ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಸಿಎಂ

cm siddaramaiah
Published on

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿ ರಾಜ್ಯದಲ್ಲಿ ಕಳ್ಳತನ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಇನ್ಮುಂದೆ ಇಂತಹ ಘಟನೆಗಳು ಮರುಕಳಿಸಬಾರದು. ಒಂದು ವೇಳೆ ಮತ್ತೆ ಅಮಾನವೀಯ ಘಟನೆಗಳು ಜರುಗಿದರೆ ಆಯಾ ಎಸ್ಪಿ, ಡಿಸಿಪಿಗಳನ್ನೇ ಹೊಣೆಯನ್ನಾಗಿ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಮಂಗಳವಾರ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಸಿಎಂ ಈ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಹಾವೇರಿಯಲ್ಲಿ ಮಹಿಳೆ ಮೇಲೆ ಪೊಲೀಸ್ ನೈತಿಕಗಿರಿ ಜತೆಗೆ, ಸಾಮೂಹಿಕ ಅತ್ಯಾಚಾರದಂತಹ ಘಟನೆ ನಡೆದಿದೆ. ಆದರೆ ಈ ವಿಚಾರ ಪೊಲೀಸರಿಗೆ ತಡವಾಗಿ ಗೊತ್ತಾಗಿದೆ. ಶಿವಮೊಗ್ಗದಲ್ಲಿ ನಡೆದ ಗಲಾಟೆ ಪ್ರಕರಣದಲ್ಲೂ ಇದೇ ಆಗಿದೆ. ಹಾಗಾದರೆ, ಪೊಲೀಸ್ ಅಧಿಕಾರಿ-ಸಿಬ್ಬಂದಿ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬರ್ಥವೇ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ಕಳ್ಳತನ ಹೆಚ್ಚಾಗುತ್ತಿದೆ ಎಂದರೆ, ಗಸ್ತು ವ್ಯವಸ್ಥೆ, ಹೊಯ್ಸಳ ಸಿಬ್ಬಂದಿ ಮತ್ತು ಠಾಣಾಧಿಕಾರಿಗಳು ವೈಫಲ್ಯರಾಗಿದ್ದಾರೆ ಎಂದೇ ಅರ್ಥ ಅಲ್ಲವೇ? ಇದೇ ಸ್ಥಿತಿ ಮುಂದುವರಿದರೆ ಜಿಲ್ಲಾ/ವಿಭಾಗದ ಎಸ್ಪಿ/ಎಸ್ಪಿಗಳನ್ನು ಕರ್ತವ್ಯಲೋಪಕ್ಕೆ ಹೊಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ವರ್ಗಾವಣೆಗೆ ಲಾಭಿ ಬೇಡ:
ಪ್ರಸ್ತುತ ವರ್ಗಾವಣೆಗಳಿಗೆ ಪೊಲೀಸ್ ಅಧಿಕಾರಿಗಳು ಹಾತೊರೆಯುವುದು, ಜಾತಿ ಬಳಸುವುದು ಅತ್ಯಂತ ಕೆಟ್ಟದ್ದು. ಹಾಗೇ ಮಾಡಬೇಡಿ. ನಮ್ಮದು ಜ್ಯಾತ್ಯಾತೀತ ರಾಷ್ಟ್ರ. ನಾವುಗಳೇ ನಮ್ಮ ಸಂವಿಧಾನದ ಆಶಯಗಳನ್ನು ಬಲಪಡಿಸಬೇಕು ಎಂದು ಕಿವಿ ಮಾತು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net