ಅಮೆರಿಕ ಅಧ್ಯಕ್ಷ ಟ್ರಂಪ್​ ಭೇಟಿ ನಿಮಿತ್ತ ತಾಜ್​ಮಹಲ್​ ಸುತ್ತ ಭರ್ಜರಿ ಸಿದ್ಧತೆ; ಗೋಡೆಗಳಿಗೆ ಸುಣ್ಣಬಣ್ಣ, ರಸ್ತೆಗಳ ಸ್ವಚ್ಛತಾ ಕಾರ್ಯ...

Tajmahal 18 Feb 20
Published on

ಲಖನೌ: ಭಾರತಕ್ಕೆ ಆಗಮಿಸುತ್ತಿರುವ ಅಮೆರಿಕ ಅಧ್ಯಕ್ಷ ಫೆ.24ರಂದು ಆಗ್ರಾದ ತಾಜ್​ ಮಹಲ್​ಗೆ ಭೇಟಿಕೊಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವೈಟ್​ ಹೌಸ್​ ನೀಡಿರುವ ಕಾರ್ಯಕ್ರಮಗಳ ಪಟ್ಟಿಯ ಪ್ರಕಾರ ಟ್ರಂಪ್​ ಮತ್ತು ಅವರ ಪತ್ನಿ ಫೆ.24ರಂದು ತಾಜ್​ಮಹಲ್​ಗೆ ಭೇಟಿ ನೀಡಲಿದ್ದಾರೆ.

ಡೊನಾಲ್ಡ್​ ಟ್ರಂಪ್ ತಾಜ್​ಮಹಲ್​ಗೆ ಭೇಟಿ ಕೊಡುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿ ಕೂಡ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಸ್ಥಳೀಯ ಮುನ್ಸಿಪಲ್​ ಕಾರ್ಪೋರೇಶ್​ನ ತಾಜ್​ ಮಹಲ್​ನ ಸುತ್ತಲೂ ಇರುವ ಗೋಡೆಗಳಿಗೆಲ್ಲ ಬಣ್ಣ ಬಳಿಸುತ್ತಿದೆ.

ಹಾಗೇ ಅಲ್ಲಿನ ರಸ್ತೆಗಳನ್ನು, ಪ್ರದೇಶಗಳನ್ನು ಸ್ವಚ್ಛ ಮಾಡುವ ಕಾರ್ಯವೂ ನಡೆಯುತ್ತಿದೆ. ಅದಕ್ಕೆ ಸಂಬಂಧಪಟ್ಟ ಯಂತ್ರಗಳನ್ನೂ ತರಲಾಗಿದೆ.

ಇನ್ನು ಸುತ್ತಲಿನ ಗೋಡೆಗಳ ಮೇಲೆ ಕಲಾವಿದರು ಚಿತ್ರ ಬಿಡಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.

ರಸ್ತೆಗಳ ವಿಭಜಕ(ಡಿವೈಡರ್​)ಗಳಿಗೂ ಪೇಂಟಿಂಗ್​ ಮಾಡಲಾಗುತ್ತಿದೆ. ಅಲ್ಲಿ ಸುತ್ತಮುತ್ತ ಇರುವ ವಿವಿಧ ನಾಯಕರ ಪುತ್ಥಳಿಗಳು, ಪ್ರತಿಮೆಗಳನ್ನೆಲ್ಲ ಸ್ವಚ್ಛ ಮಾಡಲಾಗುತ್ತಿದೆ.

ಹಾಗೇ ಟ್ರಂಪ್​ ಅವರು ಮೊಹಬ್ಬತ್​ ದಿ ತಾಜ್ ಸಾಂಸ್ಕೃತಿಕ ಕಲಾಕೇಂದ್ರಕ್ಕೂ ಭೇಟಿ ನೀಡಲಿದ್ದು, ಅಲ್ಲಿಯೂ ಸಹ ಸ್ವಚ್ಛತಾ ಕಾರ್ಯಗಳು ನಡೆಯುತ್ತಿವೆ.

ಇನ್ನು ಟ್ರಂಪ್ ಅವರ ತಾಜ್ ಮಹಲ್​ ಭೇಟಿ ನಿಮಿತ್ತ 5000 ಜನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಜನವರಿಯಲ್ಲಿ ಯುಎಸ್​ನ ಉನ್ನತ ಮಟ್ಟದ ಭದ್ರತಾ ತಂಡವೊಂದು ತಾಜ್​ಮಹಲ್​ ಮತ್ತು ಆಗ್ರಾದ ಅಕ್ಕಪಕ್ಕದ ಪ್ರದೇಶಗಳಿಗೆ ಭೇಟಿ ನೀಡಿತ್ತು. ಇದರಲ್ಲಿ ಸುಮಾರು 40 ಜನರು ಇದ್ದರು. ಅಲ್ಲಿ ಪರಿಶೀಲನೆ ಮಾಡಿದ ಬಳಿಕ ಅಧ್ಯಕ್ಷರ ತಾಜ್​ ಮಹಲ್​ ಭೇಟಿಗೆ ಅಸ್ತು ಎಂದಿವೆ ಎಂದು ಹೇಳಲಾಗಿದೆ.

2015ರಲ್ಲಿ ಯುಎಸ್​ ಮಾಜಿ ಅಧ್ಯಕ್ಷ ಬರಾಕ್​ ಒಬಾಮಾ ತಾಜ್​ ಮಹಲ್​ ಗೆ ಭೇಟಿ ನೀಡಿದ್ದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net