ಆತಂಕಕಕ್ಕೆ ಕಾರಣವಾಗಿದ್ದ ಕುಕ್ಕರ್ ಸ್ಫೋಟ ಪ್ರಕರಣ

Crime Logo
Published on

ಬೆಂಗಳೂರು: ಕುಕ್ಕರ್ ಸ್ಫೋಟಗೊಂಡು, ಶಾರ್ಟ್ ಸರ್ಕಿಟ್ ಉಂಟಾಗಿ ಬೆಂಕಿ ಹೊತ್ತಿಕೊಂಡ ಇಬ್ಬರು ಗಾಯಗೊಂಡಿದ್ದ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಘಟನಾ ಸ್ಥಳಕ್ಕೆ ರಾಷ್ಟ್ರೀಯ ತನಿಖಾ ದಳ(ಎನ್‌ಐಎ), ಆಂತರಿಕಾ ಭದ್ರತಾ ವಿಭಾಗ(ಐಎಸ್‌ಡಿ), ನಗರ ಭಯೋತ್ಫಾದನಾ ನಿಗ್ರಹ ದಳ(ಎಟಿಎಸ್), ರಾಜ್ಯ ಗುಪ್ತಚರ ದಳ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ವೇಳೆ ಘಟನಾ ಸ್ಥಳದಲ್ಲಿ ಯಾವುದೇ ಸ್ಫೋಟಕ ವಸ್ತುಗಳಾಗಲಿ, ರಾಸಾಯನಿಕ ವಸ್ತುಗಳಾಗಲಿ ಪತ್ತೆಯಾಗಿಲ್ಲ. ಯಾವುದೇ ಭಯೋತ್ಫಾದನಾ ಚಟುವಟಿಕೆ ಅಲ್ಲ. ಅಡುಗೆ ಮಾಡುವಾಗ ನಿರ್ಲಕ್ಷ್ಯದಿಂದ ಉಂಟಾದ ಕುಕ್ಕರ್ ಸ್ಫೋಟ ಎಂಬುದು ತನಿಖಾ ಸಂಸ್ಥೆಗಳು ಸ್ಥಳೀಯ ಪೊಲೀಸರಿಗೆ ವರದಿ ನೀಡಿದ್ದಾರೆ.
ಮತ್ತೊಂದೆಡೆ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಯುವಕರ ಪೈಕಿ ಮೋಸಿನ್(೨೫)ಎಂಬಾತ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮಧ್ಯಾಹ್ನ ಮೃತಪಟ್ಟಿದ್ದಾನೆ. ಮತ್ತೊಬ್ಬ ಗಾಯಾಳು ಖಾದರ್ ಖಾನ್(೨೬)ಗೆ ಶೇ.೪೦ರಷ್ಟು ಸುಟ್ಟ ಗಾಯಗಳಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು ಆರೇಳು ವರ್ಷಗಳ ಹಿಂದೆಯೇ ದೆಹಲಿಯಿಂದ ಬೆಂಗಳೂರಿಗೆ ಬಂದಿರುವ ಮೋಸಿನ್ ಮತ್ತು ಖಾದರ್ ಖಾನ್ ಜೆ.ಪಿ.ನಗರದ ೨೪ನೇ ಮುಖ್ಯರಸ್ತೆಯಲ್ಲಿರುವ ಬಾಡಿಗೆ ರೂಮ್‌ನಲ್ಲಿ ವಾಸವಾಗಿದ್ದಾರೆ. ಅದೇ ಕಟ್ಟಡದ ಮೊದಲ ಮಹಡಿಯಲ್ಲಿರುವ ಸಲೂನ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು. ಮಂಗಳವಾರ ರಜೆಯಿದ್ದ ಕಾರಣ ಬೆಳಗ್ಗೆ ತಡವಾಗಿ ಎದ್ದು ೧೧ ಗಂಟೆ ಸುಮಾರಿಗೆ ತಿಂಡಿ ಮಾಡಲು, ಕುಕ್ಕರ್‌ನಲ್ಲಿ ಅಡುಗೆ ಮಾಡಲು ಅಕ್ಕಿ ಹಾಗೂ ತರಕಾರಿ ಹಾಕಿ ಇಟ್ಟು, ಗ್ಯಾಸ್ ಆನ್ ಮಾಡಿದ್ದಾರೆ. ಕೆಲ ಕ್ಷಣಗಳ ಬಳಿಕ ಕುಕ್ಕರ್ ಸ್ಫೋಟಗೊಂಡಿದ್ದು, ಮೇಲ್ಭಾಗದಲ್ಲಿದ್ದ ವಿದ್ಯುತ್ ವೈಯರ್‌ಗೆ ಕುಕ್ಕರ್ ತಗುಲಿ ಇಡೀ ಮನೆಯಲ್ಲೇ ಶಾರ್ಟ್ ಸರ್ಕಿಟ್ ಉಂಟಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಇಬ್ಬರು ಯುವಕರಿಗೆ ಗಾಯಗಳಾಗಿತ್ತು. ಜತೆಗೆ ಮನೆಯಲ್ಲಿದ್ದ ವಸ್ತುಗಳೆಲ್ಲ ಬೆಂಕಿಗಾಹುತಿಯಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತನಿಖಾ ಸಂಸ್ಥೆಗಳಿಂದ ಪರಿಶೀಲನೆ
ಸ್ವಾತಂತ್ರೃ ದಿನಾಚರಣೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕ ಕ್ರಮವಾಗಿ ಕುಕ್ಕರ್ ಸ್ಫೋಟ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎನ್‌ಐಎ ಸೇರಿ ಪ್ರಮುಖ ತನಿಖಾ ಸಂಸ್ಥೆಗಳು ಮಾರ್ಗ ಸೂಚಿ ಪ್ರಕಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿವೆ. ಅಲ್ಲದೆ, ಶ್ವಾನ ದಳ, ಬಾಂಬ್ ನಿಷ್ಟ್ರೀಯ ದಳದ ಅಧಿಕಾರಿಗಳು ಮನೆಯ ಪ್ರತಿಯೊಂದು ಸ್ಥಳವನ್ನು ತಪಾಸಣೆ ನಡೆಸಿದ್ದಾರೆ. ಆದರೆ, ಸ್ಥಳದಲ್ಲಿ ಯಾವುದೇ ಸ್ಫೋಟಕ್ಕೆ ಬಳಸುವ ರಾಸಾಯನಿಕ ವಸ್ತುಗಳು, ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ. ಮೃತ ಯುವಕ ಹಾಗೂ ಗಾಯಾಳುವಿನ ಪೂರ್ವಪರ ವಿಚಾರಣೆ ನಡೆಸಲಾಗಿದೆ. ಇದುವರೆಗೂ ಇಬ್ಬರ ಬಗ್ಗೆ ಯಾವುದೇ ರೀತಿಯ ಅನುಮಾನಾಸ್ಪದ ವಿಚಾರಗಳು ಕಂಡು ಬಂದಿಲ್ಲ. ಆದರೂ ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net