ಪ್ರಸಾದ್ ಅಗಲಿಕೆಯಿಂದ ರಾಜ್ಯದ ದಲಿತ ಸೂರ್ಯ ಮುಳುಗಿದೆ

IMG_20240430_124621060
ತಿ.ನರಸೀಪುರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬೋದಿರತ್ನ ಬಂತೇಜಿ, ಸೋಸಲೆ ಮಹಾದೇವಸ್ವಾಮಿ, ಆಲಗೂಡು ಶಿವಕುಮಾರ್, ಶಶಿಕಾಂತ್, ಪುರಸಭಾ ಸದಸ್ಯ ಪ್ರಕಾಶ್, ಮೂಗೂರು ಎಂ.ಕೆ.ಸಿದ್ದರಾಜು, ಗ್ರಾಪಂ ಸದಸ್ಯ ಕಲಿಯೂರು ಶಿವಣ್ಣ ಇತರಿದ್ದರು.
Published on

ತಿ.ನರಸೀಪುರ: ಶ್ರೀನಿವಾಸಪ್ರಸಾದ್ ಅವರ ಅಗಲಿಕೆಯಿಂದ ರಾಜ್ಯದ ದಲಿತ ಸೂರ್ಯ ಮುಳುಗಿದಂತಾಗಿದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ಸಂಘದ ಅಧ್ಯಕ್ಷ ಕರೋಹಟ್ಟಿ ಮಹದೇವಯ್ಯ ಹೇಳಿದರು.

ಸಂಸದ ವಿ.ಶ್ರೀನಿವಾಸಪ್ರಸಾದ್ ಅವರ ನಿಧನರಾದ ಹಿನ್ನೆಲೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ಸಂಘದ ವತಿಯಿಂದ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

ಪ್ರಸಾದ್ ಅವರ ನಿಧನದ ಸುದ್ದಿ ಅತೀವ ದುಃಖ ತರಿಸಿದೆ. ಬುದ್ಧ ಹಾಗೂ ಅಂಬೇಡ್ಕರ್ ಅವರ ತತ್ವಗಳನ್ನು ಅಳವಡಿಸಿಕೊಂಡ ಒಬ್ಬ ಮುತ್ಸದಿ ನಾಯಕರಾಗಿ ರಾಜ್ಯದಲ್ಲಿ ಗುರುತಿಸಿಕೊಂಡಿದ್ದರು. ದಲಿತ-ದಮನಿತರ ಪರವಾದ ದಿಟ್ಟ ದನಿ ಮತ್ತು ಅನ್ಯಾಯ-ಅಸಮಾನತೆಯ ವಿರುದ್ಧದ ಹೋರಾಟವನ್ನೇ ಬದುಕಾಗಿಸಿಕೊಂಡಿದ್ದ ಅವರ ಅಗಲಿಕೆ ರಾಜ್ಯದ ಸಾಮಾಜಿಕ ನ್ಯಾಯದ ಪರವಾದ ರಾಜಕೀಯ ಹೋರಾಟಕ್ಕೆ ದೊಡ್ಡ ಹಿನ್ನಡೆಯಾಗಿದೆ. ಅವರೊಬ್ಬ ಪ್ರಗತಿಪರ ಚಿಂತನೆಯ ರಾಜಕೀಯ ನಾಯಕರಾಗಿ ದ್ದರು. ಸ್ವಾಭಿಮಾನಿ ನಾಯಕರಾಗಿದ್ದ ರವರ ಆದರ್ಶ ಹಾಗೂ ಪರಿಶುದ್ಧ ರಾಜಕಾರಣ ದೇಶಕ್ಕೆ ಮಾದರಿ ಎಂದು ತಿಳಿಸಿದರು.

ಜಿಪಂ ಮಾಜಿ ಅಧ್ಯಕ್ಷ ಎಸ್.ಎನ್.ಸಿದ್ಧಾರ್ಥ ಮಾತನಾಡಿ, ಪಕ್ಷದ ತತ್ವ, ಸಿದ್ಧಾಂತ ಹಾಗೂ ರಾಷ್ಟ್ರೀಯವಾದದ ಸತ್ವವನ್ನು ಜನರಿಗೆ ತಿಳಿಸುವಲ್ಲಿ ನಾಯಕತ್ವ ವಹಿಸಿದ್ದ ಪ್ರಸಾದ್ ಅವರು ಸಾಮಾಜಿಕ ನ್ಯಾಯ ಹಾಗೂ ಸಂವಿಧಾನ ಮೌಲ್ಯವನ್ನು ಎತ್ತಿ ಹಿಡಿಯುವ ಬದ್ಧತೆಯನ್ನು ಸಾಕ್ಷೀಕರಿಸಿದ್ದರು. ಪ್ರಸ್ತುತ ಅವರ ಅನುಪಸ್ಥಿತಿ ರಾಷ್ಟ್ರ ರಾಜಕಾರಣದಲ್ಲೂ ಕೊರತೆ ಸೃಷ್ಟಿಸಿದಂತಾಗಿದೆ. ಅವರ ಅಪ್ರತಿಮ ಹೋರಾಟ ದಲಿತರು ಹಾಗೂ ತುಳಿತಕ್ಕೊಳಗಾದವರ ಪರವಾಗಿ ಅವರ ದ್ವನಿ ಸುದೀರ್ಘ 50 ವರ್ಷಗಳ ಕಾಲ ರಾಜಕಾರಣದಲ್ಲಿದ್ದರೂ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದ ಪ್ರಾಮಾಣಿಕ ರಾಜಕಾರಣಿಯಾಗಿದ್ದರು ಎಂದರು.

ಬೋದಿರತ್ನ ಬಂತೇಜಿ, ಸೋಸಲೆ ಮಹಾದೇವಸ್ವಾಮಿ, ಆಲಗೂಡು ಶಿವಕುಮಾರ್, ಶಶಿಕಾಂತ್, ಪುರಸಭಾ ಸದಸ್ಯ ಪ್ರಕಾಶ್, ಮೂಗೂರು ಎಂ.ಕೆ.ಸಿದ್ದರಾಜು, ಗ್ರಾಪಂ ಸದಸ್ಯ ಕಲಿಯೂರು ಶಿವಣ್ಣ, ಬಿಜೆಪಿ ಮಂಡಲ ಅಧ್ಯಕ್ಷ ಶಿವಕುಮಾರ್, ಪುರಸಭೆ ಮಾಜಿ ಸದಸ್ಯ ಎನ್.ಲೋಕೇಶ್, ತೋಟದಪ್ಪ ಬಸವರಾಜು, ಮೂಗೂರು ಕುಮಾರಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ಮಹೇಶ್, ನಂಜುಂಡಯ್ಯ, ತಾಪಂ ಮಾಜಿ ಸದಸ್ಯ ಬಸವರಾಜು, ಮಂಜುನಾಥ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net