ಪೊಲೀಸರ ಬಗ್ಗೆ ಅಪರಾಧ ಜಗತ್ತಿಗಿಲ್ಲ ಭಯ

pink
Published on

ಬೆಂಗಳೂರು: ಪೊಲೀಸರ ಬಗ್ಗೆ ಅಪರಾಧ ಜಗತ್ತಿಗೆ ಭಯ ಕಡಿಮೆಯಾಗಿದೆ. ಯಾಕೆ ಹೀಗಾಯಿತು ಎಂಬುದಕ್ಕೆ ನಿಮ್ಮನ್ನು ನೀವೇ ಪ್ರಶ್ನಿಸಿಕೊಂಡರೆ ಉತ್ತರ ಗೊತ್ತಿರುತ್ತದೆ ಎಂದು ಅಧಿಕಾರಿ, ಸಿಬ್ಬಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಮಿಕವಾಗಿ ಚಾಟಿ ಬೀಸಿದರು.

ರಾಜ್ಯ ಪೊಲೀಸ್ ಇಲಾಖೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಿದ್ದ ಪೊಲೀಸ್ ಸಿಬ್ಬಂದಿಯ ನೂತನ ಪೀಕ್ ಕ್ಯಾಪ್ ವಿತರಣೆ, ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ ಉದ್ಘಾಟನೆ ಹಾಗೂ ಸಮ್ಮಿತ್ರ ಕಾರ್ಯಯೋಜನೆ ಕೈಪಿಡಿ ಬಿಡುಗಡೆಗೊಳಿಸಿ ಮಾತನಾಡಿದರು.

ಕೇವಲ ಟೋಪಿ ಬದಲಾಯಿಸಿ ಆತ್ಮಸ್ಥೈರ್ಯ ತುಂಬಿದರೇ ಸಾಲದು. ಪ್ರಮಾಣಿಕ ಸೇವೆಯನ್ನು ನೀವು ಮಾಡಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಘರ್ಷಣೆ, ಅನೈತಿಕ ಪೊಲೀಸ್ ಗಿರಿ ಹತೋಟಿಗೆ ಬಂದಿದೆ. ಇದು ಕೇವಲ ಇಬ್ಬರು ಅಧಿಕಾರಿಗಳನ್ನು ಬದಲಾಯಿಸಿದ ಪರಿಣಾಮ. ಈ ಸಾಧನೆ ಮಾಡಿದ್ದೂ ನಮ್ಮದೇ ಅಧಿಕಾರಿಗಳು ಮತ್ತು ಸಿಬ್ಬಂದಿ. ಇವರೇನು ಬೇರೆ ಗ್ರಹದಿಂದ ಬಂದವರಲ್ಲ. ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯವಿದೆ. ಸಾಧಿಸಿ ತೋರಿಸಿ. ಕೆಲ ಅಧಿಕಾರಿಗಳು ರಿಯಲ್ ಎಸ್ಟೇಟ್ ದಂಧೆ, ಡ್ರಗ್ಸ್ ಮಾಫಿಯಾ, ಕ್ಲಬ್ ಮತ್ತು ಕ್ರಿಮಿನಲ್ಸ್‌ಗಳ ಚಲನವಲನ ಎಲ್ಲವೂ ಗೊತ್ತಿರುತ್ತದೆ. ಮಾದಕ ವಸ್ತು ಯಾವ ರಾಜ್ಯದಿಂದ ಯಾವ ಮಾರ್ಗದಲ್ಲಿ ಯಾರು ತರುತ್ತಾರೆ ಯಾರು ಮಾರಾಟ ಮಾಡುತ್ತಾರೆ ಎಲ್ಲವೂ ಆಯಾ ಡಿಸಿಪಿ/ಎಸ್‌ಪಿ, ಎಸಿಪಿ/ಡಿವೈಎಸ್‌ಪಿ ಮತ್ತು ಇನ್‌ಸ್ಪೆಕ್ಟರ್‌ಗಳಿಗೆ ಗೊತ್ತಿರುತ್ತದೆ. ಆದರೆ, ತಡೆಯುವ ಇಚ್ಛಾಶಕ್ತಿ ಇರಬೇಕು. ಕೇವಲ ಕಾಯ್ದೆ ಮಾಡಿಕೊಂಡು ಮಾದಕ ವಸ್ತು ಮುಕ್ತರಾಜ್ಯ ಮಾಡುತ್ತೇವೆ ಎಂದು ೋಷಣೆ ಮಾಡಿದರೇ ಸಾಕಾಗುವುದಿಲ್ಲ. ಅದನ್ನು ಅನುಷ್ಠಾನ ಮಾಡಬೇಕು ಎಂದರು.

