

ಪಾಂಡವಪುರ: ದೇಶದ ಎಲ್ಲ ವರ್ಗದ ಬಡವರು, ಮಹಿಳೆಯರು, ಕಾರ್ಮಿಕರು ಮತ್ತು ಶೋಷಿತರನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನ ರಕ್ಷಣೆ ಮಾಡುತ್ತಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಪ್ರೊ.ಡಿ.ಆನಂದ್ ಹೇಳಿದರು.
ಪಟ್ಟಣದ ಸೆಸ್ಕ್ ವಿಭಾಗೀಯ ಕಚೇರಿ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಪ್ರಪಂಚದ 40 ದೇಶಗಳ ಸಂವಿಧಾನವನ್ನು ನಿರಂತರವಾಗಿ ಅಧ್ಯಯನ ಮಾಡಿದ ಅನುಭವ ಮತ್ತು ಜ್ಞಾನದಿಂದ ಅಂಬೇಡ್ಕರ್ ಅವರು ದೇಶಕ್ಕೆ ನೀಡಿರುವ ಸಂವಿಧಾನ ವಿಶ್ವಕ್ಕೆ ಮಾದರಿಯಾಗಿದೆ. ದೇಶದ ಪ್ರತಿಯೊಬ್ಬರಿಗೂ ಕಾನೂನಿನ ರಕ್ಷಣೆ ನೀಡಿದೆ. ಸಂವಿಧಾನದಡಿಯಲ್ಲಿ ಮಹಿಳೆಯರು ಸೇರಿದಂತೆ ಎಲ್ಲ ಜಾತಿ, ಧರ್ಮಗಳ ಜನರು ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾರೆ. ಇದಕ್ಕಾಗಿಯೇ, ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಭಾರತ ಪ್ರವಾಸದ ವೇಳೆ ಭಾರತೀಯರು ಅಂಬೇಡ್ಕರ್ ಅವರ ಸಂವಿಧಾನ ರಕ್ಷಣೆಯಲ್ಲಿ ಇನ್ನೂ ಒಂದು ಸಾವಿರ ವರ್ಷಗಳ ಕಾಲ ನೆಮ್ಮದಿಯಾಗಿ ಬಾಳಬಹುದು ಎಂದಿದ್ದರು ಎಂದು ಸ್ಮರಿಸಿದರು.
ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾ ಕೂಡ ಭಾರತದಿಂದ ಏನ್ನನಾದರೂ ಉಡುಗೊರೆಯಾಗಿ ನೀಡುವುದಾದರೆ ಸಂವಿಧಾನದ ಪ್ರತಿಯನ್ನು ನೀಡಿ ಎಂದು ಕೇಳಿಕೊಂಡಿದ್ದರು. ವಿಶ್ವಸಂಸ್ಥೆ ಕೂಡ ಅಂಬೇಡ್ಕರ್ ಹುಟ್ಟಿದ ದಿನವನ್ನು ಜ್ಞಾನದ ದಿನ ಎಂದು ಘೋಷಿಸಿದೆ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಸಮಾಜದ ಕಟ್ಟಕಡೆಯ ವ್ಯಕ್ತಿಯೂ ತನ್ನ ಹಕ್ಕುಗಳನ್ನು ಅರ್ಥ ಮಾಡಿಕೊಂಡು ನೆಮ್ಮದಿಯಿಂದ ಬಾಳಬೇಕು ಎಂಬ ಕನಸು ಕಂಡಿದ್ದರು. ಅವರು ಬದುಕಿದ್ದ 65 ವರ್ಷಗಳಲ್ಲಿ 35 ವರ್ಷಗಳನ್ನು ಅಧ್ಯಾಯನಕ್ಕಾಗಿ ಮೀಸಲಿಟ್ಟು, 30 ವರ್ಷಗಳವರೆಗೆ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡರು. ಇದರಲ್ಲಿ ನಾಲ್ಕೈದು ವರ್ಷಗಳು ಮಾತ್ರ ಮಂತ್ರಿಯಾಗಿದ್ದರು. ಭಾರತದಲ್ಲಿ ಅಂಬೇಡ್ಕರ್ ಅವರ ಚಿಂತನೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ಅವರನ್ನು ಒಂದು ಸಮುದಾಯದ ನಾಯಕ ಎಂದು ಹಣೆಪಟ್ಟಿ ಕಟ್ಟಿದರು. ಆದರೆ ಅಂಬೇಡ್ಕರ್ ಅವರ ಸಂವಿಧಾನದಿಂದ ದೇಶದ ಎಲ್ಲ ಜಾತಿ, ಧರ್ಮದ ಜನರಿಗೂ ರಕ್ಷಣೆ ನೀಡುತ್ತಿದೆ. ಅಂಬೇಡ್ಕರ್ ಅವರನ್ನು ಜಗತ್ತಿಗೆ ಹೇಗೆ ಪರಿಚಯಿಸಬೇಕೋ ಹಾಗೆ ಪರಿಚಯಿಸಲಿಲ್ಲ. ಹೀಗಾಗಿ ದೇಶದ ಬಹುತೇಕರು ಅಂಬೇಡ್ಕರ್ ಅವರ ವಿಚಾರಗಳನ್ನು ಮನದಟ್ಟು ಮಾಡಿಕೊಳ್ಳುವಲ್ಲಿ ವಿಫಲರಾದರು ಎಂದು ತಿಳಿಸಿದರು.
ಸೆಸ್ಕ್ ಇಇ ವೈ.ಆರ್.ವಿನೂತಾ, ಎಇಇ ರವಿಕುಮಾರ್, ಲೆಕ್ಕ ಪರಿಶೋಧಕ ಕುಮಾರ್, ಸಂಘಟನಾ ಕಾರ್ಯದರ್ಶಿ ಎಚ್.ಕೆ.ಅರುಣೇಶ್, ಮಹೇಂದ್ರ, ಎಇಗಳಾದ ಸುಷ್ಮಾ, ರೂಪಿಣಿ, ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಎನ್,ಕೃಷ್ಣೇಗೌಡ ಇತರರು ಇದ್ದರು.