

ಮದ್ದೂರು: ಕರೊನಾ ಪರೀಕ್ಷೆ ಮಾಡಿಸದೆ ಬೆಂಗಳೂರಿನಿಂದ ತಂದ ಮಹಿಳೆಯ ಶವವನ್ನು ಬುಧವಾರ ತಾಲೂಕು ಆಡಳಿತ ವಾಪಸ್ ಕಳುಹಿಸಿತು. ಕೆ.ಕೋಡಿಹಳ್ಳಿಯ ಗ್ರಾಮದ ಈರೇಗೌಡರ ಪತ್ನಿ ಇಂದುಮತಿ (60) ಅವರನ್ನು ಜಾಂಡೀಸ್ ಸಮಸ್ಯೆ ಹಿನ್ನೆಲೆ ಬೆಂಗಳೂರಿನ ಚಾಮರಾಜಪೇಟೆಯ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಮೃತಪಟ್ಟಿದ್ದರು. ಕುಟುಂಬಸ್ಥರು ಸಂಜೆ 4 ಗಂಟೆಯಲ್ಲಿ ಶವವನ್ನು ಗ್ರಾಮಕ್ಕೆ ತರುವ ಸಂದರ್ಭ ನಿಡಘಟ್ಟ ಚೆಕ್ಪೋಸ್ಟ್ ಬಳಿ ತಡೆದ ಅಧಿಕಾರಿಗಳು, ಕರೊನಾ ಪರೀಕ್ಷೆ ಮಾಡಿಸದ ಕಾರಣ ವಾಪಸ್ ಕಳುಹಿಸಿದರು. ನಂತರ ಶವವನ್ನು ವಾಹನದ ಮೂಲಕ ಚನ್ನಪಟ್ಟಣಕ್ಕೆ ತೆಗೆದುಕೊಂಡು ಹೋಗಿ ಅಧಿಕಾರಿಗಳ ಕಣ್ತಪ್ಪಿಸಿ ಹಳ್ಳಿಗಳ ಮೂಲಕ ಗ್ರಾಮವನ್ನು ತಲುಪಿ, ಅಂತ್ಯಸಂಸ್ಕಾರ ಮಾಡಲು ಮುಂದಾಗಿದ್ದರು. ವಿಷಯ ತಿಳಿದ ತಾಲೂಕು ಆಡಳಿತ ಸ್ಥಳಕ್ಕೆ ಆಗಮಿಸಿ ಶವ ಸಂಸ್ಕಾರಕ್ಕೆ ಅವಕಾಶ ಮಾಡಿಕೊಡದೆ, ಶವವನ್ನು ರಾಮನಗರ ಜಿಲ್ಲೆಯಿಂದ ಹೊರಗೆ ಕಳುಹಿಸಿದ್ದಾರೆ.