ಪರೀಕ್ಷೆಯಿಂದ ತಪ್ಪಿಸಿಕೊಳ್ಳಬೇಕೆಂದಿದ್ದ ಬಾಲಕಿಗೆ ಕೀಟನಾಶಕ ಕೊಟ್ಟು ಕೊಂದ ಶಿಕ್ಷಕ: ವಿಚಾರಣೆ ವೇಳೆ ಹೊರಬಿತ್ತು ಸತ್ಯ

jail
Published on

ಕೊಲ್ಹಾಪುರ: ಪರೀಕ್ಷೆಗೆ ಸಿದ್ಧತೆ ನಡೆಸಿಲ್ಲ ಎನ್ನುವ ಕಾರಣದಿಂದ ಪರೀಕ್ಷೆ ತಪ್ಪಿಸಿಕೊಳ್ಳಬೇಕೆಂದಿದ್ದ ಬಾಲಕಿಗೆ ಕೀಟನಾಶಕ ಕೊಟ್ಟು ಕೊಂದಿರುವ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರದ ಶಿರೋಲ್​ ತಾಲೂಕಿನ ಶೀರ್ತಿ ಗ್ರಾಮದ ಖಾಸಗಿ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ.

10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಾನಿಕಾ ಮಾಲಿ ಹೆಸರಿನ ವಿದ್ಯಾರ್ಥಿನಿ ತಾನು ಪರೀಕ್ಷೆಗೆ ಸರಿಯಾಗಿ ಓದಿಕೊಂಡಿಲ್ಲ ಎಂಬ ಕಾರಣದಿಂದ ಪರೀಕ್ಷೆಯನ್ನು ಹೇಗಾದರೂ ಮಾಡಿ ತಪ್ಪಿಸಿಕೊಳ್ಳಬೇಕು ಎಂದು ಉಪಾಯ ಹುಡುಕುತ್ತಿದ್ದಳು. ಆಕೆಗೆ ಸಹಾಯ ಮಾಡಲು ಹೊರಟ ಆಕೆಯ ಶಿಕ್ಷಕ ನೀಲೇಶ್​ ಬಾಲು ಪ್ರಧಾನೆ, ಕೀಟನಾಶಕವನ್ನು ಕೊಟ್ಟು ಸೇವಿಸುವಂತೆ ಹೇಳಿದ್ದಾನೆ. ಬಾಲಕಿಯು ನೀರಿನಲ್ಲಿ ಕೀಟನಾಶಕವನ್ನು ಮಿಶ್ರಣ ಮಾಡಿಕೊಂಡು ಸೇವಿಸಿದ್ದಾಳೆ. ಫೆ.20ರಂದು ಪ್ರಾಯೋಗಿಕ ಪರೀಕ್ಷೆಯಿದ್ದು ಆ ದಿನ ವಿಷ ಸೇವಿಸಿದ್ದರಿಂದಾಗಿ ಬಾಲಕಿ ಅಸ್ವಸ್ಥಳಾಗಿದ್ದಾಳೆ. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಐದು ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಡಿದ ಬಾಲಕಿ ಫೆ.25ರಂದು ಕೊನೆಯುಸಿರೆಳೆದಿದ್ದಾಳೆ.

ಮಗಳ ಸಾವಿನ ಬಗ್ಗೆ ಪೋಷಕರು ಪೊಲೀಸರಲ್ಲಿ ದೂರು ನೀಡಿದ್ದು, ಪೊಲೀಸ್​ ತನಿಖೆಯ ವೇಳೆ ಘಟನೆಯ ಹಿಂದಿನ ಕಾರಣ ಹೊರಬಿದ್ದಿದೆ. ವಿದ್ಯಾರ್ಥಿನಿ ತಾನು ಪರೀಕ್ಷೆಗೆ ತಯಾರಾಗಿಲ್ಲ, ದಯಮಾಡಿ ನಾನು ಹುಷಾರು ತಪ್ಪುವಂತೆ ಏನಾದರೂ ಮಾಡಿ ಎಂದು ಕೇಳಿಕೊಂಡಿದ್ದರಿಂದಾಗಿ ತಾನು ಕೀಟನಾಶಕ ಕೊಟ್ಟಿರುವುದಾಗಿ ಶಿಕ್ಷಕ ನೀಲೇಶ್​ ಪೊಲೀಸರ ಬಳಿ ಬಾಯ್ಬಿಟ್ಟಿದ್ದಾನೆ.

ಸದ್ಯ ಶಿಕ್ಷಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net