ಪೊಲೀಸ್ ಇಲಾಖೆ ಸರ್ಕಾರದ ಕೈಗನ್ನಡಿ. ನೀವು ಒಳ್ಳೆಯ ಕೆಲಸ ಮಾಡಿದರೇ ಸರ್ಕಾರಕ್ಕೂ ಒಳ್ಳೆಯ ಹೆಸರು ಬರಲಿದೆ. ಡ್ರಗ್ಸ್ ಮುಕ್ತ ಕರ್ನಾಟಕ ಮಾಡಿದರೇ ರಾಜ್ಯದ ಜನತೆ ಪೊಲೀಸರಿಗೆ ಕೃತಜ್ಞತೆ ಸಲ್ಲಿಸುತ್ತಾರೆ. 1956ರಿಂದ ಜಾರಿಯಲ್ಲಿದ್ದ ಕ್ಯಾಪ್ ಬದಲಾಯಿಸಿ ಪೀಕ್ ಕ್ಯಾಪ್ ಆಯ್ಕೆ ಮಾಡಿದ್ದು ನಾನೇ. ಕೇವಲ ಕ್ಯಾಪ್ ಬದಲಾಗುವುದಲ್ಲ. ನಿಮ್ಮ ಕಾರ್ಯಕ್ಷಮತೆಯೂ ಬದಲಾಗಲಿ. ಇಂಡಿಯಾ ಜಸ್ಟೀಸ್ ವರದಿಯಲ್ಲಿ ರಾಜ್ಯ ಪೊಲೀಸ್ ಪ್ರಥಮ ಸ್ಥಾನದಲ್ಲಿದೆ ಎನ್ನುವ ವರದಿ ರಾಜ್ಯದ ಘನತೆ ಹೆಚ್ಚಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೇಸರಿ ಶಾಲಿಗೆ ಎಚ್ಚರಿಕೆ

ಕಳೆದ ಸರ್ಕಾರದ ಅವಧಿಯಲ್ಲಿ ಆಯಧಪೂಜೆ ವೇಳೆ ವಿಜಯಪುರ, ಉಡುಪಿಯಲ್ಲಿ ಸಮವಸ್ತ್ರ ತೆಗೆದು ಪೊಲೀಸರು ಕೇಸರಿ ವಸ್ತ್ರ ಧರಿಸಿದ್ದರು. ರಾಜಕೀಯ ಒತ್ತಡ ಅಥವಾ ಬೇರೆಯವರನ್ನು ಮೆಚ್ಚಿಸಲು ಮಾಡಿದರೆ ನಿಮ್ಮನ್ನು ನೀವು ಮಾರಿಕೊಂಡಂತೆ. ರಾಜಕೀಯ ಹಿಂಬಾಲಕರಾದರೆ ನಿಮ್ಮನ್ನು ಯಾರು ನಂಬುತ್ತಾರೆ? ಹೀಗಾಗಿ ಇಂತಹ ಪದ್ಧತಿಗೆ ಅವಕಾಶ ಕೊಡಬೇಡಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಲಹೆ ನೀಡಿದರು.

