

ಶ್ರೀವಸಿಷ್ಠರು ವರ್ಣಿಸುತ್ತಿರುವಂತೆ ವಿದೂರಥ ಮತ್ತು ಸಿಂಧುರಾಜನೆಂಬ ಇಬ್ಬರು ಮಹಾನಾಯಕರುಳ್ಳ ಸೇನೆಗಳ ನಡುವೆ ನಡೆಯುತ್ತಿರುವ ಯುದ್ಧ ಈಗ ನಿಂತಿದೆ. ದಿನವಿಡೀ ಯುದ್ಧ ನಡೆದು ಈಗ ರಾತ್ರಿಯಾಗುತ್ತಿರುವುದರಿಂದ ಯುದ್ಧರಂಗದಲ್ಲಿ ಸೈನಿಕರ ಹೋರಾಟದ ಧ್ವನಿಗಳಿಲ್ಲ. ಮರಣ ಹೊಂದುತ್ತಿರುವ ಸೈನಿಕರ ಆಕ್ರಂದನ ಮತ್ತು ಅವರ ಹಿತೈಷಿಗಳ ದುಃಖ ಇವೆರಡೇ ಈಗ ಯುದ್ಧರಂಗದಲ್ಲಿ ಕಾಣುತ್ತಿರುವ ಚಟುವಟಿಕೆಗಳು. ಇದರ ಹೊರತಾಗಿ ಯುದ್ಧರಂಗ ಬಹುತೇಕ ಶೂನ್ಯ ವಾತಾವರಣದಿಂದ ಕೂಡಿದೆ. ಇಂತಹ ಯುದ್ಧರಂಗವನ್ನು ಶ್ರೀ ವಸಿಷ್ಠರು ನಮ್ಮಕಣ್ಮುಂದೆ ತೆರೆದಿಟ್ಟಂತೆ ವರ್ಣಿಸುತ್ತಿದ್ದಾರೆ.
‘ಶ್ರೀರಾಮ! ಯುದ್ಧರಂಗದಲ್ಲಿ ಅಲ್ಲಲ್ಲಿ ಭಗ್ನಗೊಂಡ ತೂಣೀರಗಳು ಬಿದ್ದಿವೆ. ಅನೇಕ ತೂಣೀರಗಳಿಗೆ ತೂತುಗಳು ಉಂಟಾಗಿವೆ. ಹಾವಿನ ಹೆಡೆಯಂತೆ ತಲೆಯೆತ್ತಿಕೊಂಡಿರುವ ಅಂತಹ ತೂಣೀರಗಳ ತೂತುಗಳಲ್ಲಿ ಬೀಸುತ್ತಿರುವ ಗಾಳಿ ಹೊಕ್ಕು ಹೊರಬರುತ್ತಿರುವುದರಿಂದ ‘ಸುಂಯ್’ ಎಂಬ ಶಬ್ದ ಕೇಳಿಬರುತ್ತಿತ್ತು. ಕಾಡಿನಲ್ಲಿ ತೂತುಗಳಿರುವ ಬಿದಿರುಗಳ ಮೂಲಕ ಗಾಳಿಯಿಂದ ಶಬ್ದ ಬರುತ್ತಿರುವಂತೆ ಈ ಶಬ್ದ ಕೇಳಿಬರುತ್ತಿದೆ. ಶವದ ರಾಶಿಗಳಲ್ಲಿ ಕಂಡುಬರುತ್ತಿರುವ ಮಾಂಸಗಳೆಂಬ ಹಾಸಿಗೆಯ ಮೇಲೆ ಪಿಶಾಚಗಳು ಮಲಗಿ ನಿದ್ರಿಸುತ್ತಿವೆಯೋ ಎಂಬಂತಿತ್ತು. ಅಲ್ಲಲ್ಲಿ ಬಿದ್ದಿರುವ ಸೈನಿಕರ ಕಿರೀಟಗಳು ಮತ್ತು ಆಭರಣಗಳು ಹೊಳೆಯುತ್ತಿವೆ. ಅವುಗಳ ಹೊಳಪುಗಳನ್ನು ನೋಡಿದರೆ ಕಾಮನಬಿಲ್ಲಿನ ಸಮೂಹವೇ ಉಂಟಾಗಿರುವಂತೆ ಕಾಣುತ್ತಿತ್ತು. ಇನ್ನೊಂದೆಡೆ ನಾಯಿ-ನರಿಗಳು ಶವಗಳಲ್ಲಿರುವ ಹಸಿಹಸಿಯಾದ ಕರುಳಿನ ದೀರ್ಘ ಹಗ್ಗಗಳನ್ನು ಕಚ್ಚಿಕೊಂಡು ಎಳೆದುಕೊಂಡು ಹೋಗುವುದನ್ನು ನೋಡಿದರೆ, ನೋಡುತ್ತಿರುವವನ ಕರುಳು ಕಿತ್ತುಬರುವಂತಿತ್ತು.
ರಕ್ತದ ಮುಳುವಿನಲ್ಲಿ ಬಿದ್ದು, ಅರ್ಧಮರ್ಧ ಸತ್ತಿರುವ ಮನುಷ್ಯರ ತೆರೆದ ಬಾಯಿಗಳಿಂದ ಹಲ್ಲುಗಳ ಮೂಲಕ ಹೊರಬರುತ್ತಿರುವ ಘರ-ಘರ ಶಬ್ದ, ರಕ್ತದ ಕೆಸರಿನಲ್ಲಿ ಮುಳುಗಿರುವ ಇನ್ನೂ ಜೀವಂತವಾಗಿರುವ ಮನುಷ್ಯರ ಆರ್ತ ಧ್ವನಿಗಳು ಕೆಸರು ನೀರಿನಲ್ಲಿ ಮುಳುಗಿರುವ ಕಪ್ಪೆಗಳ ಧ್ವನಿಯಂತೆ ಕೇಳಿಬರುತ್ತಿತ್ತು. ಶವಗಳಿಂದ ಕಿತ್ತು ಹೊರಬಿದ್ದಿರುವ ರಕ್ತಸಿಕ್ತವಾದ ಕಣ್ಣುಗಳನ್ನು ನೋಡಿದರೆ, ವಿಚಿತ್ರ ವರ್ಣಗಳಿಂದ ಕೂಡಿದ ಲೋಹಮಯ ಕವಚಗಳು ಬಿದ್ದಿರುವಂತೆ ಕಾಣುತ್ತಿತ್ತು. ಕತ್ತರಿಸಲ್ಪಟ್ಟ ಭುಜಗಳು ಮತ್ತು ಕಾಲುಗಳು ಘೊರವಾದ ರಕ್ತದ ನದಿಗಳಲ್ಲಿ ತೇಲಿಕೊಂಡು ಹೋಗುತ್ತಿರುವ ದೃಶ್ಯ ನೂರಾರು ಕಡೆ ಕಂಡುಬರುತ್ತಿತ್ತು. ಯುದ್ಧರಂಗದಲ್ಲಿ ಮರಣ ಹೊಂದಿರುವ ತಮ್ಮ ಬಂಧುಗಳನ್ನು ಕುರಿತು ದುಃಖದಿಂದ ಆಕ್ರಂದನ ಮಾಡುತ್ತಿರುವ ಬಂಧುಗಳ ಗುಂಪು ಮತ್ತು ಈಗ ತಾನೇ ಮರಣ ಹೊಂದಿರುವ ಮತ್ತು ಮರಣ ಹೊಂದುತ್ತಿರುವ ಮಾನವ ಸಮೂಹ - ಇದನ್ನು ನೋಡಿದರೆ ಎಂಥವನ ಮನಸ್ಸೂ ಕರಗಿಹೋಗುತ್ತದೆ. ಯುದ್ಧರಂಗದಲ್ಲಿ ಖಾಲಿ ಜಾಗ ಎಲ್ಲೂ ಇಲ್ಲ, ಬಾಣಗಳು, ಆಯುಧಗಳು, ಮುರಿದುಬಿದ್ದ ರಥಗಳು, ಸತ್ತ ಕುದುರೆಗಳು, ಆನೆಗಳು ಮತ್ತು ಇವುಗಳನ್ನು ಮುತ್ತುತ್ತಿರುವ ನೊಣಗಳು-ಇವುಗಳಿಂದಲೇ ಯುದ್ಧ ರಂಗದ ಎಲ್ಲಾ ಖಾಲಿ ಜಾಗಗಳು ತುಂಬಿ ಹೋಗಿದ್ದವು.’ ‘ಕೆಲವು ಕಡೆಗಳಲ್ಲಿ ಪ್ರಾಣಸಂಕಟ ದಿಂದ ವಿಲ-ವಿಲ ಒದ್ದಾಡುತ್ತಿರುವ ಮನುಷ್ಯರ ದೃಶ್ಯ ಎಷ್ಟು ಕ್ರೂರವಾಗಿದೆ ಯೆಂದರೆ, ಕಬಂಧ (ತಲೆ ಕಡಿಯಲ್ಪಟ್ಟಿದ್ದರಿಂದ ಉಳಿದು ಕೊಂಡಿರುವ ಕುತ್ತಿಗೆಯ ಕೆಳಗಿನ ಶರೀರ) ಗಳು ಕೈಗಳಲ್ಲಿ ಚಲಿಸುತ್ತಾ, ಬೀಳುತ್ತಾ, ಏಳುತ್ತಾ, ಕುಣಿಯುತ್ತಾ ಮೇಲಿರುವ ಆಕಾಶ ವನ್ನೇ ಕೆಳಗೆ ಬೀಳುವಂತೆ ಮಾಡುತ್ತವೆಯೋ ಎಂಬಂತ್ತಿತ್ತು.
ಅಲ್ಲಲ್ಲಿ ತೀವ್ರವಾದ ದುರ್ವಾಸನೆಗಳು ಮೂಗಿಗೆ ಬಡಿಯುತ್ತಿದ್ದವು. ಆನೆಗಳ ಮದೋದಕ, ಸತ್ತಿರುವವರ ಶರೀರದಿಂದ ಹೊರಬಿದ್ದಿರುವ ಮೇದಸ್ಸು, ಕೊಬ್ಬು ಮುಂತಾದವುಗಳ ದುರ್ಗಂಧ ಮೂಗಿನ ರಂಧ್ರಗಳನ್ನು ಹೊಕ್ಕು ಮೂಗನ್ನು ಆರ್ದ್ರೊಳಿಸುವಷ್ಟು ತೀವ್ರವಾಗಿದ್ದವು. ಮೇಲ್ಮುಖವಾಗಿ ಬಿದ್ದಿರುವ ಅರ್ಧ ಸತ್ತಿರುವ ಆನೆ-ಕುದುರೆಗಳ ಕೆಳಗೆ ಸಿಲುಕಿಕೊಂಡಿರುವ ಅರ್ಧ ಸತ್ತಿರುವ ಮನುಷ್ಯರು ಪೂರ್ತಿ ಸಾಯುತ್ತಿದ್ದರು. ಯುದ್ಧದ ಸಂದರ್ಭದಲ್ಲಿ ಧ್ವನಿಗಯ್ಯಲು ತಂದಿಟ್ಟಿರುವ ದುಂದುಭಿಗಳಿಗೆ ಹರಿಯುತ್ತಿರುವ ರಕ್ತದ ನದಿಗಳ ಅಲೆಗಳು ಹೋಗಿ ತಾಗಿವೆ. ಸತ್ತ ಆನೆ-ಕುದುರೆಗಳೆಂಬ ಮೊಸಳೆಗಳು ಹರಿಯುತ್ತಿರುವ ರಕ್ತ ಪ್ರವಾಹವೆಂಬ ನದಿಯಲ್ಲಿ ಬರುತ್ತಿರುವ ದೃಶ್ಯವು ಯುದ್ಧರಂಗದ ನೂರಾರು ಕಡೆಗಳಲ್ಲಿ ಕಂಡುಬರುತ್ತಿತ್ತು.’
