

ಮುಂಡಗೋಡ: ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದ ದಂಪತಿಯ ಮನವೊಲಿಸಿದ ನ್ಯಾಯಾಧೀಶರು ಶನಿವಾರ ಒಂದು ಮಾಡಿದ್ದಾರೆ.
ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮವನ್ನು ಶನಿವಾರ ನ್ಯಾಯಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕೆಲ ತಿಂಗಳ ಹಿಂದೆ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದ ಸಿರೇನಾ ಬೆಂಡಿಗೇರಿ ಪತಿ ಮೌಲಾಸಾಬ ಬೆಂಡಿಗೇರಿ ಎಂಬುವರಿಂದ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣ ವಿಚಾರಣೆ ನಡೆಯುತ್ತಿತ್ತು
ಲೋಕ ಅದಾಲತ್ನಲ್ಲಿ ನ್ಯಾಯಾಧೀಶೆ ಅಕ್ಷತಾ ಸಿ.ಆರ್. ದಂಪತಿಯನ್ನು ಒಂದು ಮಾಡಿದ್ದಾರೆ. ಅರ್ಜಿದಾರರ ಪರವಾಗಿ ವಕೀಲ ಕೆ.ಎನ್. ಹೆಗಡೆ, ಎದುರುದಾರ ವಕೀಲ ಎಂ.ಎ. ನಂದಿಗಟ್ಟಿ, ಸರ್ಕಾರಿ ಅಭಿಯೋಜಕ ಪ್ರಸಾದ ಹೆಗಡೆ, ನ್ಯಾಯಕೇತರ ಸಂಧಾನಕಾರ ನಾರಾಯಣ ಸಣ್ಣಳ್ಳಿಮನೆ ಉಪಸ್ಥಿತರಿದ್ದರು.
236ಪ್ರಕರಣ ಇತ್ಯರ್ಥ: ಎರಡು ಪ್ರಕರಣಗಳಲ್ಲಿ ವ್ಯಕ್ತಿ ಹಾಗೂ ಆರೋಪಿತರ ನಡುವೆ ರಾಜಿ ಸಂಧಾನ ನಡೆದ ಪರಿಣಾಮ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಮುಕ್ತಾಯಗೊಳಿಸಲಾಯಿತು. 24 ಚೆಕ್ ಬೌನ್ಸ ಪ್ರಕರಣ, 10 ಮೂಲ ದಾವಾ ಪ್ರಕರಣ, 17ಅಮಲ ಜಾರಿ ಪ್ರಕಟಣೆಗಳು, ಮೂರು ಕ್ರಿಮಿನಲ್ ಮಿಸಿಲೇನಿಯಸ್ ಪ್ರಕರಣಗಳು, 39 ಜನನ, 105 ಕೆಪಿ ಆಕ್ಟ್ ಹಾಗೂ ಎಂಟು ಇತರೆ ಕ್ರಿಮಿನಲ್ ಪ್ರಕರಣಗಳು, 31 ವ್ಯಾಜ್ಯ ಪೂರ್ವ ಸೇರಿ ಒಟ್ಟು 236ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಯಿತು.