ಮುಖ್ಯಮಂತ್ರಿ ರಾಜೀನಾಮೆ ಕೊಡಲಿ

KMT KAGERI
Published on

ಶಿರಸಿ: ರಾಜ್ಯದಲ್ಲಿ ಗೌರವಯುತ ಹುದ್ದೆಯಾದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅಪಚಾರ ಮಾಡುತ್ತಿದ್ದಾರೆ. ಲೋಕಾಯುಕ್ತ ವಿಚಾರಣೆ ಎದುರಿಸುತ್ತಿದ್ದರೂ ಈ ಸ್ಥಾನ ಬಿಡದೇ ಹುದ್ದೆಯ ಗೌರವ ಹಾನಿ ಮಾಡುತ್ತಿದ್ದು, ತಕ್ಷಣವೇ ರಾಜೀನಾಮೆ ನೀಡಿ ಯೋಗ್ಯರಿಗೆ ಹುದ್ದೆ ಬಿಟ್ಟುಕೊಡಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಆಗ್ರಹಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಹಗರಣಗಳ ಸರಮಾಲೆಯನ್ನೇ ಹೊದ್ದು ಮಲಗಿದೆ. ಮುಖ್ಯಮಂತ್ರಿಯಾದವರು ಸರ್ಕಾರಿ ಕಾರಿನಿಂದ ಇಳಿದು ವಿಚಾರಣೆಗೆ ಖಾಸಗಿ ಕಾರಿನಲ್ಲಿ ತೆರಳುತ್ತಾರೆಂದರೆ ಇದು ರಾಜ್ಯದ ಮರ್ಯಾದೆ ಹಾಳುಮಾಡುವ ವಿಷಯ. ವಾಲ್ಮೀಕಿ ಮೂಡ ಹಗರಣಗಳ ಬಳಿಕ ಈಗ ಅಬಕಾರಿ ಹಗರಣ ಹೊಸದಾಗಿ ಸೇರ್ಪಡೆಯಾದಂತಾಗಿದೆ. ರಾಜ್ಯದ ಇತಿಹಾಸದಲ್ಲಿ ಮೊದಲನೇ ಬಾರಿಗೆ ಮುಖ್ಯಮಂತ್ರಿಯಂತ ಗೌರವ ಸ್ಥಾನದಲ್ಲಿದ್ದು, ಲೋಕಾಯುಕ್ತ ವಿಚಾರಣೆ ಎದುರಿಸಿದ್ದು ಅವರ ಸಾಧನೆಯೇ ಸರಿ. ಇಡೀ ಸರ್ಕಾರದ ಮಂತ್ರಿ ಮಂಡಲವೇ ಒಂದಿಲ್ಲೊಂದು ವಿಚಾರಣೆ ಎದುರಿಸುತ್ತಿದೆ.

ವಕ್ಪ್ ಬೋರ್ಡ್ ವಿಚಾರದಲ್ಲಿ ರಾಜ್ಯದ ರೈತರ ಜಮೀನನ್ನು ಕಬಳಿಸಲು ಹುನ್ನಾರ ನಡೆಸಿದ್ದು ಮುಖ್ಯಮಂತ್ರಿ ಮತ್ತು ಜಮೀರ್ ಅಹ್ಮದ್ ಅವರ ಮನಸ್ಥಿತಿ ತೋರಿಸುತ್ತದೆ. ಉಚಿತಗಳ ಆಮಿಷ ಒಡ್ಡಿ ಅಧಿಕಾರಕ್ಕೆ ಬಂದ ಈ ಸರ್ಕಾರ ಉಚಿತ ಆತ್ಮಹತ್ಯೆ ಭಾಗ್ಯವನ್ನು ಘೊಷಿಸಿದಂತಿದೆ. ಸಿದ್ದರಾಮಯ್ಯನವರು ಕೇವಲ ಹಗರಣವೇ ರಾಜ್ಯದ ಅಭಿವೃದ್ಧಿ ಎಂದು ತಿಳಿದು ರಾಜ್ಯವನ್ನು ದಿವಾಳಿ ಹಂತಕ್ಕೆ ತಂದಿಟ್ಟಿದ್ದಾರೆ. ಸಚಿವ ಸಂಪುಟವೇ ಒಂದಿಲ್ಲೊಂದು ಹಗರಣದಲ್ಲಿ ಮುಳುಗಿ, ಜನರ ದಿಕ್ಕು ತಪ್ಪಿಸುವಲ್ಲೇ ನಿರತವಾಗಿದೆ. ಇದೆಲ್ಲದರ ಹೊಣೆ ಹೊತ್ತು ಸಿದ್ದರಾಮಯ್ಯನವರು ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net