ಸೂಕ್ತ ಕ್ರಮ ಅಗತ್ಯ; ತೀವ್ರ ಕಳವಳ ಸೃಷ್ಟಿಸಿರುವ ಮತಾಂತರ ಪಿಡುಗು..

Editorial
Published on

ಭಾರತದಲ್ಲಿ ಸಂವಿಧಾನ ನೀಡಿದ ಅಧಿಕಾರದಂತೆ ನಾಗರಿಕರು ಅವರಿಗೆ ಬೇಕಾದ ಮತವನ್ನು ಅನುಸರಿಸಲು ಸ್ವತಂತ್ರರು. ಸ್ವಇಚ್ಛೆಯಿಂದ ಅನ್ಯಮತ ಸ್ವೀಕರಿಸುವುದಕ್ಕೂ ಅಡ್ಡಿ ಇಲ್ಲ. ಆದರೆ, ಆಮಿಷವೊಡ್ಡಿ, ಅದಕ್ಕೆ ಮಣಿಯದಿದ್ದರೆ ಬೆದರಿಕೆವೊಡ್ಡಿ ಮತಾಂತರ ಮಾಡುವ ಜಾಲ ಕರ್ನಾಟಕದಲ್ಲೂ ವ್ಯಾಪಕವಾಗಿ ಹರಡುತ್ತಿರುವುದು ಸಾಮಾಜಿಕ ಸ್ವಾಸ್ಥ್ಯದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ. ಮತಾಂತರದ ಘಟನೆಗಳು ಅಲ್ಲಲ್ಲಿ ಶಾಂತಿಭಂಗಕ್ಕೂ ಕಾರಣವಾದ ನಿದರ್ಶನಗಳಿವೆ. ಮಿಷನರಿಗಳ ಇಂಥ ಕೃತ್ಯಗಳ ಬಗ್ಗೆ ಆಕ್ರೋಶ ವ್ಯಕ್ತವಾಗಿದ್ದೂ ಇದೆ. ಈ ಸಮಸ್ಯೆಯ ಗಂಭೀರತೆಯನ್ನು ಅರ್ಥ ಮಾಡಿಕೊಂಡು ಉತ್ತರ ಪ್ರದೇಶ ಸರ್ಕಾರ ಕಠಿಣ ಕಾನೂನು ಜಾರಿಗೆ ತಂದಿದೆ. ರಾಜ್ಯದಲ್ಲಿಯೂ ಮತಾಂತರ ನಿಷೇಧಕ್ಕೆ ಕಾನೂನು ಜಾರಿಗೆ ಬರಬೇಕು ಎಂಬ ಆಗ್ರಹ ಮಂಗಳವಾರ ವಿಧಾನಸಭೆಯಲ್ಲಿ ಮೊಳಗಿದೆ. ಈ ಕುರಿತ ಚರ್ಚೆಯ ಬಳಿಕ ಉತ್ತರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ರಾಜ್ಯದಲ್ಲಿ ಮತಾಂತರ ನಿಷೇಧಕ್ಕಾಗಿ ಕಾನೂನು ತರುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ ಎಂದು ಹೇಳಿದ್ದಾರೆ. ಶಾಸಕ ಗೂಳಿಹಟ್ಟಿ ಶೇಖರ್, ತಮ್ಮ ತಾಯಿಯೇ ಆಮಿಷಕ್ಕೆ ಒಳಗಾಗಿ ಕ್ರೖೆಸ್ತ ಧರ್ಮಕ್ಕೆ ಮತಾಂತರವಾಗಿದ್ದು, ಅದರಿಂದ ಅವರ ಕುಟುಂಬ ಎದುರಿಸುತ್ತಿರುವ ಸಮಸ್ಯೆಯನ್ನು ಎಳೆ-ಎಳೆಯಾಗಿ ಸದನದಲ್ಲಿ ವಿವರಿಸಿದ್ದು, ಸಮಸ್ಯೆಯ ಗಂಭೀರತೆಗೆ ಸಾಕ್ಷಿ ಎನ್ನಬಹುದು.

