನು ಸ್ಥಾಪಿಸಿ ಪೂಜಾರಾಧನೆ ನಡೆಸುತ್ತಿದ್ದರು. ರಾಘವೇಂದ್ರ ಸ್ವಾಮಿಗಳ ಆರಾಧನಾ ಕಾಲದಲ್ಲಿ ಮೂರು ದಿನಗಳ ಕಾಲ ಬಹುವೈಭವದಿಂದ ವಿಶೇಷ ಪೂಜೆ, ಸಂತರ್ಪಣೆಗಳನ್ನು ಏರ್ಪಡಿಸುತ್ತಿದ್ದರು. ಮುಂದೆ ಚಾಮರಾಜ ಒಡೆಯರ ಕಾಲದಲ್ಲಿ ಅರಮನೆಯಲ್ಲಿದ್ದ ರಾಘವೇಂದ್ರ ಸ್ವಾಮಿ ಬೃಂದಾವನವನ್ನು ಸಕ್ರಮ ಪೂಜಾರಾಧನೆಗಾಗಿ ಪೂರ್ಣಯ್ಯನವರ ಛತ್ರದಲ್ಲಿ ಸ್ಥಾಪಿಸಿ ಅಲ್ಲಿ ಆರಾಧನಾದಿಗಳು ನಡೆಯುವ ವ್ಯವಸ್ಥೆ ಮಾಡಲಾಯಿತು.

ಮುಮ್ಮಡಿ ಕೃಷ್ಣರಾಜ ಒಡೆಯರು ಭರತಖಂಡದ ಉದ್ದಗಲಕ್ಕೂ ಸಂಚರಿಸುತ್ತಿದ್ದಾಗ ತೀರ್ಥಕ್ಷೇತ್ರಗಳಲ್ಲೆಲ್ಲ ಸಂಚರಿಸಿ ಅಲ್ಲಿ ನೀಡಿದ ದಾನಧರ್ಮಗಳಿಂದ ಮೈಸೂರಿನ ಹೆಸರನ್ನು ಬೆಳಗಿದರು. ಅಭಿನವ ಭೋಜರಾಜನೆಂದೇ ಖ್ಯಾತರಾಗಿದ್ದ ಮುಮ್ಮಡಿ ಕೃಷ್ಣರಾಜರು ವಿದ್ವತ್ತು, ಪ್ರೌಢಿಮೆ, ರಸಜ್ಞತೆ, ಉದಾರಹೃದಯಗಳಿಂದಾಗಿ ಮೈಸೂರು ಸಂಸ್ಥಾನದ ಹಿರಿಮೆಯನ್ನು ಅಜರಾಮರ ಮಾಡುವಲ್ಲಿ ಯಶಸ್ವಿಯಾದರು. 1799ರ ಜೂನ್ 30ರಂದು ಮೈಸೂರು ಸಂಸ್ಥಾನದ ಸಿಂಹಾಸನಾಧೀಶ್ವರರಾದ ಮುಮ್ಮಡಿ ಕೃಷ್ಣರಾಜ ಒಡೆಯರು 1868ರ ಜೂನ್ 27ರಂದು ನಿರ್ಯಾಣರಾದಾಗ ಅವರಿಗೆ ಎಪ್ಪತ್ನಾಲ್ಕು ವರ್ಷ ವಯಸ್ಸಾಗಿತ್ತು. ಅವರ ಆಡಳಿತಾವಧಿಯಲ್ಲಿ ಪೂರ್ಣಯ್ಯನವರೇ ದಿವಾನರಾಗಿದ್ದವರು. ಪೂರ್ಣಯ್ಯನವರ ಧರ್ಮಛತ್ರಗಳು ನಾಡಿನ ಮನೆಮಾತಾಗಿದ್ದವು. ಮುಮ್ಮಡಿಯವರು ಮಹಾರಾಜರಾದ ಮೇಲೆ, ದೇವಸ್ಥಾನಗಳು, ದೀನರು, ಬಡಬಗ್ಗರು, ವಿದ್ವಾಂಸರು, ಕಲಾವಿದರು, ಫಕೀರರು ಮುಂತಾದವರ ಬಗ್ಗೆ ಮಾಡಿದ ವೆಚ್ಚ ಪೂರ್ಣಯ್ಯನವರು ಮಾಡಿದ ವೆಚ್ಚಕ್ಕಿಂತ ಎರಡು ಪಟ್ಟು ಹೆಚ್ಚೆಂದು ಸರ ಥಾಮಸ್ ಮನ್ರೋ ಬರೆದಿದ್ದಾನೆ.

ರಾಜರ್ಷಿ ಮುಮ್ಮಡಿ ಕೃಷ್ಣರಾಜ ಪ್ರಭುಗಳು ಸಂಸ್ಕೃತ, ಕನ್ನಡ, ಮರಾಠಿ, ಪರ್ಷಿಯನ್ ಭಾಷೆಗಳಲ್ಲಿ ಪ್ರಭುತ್ವ ಇದ್ದವರು. ತಮ್ಮದೇ ಆದ ಅಪೂರ್ವ ಗ್ರಂಥಭಂಡಾರವೊಂದನ್ನು ಹೊಂದಿದ್ದ ಅವರು ಶಾಸ್ತ್ರ ಸಾಹಿತ್ಯ, ಕಾವ್ಯ, ಅಲಂಕಾರಗಳಲ್ಲಿ ಪರಿಣಿತರಾಗಿದ್ದರು. ಸ್ವತಃ ಹೃದ್ಯಗದ್ಯಪದ್ಯ ಗ್ರಂಥಗಳ ರಚನಕಾರರಾಗಿದ್ದರು. ಇವರ ಅನೇಕ ಗ್ರಂಥಗಳಲ್ಲಿ ‘ದೇವತಾನಾಮ ಕುಸುಮಮಂಜರಿ’ ಪ್ರಖ್ಯಾತವಾದ ಗ್ರಂಥ. ಮಹಾರಾಜರು ತಮ್ಮದೇ ಆದ ‘ಜಗದಂಬಾ ವಿಲಾಸ ಮುದ್ರಾಕ್ಷರ ಶಿಲಾಯಂತ್ರ’ದಲ್ಲಿ ಕಲ್ಲಚ್ಚಿನ ಪ್ರತಿ ಮಾಡಿಸಿದರು. ಅದರ ಒಂದು ಪ್ರತಿ ಮೈಸೂರು ವಿಶ್ವವಿದ್ಯಾಲಯದ

ಡಾ| ಕೆ.ಬಿ. ರಾಮಕೃಷ್ಣರಾಯರಿಂದ

ಪೊ›.ಎಸ್.ಕೆ. ರಾಮಚಂದ್ರರಾಯರಿಗೆ ದೊರಕಿತು. ಈ ಗ್ರಂಥದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಅಷ್ಟೋತ್ತರ ಶತನಾಮಾವಳಿಯಿಂದ 1800ರ ಹೊತ್ತಿಗೆ ರಾಘವೇಂದ್ರ ಗುರುಗಳ ಪ್ರಖ್ಯಾತಿ ಇಡೀ ದಕ್ಷಿಣ ದೇಶದಲ್ಲೆಲ್ಲ ಹರಡಿರುವ ವಿಷಯ ವಿದಿತವಾಗುತ್ತದೆ. ರಾಘವೇಂದ್ರ ಸ್ವಾಮಿಗಳ ಹಿಂದಿನ ಪರಂಪರೆಯಲ್ಲಿ ಹಿರಿಯರಾದ ಶ್ರೀ ವಿಬುಧೇಂದ್ರ ತೀರ್ಥರ ಕಾಲದಲ್ಲಿಯೇ ಎಂದರೆ 1490ರ ಸುಮಾರಿಗೆ ನಂಜನಗೂಡಿನಲ್ಲಿ ಮಠವು ಪ್ರಾರಂಭವಾಗಿ ಮುಂದೆ ಅದೇ ಕೇಂದ್ರಸ್ಥಾನವೂ ಆಯಿತು. 1663ರಲ್ಲಿ ರಾಘವೇಂದ್ರ ಸ್ವಾಮಿಗಳಿಗೆ ಮೈಸೂರು ಮಹಾರಾಜರಾಗಿದ್ದ ದೊಡ್ಡದೇವರಾಜ ಒಡೆಯರು ಅರ್ಪಿಸಿದ ತಾಮ್ರಶಾಸನವೊಂದು ನಂಜನಗೂಡು ಮಠದಲ್ಲಿದೆ. ಶ್ರೀರಾಘವೇಂದ್ರ ಸ್ವಾಮಿಗಳನ್ನು ಬೃಂದಾವನದಲ್ಲಿ ದರ್ಶನ ಮಾಡಿದ ಸರ್ ಥಾಮಸ್ ಮನ್ರೋ 1825ರಲ್ಲಿ ಮೈಸೂರಿಗೆ ಬಂದು ಮುಮ್ಮಡಿ ಕೃಷ್ಣರಾಜ ಒಡೆಯರನ್ನು ಭೇಟಿ ಮಾಡಿದ ಐತಿಹಾಸಿಕ ಸಂದರ್ಭವನ್ನು ಇಲ್ಲಿ ಸ್ಮರಿಸಬಹುದಾಗಿದೆ.

ರಾಘವೇಂದ್ರ ಸ್ವಾಮಿಗಳನ್ನು ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಶಾಂತಾತ್ಮರೆಂದೂ, ಮಧ್ವಮತವರ್ಧಕರೆಂದೂ, ಶ್ರೀರಾಮೋಪಾಸಕರೆಂದೂ ಅಪರೋಕ್ಷಿಕೃತಶ್ರೀಶರೆಂದೂ, ಅಗಣಿತ ಮಹಿಮರೆಂದೂ, ಅನಘರೆಂದೂ, ಅಪೇಕ್ಷಿತಫಲಪ್ರದಾತರೆಂದೂ, ಅತ್ಯಂತ ದಯಾಳುಗಳೆಂದೂ, ಆಜಾನುಬಾಹುಗಳೆಂದೂ, ಅಘನಾಶನರೆಂದೂ ವರ್ಣಿಸಿದ್ದಾರೆ. ಅವರ ದೃಷ್ಟಿಯಲ್ಲಿ ರಾಘವೇಂದ್ರರು ಗುರುರಾಜರು, ಗುಣಸಾಗರರೂ, ಜಿತೇಂದ್ರಿಯರೂ, ಜಗತ್ಪೂಜ್ಯರೂ, ಜ್ಞಾನಿಪ್ರಿಯರೂ, ನಾರಾಯಣ ಪಾರಾಯಣರೂ, ಪುಣ್ಯಶ್ಲೋಕರೂ, ಪುರುಷಶ್ರೇಷ್ಠರೂ, ಮಂತ್ರಾಲಯ ಕೃತಾವಾಸರೂ, ಮಹನೀಯರೂ, ಸುಧೀಂದ್ರವರಪುತ್ರಕರೂ ಆಗಿರುವರು. ಅವರ ಬೃಂದಾವನಕ್ಕೆ ಪ್ರದಕ್ಷಿಣೆ ನಮಸ್ಕಾರ ಮಾಡಿದರೆ ಸರ್ವಯಾತ್ರಾಫಲವೂ ಲಭಿಸುವುದು.

(ಲೇಖಕರು ಖ್ಯಾತ ವಿದ್ವಾಂಸರು, ಗ್ಲೋಬಲ್ ವಿಷ್ಣುಸಹಸ್ರನಾಮದ ಸಂಸ್ಥಾಪಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net