

ಶಿವಮೊಗ್ಗ: ವಸಾಹತುಶಾಹಿ ಕಾನೂನುಗಳ ಯುಗಾಂತ್ಯವಾಗುತ್ತಿದ್ದು, ಸಾರ್ವಜನಿಕ ಸೇವೆ ಮತ್ತು ಕಲ್ಯಾಣ ಕೇಂದ್ರಿತ ಕಾನೂನುಗಳೊಂದಿಗೆ ಹೊಸ ಯುಗ ಪ್ರಾರಂಭವಾಗುತ್ತಿದೆ ಎಂದು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮಂಜುನಾಥ ನಾಯಕ್ ಹೇಳಿದರು.
ನಗರದ ಸಿ.ಭೀಮಸೇನ ರಾವ್ ರಾಷ್ಟ್ರೀಯ ಕಾನೂನು ಮಹಾವಿದ್ಯಾಲಯದಲ್ಲಿ ಸ್ನಾತಕೋತ್ತರ ಕಾನೂನು ಅಧ್ಯಯನ ಕೇಂದ್ರ ಹಾಗೂ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದಿಂದ ಶುಕ್ರವಾರ ಏರ್ಪಡಿಸಿದ್ದ ಕ್ರಿಮಿನಲ್ ಅಪರಾಧ ಪ್ರಕರಣಗಳ ಹೊಸ ಪ್ರಮುಖ ಕಾಯ್ದೆಗಳು-ಬದಲಾವಣೆಗಳು ವಿಷಯ ಕುರಿತ ರಾಜ್ಯಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಹೊಸ ಕಾಯ್ದೆಗಳ ಮೂಲಕ ಪೊಲೀಸರ ತನಿಖೆ ಕ್ರಮ, ಪ್ರಥಮ ತನಿಖಾ ವರದಿ, ಸಾಕ್ಷಾೃಧಾರಗಳ ಸಂಗ್ರಹ, ಪ್ರಕರಣಗಳ ಶೀಘ್ರ ಇತ್ಯರ್ಥ ಸೇರಿ ನಮ್ಮ ಕಾನೂನು, ಪೊಲೀಸ್ ಮತ್ತು ತನಿಖಾ ವ್ಯವಸ್ಥೆಗಳನ್ನು ಆಧುನಿಕ ಯುಗಕ್ಕೆ ತಕ್ಕಂತೆ ನಾವೀನ್ಯತೆಯೊಂದಿಗೆ ರೂಪುಗೊಳಿಸಲಾಗಿದೆ. ವಕೀಲರು, ಪೊಲೀಸರು, ಸಾರ್ವಜನಿಕರು ಹೊಸತನಕ್ಕೆ ಹೇಗೆ ಹೊಂದಿಕೊಳ್ಳುತ್ತಾರೆ ಎಂಬ ಬಗ್ಗೆ ಕುತೂಹಲವಿದೆ ಎಂದರು.
ನೂತನ ಕಾಯ್ದೆಗಳ ಕುರಿತು ನಿವೃತ್ತ ಸರ್ಕಾರಿ ಅಭಿಯೋಜಕ ಎಚ್.ಡಿ.ಆನಂದಕುಮಾರ್ ಮಾತನಾಡಿ, ನ್ಯಾಯಾಂಗ ವ್ಯವಸ್ಥೆ ರಕ್ತ ಹೀನತೆಯಿಂದ ಬಳಲುತ್ತಿದ್ದು, ಅದಕ್ಕೆ ಹೊಸ ರಕ್ತಬೇಕಿದೆ ಎಂಬ ಚರ್ಚೆ ಅನೇಕ ವರ್ಷಗಳಿಂದ ಕೇಳಿಬರುತ್ತಿತ್ತು. ಅಂತಹ ಚರ್ಚೆಗೆ ಇದೀಗ ಅದ್ಭುತ ಸ್ಪಂದನೆ ಸಿಕ್ಕಿದೆ ಎಂದು ಹೇಳಿದರು.
ಶಿಕ್ಷೆಯಿಂದ ವ್ಯಕ್ತಿಯನ್ನು ಬದಲಾಯಿಸುವುದಕ್ಕಿಂತ ಉತ್ತಮ ಚಿಂತನೆಗಳಿಂದ ವ್ಯಕ್ತಿತ್ವ ಬದಲಾಯಿಸುವ ಮುಖ್ಯ ಉದ್ದೇಶ ಹೊಸ ಕಾಯ್ದೆಗಿದೆ. ಈ ಮೂಲಕ ಪ್ರತಿಯೊಬ್ಬ ನಾಗರಿಕರಿಗೆ ನ್ಯಾಯದ ಸ್ಪರ್ಶ ನೀಡುವಲ್ಲಿ ನ್ಯಾಯ ಸಂಹಿತೆ ಕಾಯ್ದೆಯಿಂದ ಸಾಧ್ಯವಾಗಲಿದೆ. ಭಾರತದಿಂದ ಹೊರಗಿದ್ದು, ದೇಶದ ಒಳಗಿನ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಅಪರಾಧಿಗಳನ್ನು ಭಾರತೀಯ ಕಾನೂನು ವ್ಯಾಪ್ತಿಗೆ ತರುವಂತಹ ಬಲಿಷ್ಠ ಕಾಯ್ದೆ ಇದಾಗಿದೆ. ನ್ಯಾಯ ಸಂಹಿತೆ ಕಾಯ್ದೆಯಲ್ಲಿ 511 ಸೆಕ್ಷನ್‌ಗಳಿಂದ 358 ಸೆಕ್ಷನ್‌ಗೆ ಇಳಿಸಲಾಗಿದೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯೆ ಡಾ. ಎ.ಅನಲಾ, ರಾಷ್ಟ್ರೀಯ ಶಿಕ್ಷಣ ಸಮಿತಿ ಸಹ ಕಾರ್ಯದರ್ಶಿ ಡಾ. ಪಿ.ನಾರಾಯಣ್, ನಿರ್ದೇಶಕರಾದ ಅನಂತ ದತ್ತ, ಕಾಲೇಜಿನ ಐಕ್ಯುಎಸಿ ಸಂಯೋಜಕ ಡಾ. ಎಸ್.ಕಾಂತರಾಜ್, ಶಿರಸಿ ಎಂಇಎಸ್ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರಮಥ್ ಅಡಿಗ, ವಕೀಲ ಕೆ.ಕೃಷ್ಣರಾವ್, ಕಾರ್ಯಕ್ರಮ ಸಂಯೋಜಕರಾದ ಡಾ. ಎ.ಎನ್.ಆದರ್ಶ, ಶ್ರೀಲಕ್ಷ್ಮೀ ಇದ್ದರು.