ಬೆಂಗಳೂರಿನಲ್ಲಿ 1.40 ಕೋಟಿ ಜನರಿದ್ದಾರೆ. 1.23 ಕೋಟಿ ವಾಹನಗಳಿವೆ. ಎಷ್ಟೇ ಪ್ರಯತ್ನಪಟ್ಟರೂ ಜನ ಸಾರ್ವಜನಿಕ ಸಾರಿಗೆಗಿಂತ ವೈಯಕ್ತಿಕ ಸಾರಿಗೆ ಮೇಲೆ ಆಸಕ್ತಿ ಹೊಂದಿದ್ದಾರೆ. ಈ ಪರಿಸ್ಥಿತಿಯಲ್ಲಿ ರಸ್ತೆ ಅಗಲೀಕರಣ ಕಷ್ಟವಾಗಿದೆ. ವಾಹನ ಸಂಚಾರ ನಿರ್ವಹಣೆಯಲ್ಲಿ ತಜ್ಞರಾದ ಡಿಜಿ-ಐಜಿಪಿ ಡಾ.ಎಂ.ಎ. ಸಲೀಂ, ಎಐ ತಂತ್ರಜ್ಞಾನ ಬಳಸಿಕೊಂಡು ಯೋಜನೆ ರೂಪಿಸಿ ಸರ್ಕಾರಕ್ಕೆ ಸಲ್ಲಿಸಲಿ ಎಂದರು.

ವಾರದಲ್ಲಿ ಅಧಿಸೂಚನೆ

ಪೊಲೀಸ್ ಇಲಾಖೆ ಶಿಸ್ತಿನ ಇಲಾಖೆ. ರಾಜ್ಯದ ಕಣ್ಣು. ಯಾವುದೇ ಸರ್ಕಾರಕ್ಕೆ ಕೀರ್ತಿ ಬರಬೇಕಾದರೆ ಪೊಲೀಸ್ ಇಲಾಖೆಯಿಂದ ಸಾಧ್ಯ. ಶಾಂತಿ, ಸುವ್ಯವಸ್ಥೆ ಕಾಪಾಡುವುದು ಸರ್ಕಾರಕ್ಕೆ ನೇರವಾಗಿ ತಲುಪುತ್ತದೆ. ನಾವು ಬರೀ ಕ್ಯಾಪ್ ಬದಲಾಯಿಸಿಲ್ಲ. ನಿಮ್ಮಲ್ಲಿ ಆತ್ಮಸ್ಥೈರ್ಯ ತುಂಬುವ ಪ್ರಯತ್ನ ಮಾಡಿದ್ದೇವೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದರು.

ಪೇದೆ, ಪಿಎಸ್‌ಐ ನೇಮಕಾತಿಗೆ ಮುಖ್ಯಮಂತ್ರಿಗಳು ಅನುಮತಿ ಕೊಟ್ಟಿದ್ದಾರೆ. ಕೆಎಸ್‌ಆರ್‌ಪಿ, ಸಿಎಆರ್, ಸಿವಿಲ್ ಸೇರಿ 16 ಸಾವಿರ ಕಾನ್‌ಸ್ಟೆಬಲ್ ಹುದ್ದೆಗಳು ಖಾಲಿ ಇವೆ. 8500 ಹುದ್ದೆಗಳನ್ನು ಭರ್ತಿಗೆ ವಾರದಲ್ಲಿ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ಪರಮೇಶ್ವರ್ ಹೇಳಿದರು. ಪೊಲೀಸ್ ಗೃಹ ಯೋಜನೆಗೆ ಸಾವಿರಾರು ಕೋಟಿ ರೂ. ಅನುದಾನ ನೀಡಿದ್ದಾರೆ ಎಂದು ಗೃಹ ಸಚಿವರು ಮಾಹಿತಿ ನೀಡಿದರು.

70 ವರ್ಷದ ಬಳಿಕ ಶೇ.80 ಪೊಲೀಸ್ ಸಿಬ್ಬಂದಿಯ ಬೇಡಿಕೆ ಈಡೇರಿದೆ. ಇಲಾಖೆಗೆ ಪದವಿ, ಸ್ನಾತಕೋತ್ತರ ಪದವಿಧರರು ಸೇರ್ಪಡೆ ಆಗುತ್ತಿದ್ದು, ಅವರ ಗೌರವ ಹೆಚ್ಚಿಸುವ ಕೆಲಸವಾಗಿದೆ.

ಡಾ.ಎಂ. ಎ. ಸಲೀಂ-ಡಿಜಿ-ಐಜಿಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net