ಚುನಾವಣೆ ವೆಚ್ಚ ಭಾರಿ ದುಬಾರಿ!; ಸಣ್ಣ ದೇಶಗಳ ಒಟ್ಟೂ ಆರ್ಥಿಕತೆಗೆ ಸಮ

Trump
Published on

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಖರ್ಚಾಗುವ ಮೊತ್ತ ಕೆಲವು ಸಣ್ಣ ರಾಷ್ಟ್ರಗಳ ಬಜೆಟ್​ಗೆ ಸಮವಾಗಿರುತ್ತದೆ ಎಂದರೆ ಅತಿಶಯೋಕ್ತಿಯಲ್ಲ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು ಮತ್ತು ಸ್ವತಂತ್ರ ಪ್ರಚಾರಕರು ಅಧ್ಯಕ್ಷೀಯ ಚುನಾವಣೆಯಲ್ಲಿ ಸಾಕಷ್ಟು ಹಣ ಖರ್ಚು ಮಾಡುತ್ತಾರೆ. ಅಧ್ಯಕ್ಷೀಯ ಚುನಾವಣೆಯ ಹಣದ ಮೂಲ ಯಾವುದು? ದೇಣಿಗೆ ಸಂಗ್ರಹ ಹೇಗೆ? ಎಂಬ ಸಂಕ್ಷಿಪ್ತ ವಿವರ ಇಲ್ಲಿದೆ.

80.7 ಸಾವಿರ ಕೋಟಿ ರೂ. ವೆಚ್ಚ

ಈ ಬಾರಿಯ ಚುನಾವಣೆಯ ವೆಚ್ಚ 11 ಬಿಲಿಯನ್ ಡಾಲರ್ (  80.7 ಸಾವಿರ ಕೋಟಿ ರೂ.) ಎಂದು ಅಂದಾಜಿಸಲಾಗಿದೆ. ಇದು ಹಿಂದಿನ ಎಲ್ಲ ಚುನಾವಣೆಗಳ ದಾಖಲೆಯನ್ನು ಮೀರಿಸಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ. ಈ ಮೊತ್ತವು ಈಕ್ವಟೋರಿಯಲ್ ಗಿನಿ ಮತ್ತು ಛಾಡ್ ದೇಶಗಳ ಆರ್ಥಿಕತೆಗೆ ಸಮವಾಗಿದೆ. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಮರುಆಯ್ಕೆ ಬಯಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸೆಪ್ಟೆಂಬರ್ ಅಂತ್ಯಕ್ಕೆ ಮಾಡಿದ ವೆಚ್ಚ 362.50 ಮಿಲಿಯನ್ ಡಾಲರ್ ( 2,662 ಕೋಟಿ ರೂ.) ಎನ್ನಲಾಗಿದೆ. ಡೊನಾಲ್ಡ್ ಟ್ರಂಪ್ ಪರವಾಗಿ 1.33 ಬಿಲಿಯನ್ ಡಾಲರ್ ( 9.7 ಸಾವಿರ ಕೋಟಿ ರೂ.) ದೇಣಿಗೆ ಶೇಖರವಾಗಿದೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಮಾಜಿ ಉಪಾಧ್ಯಕ್ಷ ಜೋ ಬಿಡೆನ್ 352.40 ಮಿಲಿಯನ್ ಡಾಲರ್ ( 2,588 ಕೋಟಿ ರೂ.) ಖರ್ಚು ಮಾಡಿದ್ದಾರೆ. ಡೆಮಾಕ್ರಟಿಕ್ ಪಕ್ಷದ ದೇಣಿಗೆ ಸಂಗ್ರಹ 1.50 ಬಿಲಿಯನ್ ಡಾಲರ್ (11 ಸಾವಿರ ಕೋಟಿ ರೂ.).

ದೇಣಿಗೆ ಮೂಲ ಸೂಪರ್ ಪ್ಯಾಕ್ಸ್

ಅಧ್ಯಕ್ಷೀಯ ಚುನಾವಣೆಗೆ ಸಾಂಪ್ರದಾಯಿಕ (ಜನರಿಂದ, ರಾಜಕೀಯ ಪಕ್ಷಗಳ ವಿವಿಧ ಸಮಿತಿಗಳ ಮೂಲಗಳ ನೆರವು) ಹಾಗೂ ಅಸಾಂಪ್ರದಾಯಿಕ (ಕಾರ್ಪೋರೇಟ್ ಕಂಪನಿ, ಕಾರ್ವಿುಕರ ಒಕ್ಕೂಟ) ಮೂಲಗಳಿಂದ ದೇಣಿಗೆ ಹರಿದುಬರುತ್ತವೆ. ಅಸಾಂಪ್ರದಾಯಿಕ ಮೂಲಗಳ ದೇಣಿಗೆಯನ್ನು ‘ಸೂಪರ್ ಪ್ಯಾಕ್ಸ್’ ಎಂದೂ ಕರೆಯುತ್ತಾರೆ. ಇಂತಹ ದೇಣಿಗೆ ನೇರವಾಗಿ ಅಭ್ಯರ್ಥಿಗೆ ಬರುವುದಿಲ್ಲ. ಬೇರೆ ಬೇರೆ ಶೀರ್ಷಿಕೆಯಡಿ ವೆಬ್​ಸೈಟ್​ಗಳ ಮೂಲಕ ಸಂಗ್ರಹವಾಗುತ್ತದೆ. ಅನಿಯಂತ್ರಿತವಾಗಿ ದೇಣಿಗೆ ಹರಿದುಬರುವುದನ್ನು ನಿಯಂತ್ರಿಸಲು ಕಾನೂನು ಅಗತ್ಯವೆಂದು 2010ರಲ್ಲಿ ಕೋರ್ಟ್ ಹೇಳಿದ ನಂತರ ಅಭ್ಯರ್ಥಿಗಳು ದೇಣಿಗೆ ವಿಷಯದಲ್ಲಿ ಬಹಳ ಜಾಗರೂಕರಾಗಿದ್ದಾರೆ. ಗುಂಪು ಅಥವಾ ವೈಯಕ್ತಿಕವಾಗಿ ಕೆಲವರು ಸ್ವತಂತ್ರವಾಗಿ ಪ್ರಚಾರ ಕಾರ್ಯ ನಡೆಸುತ್ತಾರೆ. ಇದಕ್ಕೆ ಅವರದ್ದೇ ಸಂಪನ್ಮೂಲ ಇರುತ್ತದೆ. ಸಣ್ಣ ಪ್ರಮಾಣದಿಂದ ಬೃಹತ್ ಪ್ರಮಾಣದವರೆಗೂ ದೇಣಿಗೆ ಹರಿದುಬರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net