

ನವದೆಹಲಿ: ಕೊಲೆ ಪ್ರಕರಣದಲ್ಲಿ ಮರಣದಂಡನೆಗೆ ಒಳಗಾಗಿ ತಾತ್ಕಾಲಿಕವಾಗಿ ತಡೆ ಸಿಕ್ಕರೂ ಆತಂಕದಲ್ಲೇ ಕಾಲ ಕಳೆಯುತ್ತಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾಗೆ ಇದೀಗ ಮತ್ತೊಂದು ತಲೆನೋವು ಎದುರಾಗಿದೆ. ಏಕೆಂದರೆ, ಆಕೆಯಿಂದ ಕೊಲೆಗೀಡಾದ ತಲಾಲ್ ಅಬ್ದೊ ಮೆಹ್ದಿ ಎಂಬಾತನ ಸಹೋದರ ಅಬ್ದೆಲ್ಫತ್ತಾ ಮೆಹ್ದಿಯ ‘ನಿಮಿಷಾಳದ್ದು ಅಪರಾಧ, ಆಕೆಗೆ ಕ್ಷಮೆ ಇಲ್ಲ, ಆಕೆ ಮರಣದಂಡನೆಗೆ ಒಳಪಡಲೇಬೇಕು’ ಎಂಬುದಾಗಿ ಹೇಳಿದ್ದಾನೆ. ಭಾರತೀಯ ಮಾಧ್ಯಮಗಳು ಅಪರಾಧಿಯನ್ನು ಬಲಿಪಶು ಎನ್ನುವಂತೆ ಬಂಬಿಸಲು ಪ್ರಯತ್ನಿಸುತ್ತಿವೆ ಎಂಬ ಬಗ್ಗೆ ತಮ್ಮ ಕುಟುಂಬದ ಬೇಸರವಿದೆ ಎಂಬುದಾಗಿಯೂ ಆತ ಹೇಳಿದ್ದಾನೆ.
ನಿಮಿಷಾ ಪ್ರಿಯಾಳನ್ನು ಬುಧವಾರ ಮರಣದಂಡನೆಗೆ ಒಳಪಡಿಸಬೇಕಾಗಿತ್ತು. ಆದರೆ ಬಹುಹಂತದ ಸುದೀರ್ಘ ಮಾತುಕತೆಗಳ ಹಿನ್ನೆಲೆಯಲ್ಲಿ ಮರಣದಂಡನೆಗೆ ಮಂಗಳವಾರ ತಾತ್ಕಾಲಿಕ ತಡೆ ಸಿಕ್ಕಿದೆ. ಮುಂದಿನ ಆದೇಶದವರೆಗೆ ಆಕೆಯ ಮರಣದಂಡನೆ ಸ್ಥಗಿತಗೊಂಡಿದ್ದು, ಸದ್ಯಕ್ಕೆ ಇದೇ ಆಕೆಗೆ ಸಿಕ್ಕ ದೊಡ್ಡ ನಿರಾಳತೆಯಾಗಿದೆ.
ಸೌದಿ ಅರೇಬಿಯಾದಲ್ಲಿನ ಸಂಸ್ಥೆಗಳಲ್ಲದೆ, ಭಾರತ ಸರ್ಕಾರದ ಸಂಪೂರ್ಣ ಬೆಂಬಲ ಮತ್ತು ಯೆಮನ್ನ ಶೂರಾ ಕೌನ್ಸಿಲ್ನಲ್ಲಿನ ಸ್ನೇಹಿತನನ್ನು ಮಧ್ಯಸ್ಥಿಕೆ ವಹಿಸಲು ಸಂರ್ಪಸಿದ ಗ್ರಾಂಡ್ ಮುಫ್ತಿ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಅವರ ಧಾರ್ವಿುಕ ಮಧ್ಯಪ್ರವೇಶ ಸೇರಿದಂತೆ ಹಲವಾರು ಕಡೆಗಳಿಂದ ನಡೆದ ನಾನಾ ಪ್ರಯತ್ನಗಳು ಮುಂದಿನ ಆದೇಶದವರೆಗೆ ಮರಣದಂಡನೆ ಮುಂದೂಡುವ ನಿರ್ಧಾರಕ್ಕೆ ಕಾರಣವಾಗಿವೆ. ಆಕೆಯನ್ನು ಕ್ಷಮಿಸುವುದು ಮೃತನ ಕುಟುಂಬವಾದರೂ ಕುಟುಂಬಸ್ಥರಲ್ಲಿನ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿರುವುದರಿಂದ ಪ್ರಕರಣ ಸಂಕೀರ್ಣವಾಗಿ ಉಳಿದಿದೆ.
