ದೇಶದ ಪ್ರಧಾನಮಂತ್ರಿ ಯಾವುದೇ ರಾಜ್ಯಕ್ಕೆ ಭೇಟಿ ನೀಡಿದರೂ ಅವರ ಸಂಪೂರ್ಣ ರಕ್ಷಣೆಯ ಹೊಣೆಗಾರಿಕೆ ಆಯಾ ರಾಜ್ಯ ಸರ್ಕಾರದ್ದು. ಪ್ರಧಾನಮಂತ್ರಿಯವರ ಅತ್ಯಂತ ಸನಿಹದ ಅಂದರೆ ಫಸ್ಟ್ ರಿಂಗ್ ರಕ್ಷಣೆಗೆ ಎಸ್ಪಿಜಿ ನಿಯೋಜನೆ ಮಾಡಿರಲಾಗುತ್ತದೆ. ಎಸ್ಪಿಜಿ ವ್ಯವಸ್ಥೆ ಕೇಂದ್ರ ಸರ್ಕಾರದ್ದು. ಉಳಿದ ಎಲ್ಲ ರೀತಿಯ ರಕ್ಷಣೆಯ ಹೊಣೆಗಾರಿಕೆ ರಾಜ್ಯ ಸರ್ಕಾರದ್ದು. ಪ್ರಧಾನಮಂತ್ರಿ ಯಾವುದೇ ರಾಜ್ಯಕ್ಕೆ ಭೇಟಿ ನೀಡುವುದಾದರೂ ಹಲವು ದಿನಗಳ ಮುಂಚಿತವಾಗಿಯೇ ಭದ್ರತಾ ಯೋಜನೆಗಳು ರೂಪುಗೊಳ್ಳುತ್ತವೆ. ಕೇಂದ್ರ ಸರ್ಕಾರದ ಅಧಿಕಾರಿಗಳು ರಾಜ್ಯಕ್ಕೆ ಬಂದು ರಾಜ್ಯದ ಮುಖ್ಯಕಾರ್ಯದರ್ಶಿ, ಗೃಹ ಕಾರ್ಯದರ್ಶಿ, ಪೊಲೀಸ್ ವರಿಷ್ಠರ ಜತೆಗೆ ಸಮಾಲೋಚನೆ ನಡೆಸಿ ಭದ್ರತೆಗೆ ಸಂಬಂಧಿಸಿದ ಸೂಚನೆಗಳನ್ನು ಕೊಡುತ್ತಾರೆ. ಆಗ ಭದ್ರತಾ ರಿಹರ್ಸಲ್ ನಡೆಯುತ್ತದೆ. ಎಸ್ಪಿಜಿ ಅಧಿಕಾರಿಗಳು ಮುಂಚಿತವಾಗಿ ಬಂದು ಭದ್ರತಾ ಪರಿಶೀಲನೆ ನಡೆಸುತ್ತಾರೆ. ಕೇಂದ್ರ ಗುಪ್ತಚರ ಇಲಾಖೆ ಮತ್ತು ಎಸ್ಪಿಜಿ ರಾಜ್ಯ ಸರ್ಕಾರಕ್ಕೆ ಸಂಭಾವ್ಯ ಪ್ರತಿಭಟನೆ ಇತ್ಯಾದಿಗಳ ವಿವರವನ್ನು ಒದಗಿಸಿ ಮುಂಜಾಗ್ರತಾ ಕ್ರಮಕ್ಕಾಗಿ ಎಚ್ಚರಿಸುತ್ತವೆ.