‘ಒಂದೆಡೆ ಸಾಯುತ್ತಿರುವ ದೊಡ್ಡ ಆನೆ ಬಿದ್ದು ಒದ್ದಾಡುತ್ತಿರುವಾಗಲೇ ತನ್ನ ಸೊಂಡಿಲನ್ನು ಮೇಲೆ ಎತ್ತಿ ಒಂದು ಕಬಂಧವನ್ನು ಸುತ್ತಿಕೊಂಡಿದೆ. ಇನ್ನೊಂದು ಕಡೆ ತನ್ನನ್ನು ನಿಯಂತ್ರಿಸುವ ಸವಾರರು ಬಿದ್ದಿರುವುದರಿಂದ ನಿಯಂತ್ರಣವಿಲ್ಲದ ಆನೆ-ಕುದುರೆಗಳು ಎದುರಿಗೆ ಸಿಕ್ಕ ಎತ್ತರದ ಕಬಂಧಗಳನ್ನು ತಳ್ಳಿ ಭೂಮಿಗೆ ಬೀಳಿಸಿವೆ. (ತಲೆ ಕತ್ತರಿಸಲ್ಪಟ್ಟ ಸೈನಿಕರ ದೇಹಗಳು ಪ್ರಾಣೋತ್ಕ›ಮಣದ ಸಂಕಟದಿಂದ ತೂರಾಡುತ್ತಾ ಬರುತ್ತಿರುವಾಗ ಅವುಗಳನ್ನು ಎದುರಿಗೆ ಸಿಕ್ಕ ಈ ಆನೆ-ಕುದುರೆಗಳು ದೂಡಿ ಕೆಳಕ್ಕೆ ಬೀಳಿಸಿವೆ.) ಅಲ್ಲಲ್ಲಿ ಕೂಗುತ್ತಾ ಆಕ್ರಂದನ ಮಾಡುತ್ತಾ ಸತ್ತು ಬೀಳುತ್ತಿರುವ ಶರೀರಗಳಿಂದಾಗಿ ರಕ್ತನದಿಯು ಮೇಲಕ್ಕೆ ಚಿಮ್ಮುತ್ತಿತ್ತು. ಇವೆಲ್ಲಕ್ಕಿಂತಲೂ ಇನ್ನೂ ಹೆಚ್ಚು ಕರುಣಾಜನಕ ದೃಶ್ಯವೇನೆಂದರೆ, ಕೆಲವು ಕಡೆಗಳಲ್ಲಿ ಸತ್ತಿರುವ ಪತಿಯ ಕುತ್ತಿಗೆಯನ್ನು ಅಪ್ಪಿಕೊಂಡು ಬಿದ್ದಿರುವ ಕುಲಾಂಗನೆಯರು ಅದೇ ಸ್ಥಿತಿಯಲ್ಲಿರುವಾಗಲೇ ಆಗಿರುವ ಶಸ್ತ್ರಾಘಾತದಿಂದ ಮರಣ ಹೊಂದಿದ್ದಾರೆ. (ಶ್ರೇಷ್ಠ ಕ್ಷತ್ರಿಯಕುಲದ ಮಹಿಳೆಯರು ಮೃತನಾದ ಪತಿಯೊಂದಿಗೆ ಸಹಗಮನ ಮಾಡುವ ಪದ್ಧತಿ ಹಿಂದಿನ ಕಾಲದಲ್ಲಿ ಇರುತ್ತಿತ್ತು. ಶಸ್ತ್ರಗಳಿಂದ ತನ್ನನ್ನೇ ತಾನು ಸಾಯಿಸಿಕೊಳ್ಳುವ ಮೂಲಕ ಸಹಗಮನ ಮಾಡುವುದು ಶಾಸ್ತ್ರದಲ್ಲಿ ಕಂಡುಬರುವುದಿಲ್ಲ. ಆದ್ದರಿಂದ ಇಲ್ಲಿ ಮೃತನಾದ ಪತಿಯನ್ನು ಹಿಡಿದುಕೊಂಡಿರುವಾಗಲೇ ಆಗಿರುವ ಬೇರೆ ಸೈನಿಕರ ಶಸ್ತ್ರ ಪ್ರಯೋಗದಿಂದ ಆ ಮಹಿಳೆಯರು ಸತ್ತಿರುವುದು ಗಮನಾರ್ಹ. ಪ್ರಾಚೀನ ಕಾಲದ ಕ್ಷತ್ರಿಯ ಸ್ತ್ರೀಯರ ದೃಷ್ಟಿಯಲ್ಲಿ ಇದು ಶ್ರೇಷ್ಠವಾದ ಮರಣ).
(ಪ್ರತಿಕ್ರಿಯಿಸಿ: vvsudina@gmail.com, info.swarnavalli@gmail.com)