ಲೋಕ ಅದಾಲತ್‌ನಲ್ಲಿ ಮತ್ತೆ ಒಂದಾದ ದಂಪತಿ

15 dec tnp 01
ತಿ.ನರಸೀಪುರ ನ್ಯಾಯಾಲಯದಲ್ಲಿ ನ್ಯಾಯಾಧೀಶರ ಮನವೊಲಿಕೆಯಿಂದ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದ ದಂಪತಿ ಮತ್ತೆ ಒಂದಾಗಿ ಹಾರ ಬದಲಿಸಿಕೊಂಡರು. ಹನುಮಂತು, ಕೆ.ಎನ್.ವೆಂಕಟೇಶ್, ತೊಟ್ಟವಾಡಿ ಮಹದೇವಸ್ವಾಮಿ, ಶಾಂತರಾಜು, ಪಾಲಾಕ್ಷಮೂರ್ತಿ, ಸಿದ್ದಪ್ಪಾಜಿ, ಮೂಗೂರು ರಮೇಶ್, ಕೆ.ಎಸ್.ಶಂಭುಲಿಂಗಸ್ವಾಮಿ ಇತರರು ಇದ್ದರು.
Published on

ತಿ.ನರಸೀಪುರ: ದಾಂಪತ್ಯ ಕಲಹದಿಂದ ವಿಚ್ಛೇದನ ಕೋರಿ ಪಟ್ಟಣದ ಜೆಎಂಎಫ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದ ದಂಪತಿ ಶನಿವಾರ ಆಯೋಜಿಸಿದ್ದ ಲೋಕ ಅದಾಲತ್‌ನಲ್ಲಿ ನ್ಯಾಯಾಧೀಶರ ಮನವೊಲಿಕೆಯಿಂದ ಮತ್ತೆ ಒಂದಾದರು.

ತಾಲೂಕಿನ ಮೂಗೂರು ಗ್ರಾಮದ ಅನುಷಾ ಹಾಗೂ ಕಗ್ಗಲೀಪುರ ಗ್ರಾಮದ ಶಿವಕುಮಾರ್ ಅವರು 2018ರಲ್ಲಿ ವಿವಾಹವಾಗಿದ್ದರು. ಮದುವೆ ಆಗಿ ಎರಡು ವರ್ಷ ಕಳೆಯುತಿದ್ದಂತೆ ಕೌಟುಂಬಿಕ ಕಲಹದಿಂದ ವಿಚ್ಛೇದನ ಕೋರಿ ತಮ್ಮ ಪರ ವಕೀಲರ ಮೂಲಕ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ, ಕಾನೂನು ಹೋರಾಟ ನಡೆಸಿದ್ದರು.

ಇಬ್ಬರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಹನುಮಂತು ಅವರು ಲೋಕ ಅದಾಲತ್‌ನಲ್ಲಿ ಜೀವನದ ಮಹತ್ವ ಕುರಿತು ಹಿತವಚನ ನೀಡಿ ಭವಿಷ್ಯದ ದೃಷ್ಟಿಯಿಂದ ಒಂದಾಗಿ ಬಾಳ್ವೆ ನಡೆಸುವಂತೆ ಕಿವಿಮಾತು ಹೇಳಿದರು. ನ್ಯಾಯಾಧೀಶರ ಮನವೊಲಿಕೆಗೆ ಒಪ್ಪಿದ ಅನುಷಾ ಮತ್ತು ಶಿವಕುಮಾರ್ ವಿಚ್ಛೇದನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹಿಂದಕ್ಕೆ ಪಡೆದು ಒಂದಾಗಿ ಬಾಳ್ವೆ ನಡೆಸುವುದಾಗಿ ನ್ಯಾಯಾಧೀಶರಿಗೆ ವಾಗ್ದಾನ ನೀಡಿದರು.

ನಂತರ ನ್ಯಾಯಾಲಯದ ಸಭಾಂಗಣದಲ್ಲಿ ವಕೀಲರ ಸಂಘದ ತಾಲೂಕು ಅಧ್ಯಕ್ಷ ತೊಟ್ಟವಾಡಿ ಮಹದೇವಸ್ವಾಮಿ, ಉಪಾಧ್ಯಕ್ಷ ಶಾಂತರಾಜು ಹಾಗೂ ವಕೀಲರ ಸಮ್ಮುಖದಲ್ಲಿ ದಂಪತಿ ಮುಂದಿನ ಜೀವನಕ್ಕೆ ಸಮ್ಮತಿಸಿ ಪರಸ್ಪರ ಮಾಲಾರ್ಪಣೆ ಮಾಡಿಕೊಂಡು ನ್ಯಾಯಾಧೀಶರ ಆಶೀರ್ವಾದದೊಂದಿಗೆ ನ್ಯಾಯಾಲಯದಿಂದ ಹಸನ್ಮುಖಿಗಳಾಗಿ ನಿರ್ಗಮಿಸಿದರು.

ದಂಪತಿ ಪರ ಸಿದ್ದಪ್ಪಾಜಿ, ಮೂಗೂರು ರಮೇಶ್ ವಕಾಲತ್ತು ವಹಿಸಿದ್ದರು. ಸಂಧಾನ ಪ್ರಕ್ರಿಯೆಯನ್ನು ಕೆ.ಎಸ್.ಶಂಭುಲಿಂಗಸ್ವಾಮಿ ವಹಿಸಿದ್ದರು. ನ್ಯಾಯಾಧೀಶರಾದ ಕೆ.ಎನ್.ವೆಂಕಟೇಶ್, ವಕೀಲರ ಸಂಘದ ಮಾಜಿ ಅಧ್ಯಕ್ಷ ಪಾಲಾಕ್ಷ ಮೂರ್ತಿ, ವಕೀಲರಾದ ಮಂಜುನಾಥ್, ರಂಗಯ್ಯ, ಶ್ರೀನಿಧಿ, ರಂಗಸ್ವಾಮಿ, ಉಮೇಶ್, ಮಾದಪ್ಪ, ನಂಜಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net