ನರ್ಸ್ ನಿಮಿಷಾ 2008ರಲ್ಲಿ ಯೆಮೆನ್ಗೆ ಹೋಗಿದ್ದು, ಅಲ್ಲಿ ಕ್ಲಿನಿಕ್ ತೆರೆದ ಬಳಿಕ ಆ ವ್ಯವಹಾರದಲ್ಲಿ ಪಾಲುದಾರನಾಗಿದ್ದ ತಲಾಲ್ ಅಬ್ದೊ ಮೆಹ್ದಿಯನ್ನು 2017ರಲ್ಲಿ ಕೊಲೆ ಮಾಡಿದ ಅಪರಾಧದಲ್ಲಿ ಸದ್ಯ ಯೆಮೆನ್ನ ಜೈಲ್ನಲ್ಲಿದ್ದಾಳೆ. 2018ರಲ್ಲಿ ಬಂಧಿತಳಾಗಿದ್ದ ನಿಮಿಷಾಗೆ 2020ರಲ್ಲಿ ಯೆಮೆನ್ ವಿಚಾರಣಾ ನ್ಯಾಯಾಲಯ ಮರಣದಂಡನೆ ವಿಧಿಸಿದ್ದು, ಅದನ್ನು ಯೆಮೆನ್ನ ಸುಪ್ರೀಂ ಜುಡಿಷಿಯಲ್ ಕೌನ್ಸಿಲ್ 2023ರ ನವೆಂಬರ್ನಲ್ಲಿ ಎತ್ತಿಹಿಡಿದಿತ್ತು.
ಇಂಥ ಪ್ರಕರಣಗಳಲ್ಲಿ ಬ್ಲಡ್ ಮನಿಯಿಂದ ಜೀವ ಉಳಿಯುವ ಸಾಧ್ಯತೆ ಇರುತ್ತದೆ. ಕೊಲೆಗೀಡಾದ ವ್ಯಕ್ತಿಯ ಕುಟುಂಬ ಹತ್ಯೆಗೈದವರನ್ನು ಕ್ಷಮಿಸಬೇಕೆಂದರೆ ‘ದಿಯಾ’ ಎಂಬ ಪರಿಹಾರ ಮೊತ್ತವನ್ನು ನ್ಯಾಯಯುತವಾಗಿ ನೀಡುವುದು ಇಸ್ಲಾಮ್ ಷರಿಯಾ ಕಾನೂನಿನಲ್ಲಿದೆ. ಇದು ಯೆಮೆನ್, ಸೌದಿ ಅರೇಬಿಯಾ, ಇರಾನ್ ಮತ್ತು ಪಾಕಿಸ್ತಾನದಲ್ಲಿ ಜಾರಿಯಲ್ಲಿದೆ. ‘ದಿಯಾ’ ಹಣ ಪಡೆದು ಸಂತ್ರಸ್ತ ಕುಟುಂಬ ಅಪರಾಧಿಯನ್ನು ಕ್ಷಮಿಸಿದರೆ, ಸರ್ಕಾರ ಶಿಕ್ಷೆ ರದ್ದುಗೊಳಿಸುತ್ತದೆ. ಈ ಬ್ಲಡ್ ಮನಿ ಎಂಬ ಪರಿಹಾರದಿಂದ ಮರಣದಂಡನೆ ಶಿಕ್ಷೆಯಿಂದ ಈಗಾಗಲೇ ಕೆಲ ಭಾರತೀಯರು ಜೀವ ಉಳಿಸಿಕೊಂಡಿದ್ದಾರೆ. ಬೆಂಗಳೂರಿನ ಸಲೀಂ ಬಾಬಾ 1.5 ಕೋಟಿ ರೂ. ನೀಡಿ ಜೀವದಾನ ಪಡೆದಿದ್ದು, ಈ ಮೊತ್ತವನ್ನು ಸೌದಿ ದೊರೆ ನೀಡಿದ್ದರು. ಬಹಳಷ್ಟು ಸಲ ಕೆಲ ಉದ್ಯಮಿಗಳು ಈ ಹಣ ನೀಡಿ ಅಪರಾಧಿಗಳ ಜೀವ ಉಳಿಸಿದ್ದಾರೆ.
ಅಬ್ದುಲ್ ರಹೀಂ, ಕೇರಳ: 34 ಕೋಟಿ ರೂ. ಎ.ಎಸ್.ಶಂಕರನಾರಾಯಣನ್, ಕೇರಳ: 47 ಲಕ್ಷ ರೂ. ಸಿ.ಎಚ್.ಲಿಂಬಾದ್ರಿ, ತೆಲಂಗಾಣ: 1.8 ಲಕ್ಷ ರೂ.