ಚಿತ್ರದುರ್ಗ ಜಿಲ್ಲೆಯೊಂದರಲ್ಲೇ ಸುಮಾರು 20 ಸಾವಿರ ಜನರು ಮತಾಂತರವಾಗಿ ದ್ದಾರೆ ಎಂದು ಶಾಸಕ ಗೂಳಿಹಟ್ಟಿ ಹೇಳಿದರೆ, ವಿಜಯಪುರ ಜಿಲ್ಲೆಯ ಮೂರೂವರೆ ಸಾವಿರ ಬಂಜಾರ ಸಮಾಜದ ತಾಂಡಾಗಳಲ್ಲಿ ಮತಾಂತರ ಅವ್ಯಾಹತವಾಗಿ ನಡೆಯುತ್ತಿರುವ ಬಗ್ಗೆ ಶಾಸಕ ದೇವಾನಂದ್ ಗಮನ ಸೆಳೆದಿದ್ದಾರೆ. ಮತಾಂತರ ಹಾವಳಿಯಿಂದ ತಾಂಡಾಗಳಲ್ಲಿ ಸಾಮಾಜಿಕ ಸ್ಥಿತಿ ಬಿಗಡಾಯಿಸುತ್ತಿರುವುದು ಚಿಂತೆಯ ವಿಷಯ. ಮತಾಂತರಕ್ಕಾಗಿ ಮಿಷನರಿಗಳಿಗೆ ವಿದೇಶದಿಂದ ಹಣ ಹರಿದು ಬರುತ್ತಿರುವ ಆರೋಪ ಹಲವು ವರ್ಷಗಳಿಂದಲೂ ಕೇಳಿಬರುತ್ತಿದೆ. ಅಲ್ಲದೆ, ಬಡತನದಲ್ಲಿರುವ ಜನರನ್ನು ಗುರಿಯಾಗಿಸಿ, ಮುಖ್ಯವಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರನ್ನು ಮತಾಂತರ ಮಾಡಲಾಗುತ್ತಿದೆ. ಇಂಥವರು, ಆಮಿಷಕ್ಕೆ ಒಳಗಾಗಿ ಮತಾಂತರವಾಗುವುದಲ್ಲದೆ, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕಾಗಿ ಇರುವ ಸೌಲಭ್ಯಗಳನ್ನೂ ಬಳಸಿಕೊಳ್ಳುತ್ತಿದ್ದಾರೆ. ಹಿಂದೂ ನಂಬಿಕೆ, ಆಚರಣೆಗಳನ್ನು, ಸಾಂಪ್ರದಾಯಿಕ ಪದ್ಧತಿಗಳನ್ನು ‘ಮೂಢನಂಬಿಕೆ’ ಎಂದು ಜರೆಯುವುದು, ಒತ್ತಾಯಪೂರ್ವಕವಾಗಿ ಒಂದು ಮತದ ಆಚರಣೆಗಳನ್ನು ಹೇರುವುದು ಸೇರಿದಂತೆ ಮತಾಂತರದ ಹೆಸರಲ್ಲಿ ನಡೆಯುತ್ತಿರುವ ಚಟುವಟಿಕೆಗಳು ಅಕ್ಷಮ್ಯ.

ಈ ಪ್ರಮುಖ ವಿಷಯದ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ನಡೆದಿರುವುದರಿಂದ ಹಲವು ಮಹತ್ವದ ಅಂಶಗಳು ಬಹಿರಂಗಗೊಂಡಿವೆ. ಶಾಂತಿ, ಸಾಮರಸ್ಯ, ಸದ್ಭಾವ ಇವು ಸಮಾಜದ ದೊಡ್ಡ ಮೌಲ್ಯಗಳು. ಇವುಗಳಿಗೆ ಧಕ್ಕೆ ಒದಗಿಸುವ ಕೃತ್ಯಗಳನ್ನು ಯಾವುದೇ ಕಾರಣಕ್ಕೂ ಸಹಿಸಬಾರದು. ಅಲ್ಲದೆ, ಕೆಲವು ಬೆಳವಣಿಗೆಗಳನ್ನು ರಾಜಕೀಯ ದೃಷ್ಟಿಯಲ್ಲಿ ನೋಡದೆ, ಸಮಸ್ಯೆಯ ಗಂಭೀರತೆಯನ್ನು ಎಲ್ಲ ಪಕ್ಷಗಳೂ ಅರ್ಥ ಮಾಡಿಕೊಳ್ಳಬೇಕು. ಮತಾಂತರ ತಡೆ ನಿಟ್ಟಿನಲ್ಲಿ ಸಮರ್ಪಕ ಕಾನೂನು ತರಲು ಇದು ಸಕಾಲವಾಗಿದ್ದು, ಸರ್ಕಾರ ಈ ಬಗ್ಗೆ ಶೀಘ್ರ ಅಂತಿಮ ನಿರ್ಧಾರ ಕೈಗೊಳ್ಳುವಂತಾಗಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net