ಸಿಎಂಗೆ ಆಡಳಿತ ಸೂಚ್ಯಂಕ ವೃದ್ಧಿಯ ಸವಾಲು

dfasdasda
Published on

|ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ಕೇಂದ್ರ ಸರ್ಕಾರ ಪ್ರತಿ ವರ್ಷ ನಿಗದಿ ಮಾಡುವ ಉತ್ತಮ ಆಡಳಿತ ಸೂಚ್ಯಂಕದಲ್ಲಿ ರಾಜ್ಯ ಕುಸಿತ ಕಂಡಿದೆ. ರಾಜ್ಯವನ್ನು ಮತ್ತೆ ಮೊದಲಿದ್ದ ಸ್ಥಾನಕ್ಕೆ ತರುವುದು ಚುನಾವಣೆಗೆ ಸಜ್ಜಾಗಬೇಕಾದ ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ದೊಡ್ಡ ಸವಾಲಾಗಿದೆ.

ಕೇಂದ್ರ ಸರ್ಕಾರದ ಉತ್ತಮ ಆಡಳಿತ ಸೂಚ್ಯಂಕದಲ್ಲಿ ರಾಜ್ಯ ಸರ್ಕಾರ 2019ರಲ್ಲಿ 3ನೇ ಸ್ಥಾನದಲ್ಲಿತ್ತು. ಈಗ ಬಿಡುಗಡೆ ಮಾಡಿರುವ ವರದಿಯಲ್ಲಿ 6ನೇ ಸ್ಥಾನಕ್ಕೆ ಕುಸಿದಿದೆ. ಆದ್ದರಿಂದಲೇ ಮುಖ್ಯಮಂತ್ರಿ ಬೊಮ್ಮಾಯಿ ಆತಂಕದಲ್ಲಿದ್ದು ಸೂಚ್ಯಂಕ ವೃದ್ಧಿಗೆ ಸರ್ವ ಪ್ರಯತ್ನ ಮಾಡುತ್ತಿದ್ದಾರೆ.

ಯಾವ ಯಾವ ಅಂಶಗಳ ಅಧ್ಯಯನ: ಕೇಂದ್ರ ಸರ್ಕಾರ ಕೃಷಿ ಮತ್ತು ಸಂಬಂಧಿತ ವಲಯಗಳು, ಮೂಲಸೌಕರ್ಯ, ಸಮಾಜ ಕಲ್ಯಾಣ ಸೇವೆಗಳು, ಮಾನವ ಸಂಪನ್ಮೂಲ, ಆರ್ಥಿಕ ಆಡಳಿತ, ಸಾರ್ವಜನಿಕ ಸುರಕ್ಷತೆ, ಪರಿಸರ, ನಾಗರಿಕ ಉದ್ದೇಶಿತ ಆಡಳಿತ, ಅಭಿವೃದ್ಧಿ.... ಹೀಗೆ ವಿವಿಧ ವಿಷಯಗಳಲ್ಲಿ ರಾಜ್ಯಗಳ ಆಡಳಿತ ಅಧ್ಯಯನ ನಡೆಸಿ ಸ್ಥಾನವನ್ನು ಸೂಚಿಸುತ್ತದೆ.

ಸುಧಾರಣೆ ಅಗತ್ಯ ಏಕೆ?

  •   ಉತ್ತಮ ಆಡಳಿತ ಇದ್ದರೆ ಬಂಡವಾಳ ಹೂಡಿಕೆಗೆ ಪೂರಕ
  •   ಉದ್ಯೋಗದ ಸೃಷ್ಟಿಗೆ ಅನುಕೂಲ
  •   ಕೇಂದ್ರದ ಯೋಜನೆಗಳ ಸಮರ್ಥ ಬಳಕೆ
  •  ಭ್ರಷ್ಟಾಚಾರ ನಿಯಂತ್ರಣ
  •   ಸರ್ಕಾರದ ಯೋಜನೆಗಳು ಸಕಾಲಕ್ಕೆ ಅರ್ಹರಿಗೆ ತಲುಪುತ್ತವೆ
  •   ಆಡಳಿತದಲ್ಲಿ ಗುಣಮಟ್ಟದ ಸುಧಾರಣೆ ಆಗುತ್ತದೆ

