

ಬೆಂಗಳೂರು: ಮಹಿಳಾ ಟೆಕ್ಕಿಯೊಬ್ಬರು ಅಬ್ಬಿಗೆರೆ ಬಳಿಯ ಲಕ್ಷ್ಮಯ್ಯ ಲೇಔಟ್‌ನಲ್ಲಿ ಗುರುವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ. ವರದಕ್ಷಿಣೆ ಕಿರುಕುಳದಿಂದ ಮನನೊಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಲಕ್ಷ್ಮಯ್ಯ ಲೇಔಟ್ ನಿವಾಸಿ ಸುನಿಲ್ ಎಂಬುವರ ಪತ್ನಿ ಪೂಜಾ (೨೬) ಆತ್ಮಹತ್ಯೆ ಮಾಡಿಕೊಂಡವರು. ಮೂಲತಃ ವಿಜಯನಗರ ಜಿಲ್ಲೆಯ ಸುನಿಲ್ ಮತ್ತು ಪೂಜಾ ಸಂಬಂಧಿಕರಾಗಿದ್ದು, ೨೦೨೨ರ ಏಪ್ರಿಲ್‌ನಲ್ಲಿ ಮದುವೆಯಾಗಿದ್ದರು. ದಂಪತಿ ಬೇರೆ ಬೇರೆ ಸ್‌ಟಾವೇರ್ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಂಪತಿ ಈ ಹಿಂದೆ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಸುನಿಲ್ ಸಹೋದರನಾದ ಅನಿಲ್ ದಂಪತಿ ಜತೆ ವಾಸವಾಗಿದ್ದರು. ಅನಿಲ್ ದಂಪತಿ ಮತ್ತು ಪೂಜಾ ನಡುವೆ ಜಗಳವಾಗಿತ್ತು. ಹೀಗಾಗಿ, ಪೂಜಾ ದಂಪತಿ ಎರಡೂವರೆ ತಿಂಗಳ ಹಿಂದೆಯಷ್ಟೇ ಲಕ್ಷ್ಮಯ್ಯ ಲೇಔಟ್‌ನ ಬಾಡಿಗೆ ಮನೆಗೆ ಪ್ರತ್ಯೇಕವಾಗಿ ನೆಲೆಸಿದ್ದರು. ಸುನಿಲ್, ಸಂಜೆ ಕೆಲಸಕ್ಕೆ ಹೋಗಿದ್ದರು. ಈ ವೇಳೆ ಪೂಜಾ, ಮೈದುನ ಅನಿಲ್‌ಗೆ ಕರೆ ಮಾಡಿ ನಿಂದಿಸಿದ್ದರು. ಅನಿಲ್ ಈ ವಿಚಾರವನ್ನು ಸಹೋದರ ಸುನಿಲ್‌ಗೆ ತಿಳಿಸಿದ್ದರು. ಸಹೋದರನನ್ನು ನಿಂದಿಸಿದ್ದರಿಂದ ಕೋಪಗೊಂಡ ಸುನಿಲ್, ಪತ್ನಿ ಪೂಜಾಗೆ ಕರೆ ಮಾಡಿ ಬೈದಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪತಿ ಬೈದಿದ್ದರಿಂದ ಬೇಸರಗೊಂಡ ಪೂಜಾ, ಮನೆಯಲ್ಲಿ ್ಯಾನ್‌ಗೆ ನೇಣು ಹಾಕಿಕೊಂಡಿದ್ದಾರೆ. ನಂತರ ಸ್ವಲ್ಪ ಸಮಯದಲ್ಲೇ ಸುನಿಲ್, ಪತ್ನಿಗೆ ಹಲವು ಬಾರಿ ಕರೆ ಮಾಡಿದ್ದಾರೆ. ಆದರೆ, ಪೂಜಾ ಕರೆ ಸ್ವೀಕರಿಸಿಲ್ಲ. ಇದರಿಂದ ಅನುಮಾನಗೊಂಡ ಸುನಿಲ್, ಮನೆಯ ಮಾಲೀಕರಿಗೆ ಕರೆ ಮಾಡಿ ತಮ್ಮ ಮನೆ ಬಳಿ ಹೋಗಿ ನೋಡುವಂತೆ ತಿಳಿಸಿದ್ದಾರೆ. ಅದರಂತೆ ಮನೆ ಮಾಲೀಕರು ಸುನಿಲ್‌ರ ಮನೆಗೆ ಹೋಗಿ ನೋಡಿದಾಗ ಪೂಜಾ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಳಿಯ ಸುನಿಲ್, ಆತನ ಸಹೋದರ ಅನಿಲ್ ಮತ್ತು ಅವರ ಪಾಲಕರು ತವರು ಮನೆಯಿಂದ ಹಣ ತರುವಂತೆ ಮಗಳಿಗೆ ಕಿರುಕುಳ ನೀಡುತ್ತಿದ್ದರು. ವರದಕ್ಷಿಣೆ ಕಿರುಕುಳದಿಂದ ಮನನೊಂದು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಯ ಸಾವಿಗೆ ಸುನಿಲ್ ಮತ್ತು ಕುಟುಂಬ ಸದಸ್ಯರೇ ಕಾರಣ ಎಂದು ಪೂಜಾರ ತಾಯಿ ಲಲಿತಮ್ಮ ದೂರು ನೀಡಿದ್ದಾರೆ. ಗಂಗಮ್ಮನಗುಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸುನಿಲ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಎಂದು ಪೊಲೀಸರು ತಿಳಿಸಿದ್ದಾರೆ.