ನೆರೆಯ ರಾಜ್ಯಗಳು ಮುಂದೆ:

ಸಾರ್ವಜನಿಕ ಆಡಳಿತ ಸೂಚ್ಯಂಕಕ್ಕೆ ಕೇಂದ್ರ ಪ್ರಾಯೋಜಕತ್ವದ ಯೋಜನೆಗಳಾದ ಗ್ರಾಮೀಣ ಉದ್ಯೋಗ ಖಾತರಿ, ರಾಷ್ಟ್ರೀಯ ಆರೋಗ್ಯ ಮಿಷನ್, ಮಕ್ಕಳ ಸಮಗ್ರ ಅಭಿವೃದ್ದಿ, ಸಮಗ್ರ ಶಿಕ್ಷಣ, ಬಿಸಿಯೂಟದಲ್ಲಿನ ಬೆಳವಣಿಗೆಗಳ ಆಧಾರದಲ್ಲಿ ಲೆಕ್ಕ ಹಾಕಲಾಗುತ್ತದೆ. ಕೇರಳ, ತಮಿಳುನಾಡು, ತೆಲಂಗಾಣ ಮೊದಲ ಮೂರು ಸ್ಥಾನದಲ್ಲಿವೆ. ಆದ್ದರಿಂದ ಕೇಂದ್ರದ ನೆರವನ್ನೂ ಸಮಗ್ರವಾಗಿ ಬಳಕೆ ಮಾಡಿಕೊಳ್ಳಬೇಕೆಂದು ಬೊಮ್ಮಾಯಿ ಉದ್ದೇಶಿಸಿದ್ದಾರೆ. ಆ ಮೂಲಕ ಸುಸ್ಥಿರತೆಯ ಸ್ತಂಭಗಳಾದ ನೀತಿ, ಸುಸ್ಥಿರತೆ, ಬೆಳವಣಿಗೆಗೆ ಆದ್ಯತೆ ನೀಡಲು ಹೆಜ್ಜೆಯನ್ನಿಡಲಾರಂಭಿಸಿದ್ದಾರೆ.

ಕಳೆದ ವರ್ಷ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಸೇರಿ ಹಲವು ರಾಜಕೀಯ ಏರಿಳಿತಗಳಾದವು. ಕೋವಿಡ್ ಮಿತಿ ಮೀರಿತ್ತು. ಮುಖ್ಯಮಂತ್ರಿಯಾದ ಬಸವರಾಜ ಬೊಮ್ಮಾಯಿಗೆ ಆಡಳಿತದಲ್ಲಿ ಇನ್ನಷ್ಟೇ ಹಿಡಿತ ಸಿಗಬೇಕಾಗಿತ್ತು. ಅಧಿಕಾರಿಗಳ ನಿರ್ಲಕ್ಷ್ಯ, ಕಡತ ವಿಲೇವಾರಿಯಲ್ಲಿನ ವಿಳಂಬ ನೀತಿ, ಕುಸಿದ ಕಾನೂನು ಸುವ್ಯವಸ್ಥೆ, ಯೋಜನೆಗಳ ಅನುಷ್ಠಾನಕ್ಕೆ ಹಣಕಾಸು ಬಿಡುಗಡೆಯ ನಿಧಾನಗತಿ, ರಾಜ್ಯವನ್ನು ಕಾಡಿದ ಅನಗತ್ಯ ವಿವಾದ, ಪರ್ಸೆಂಟೇಜ್ ಅರೋಪ ಇತ್ಯಾದಿಗಳೆಲ್ಲವೂ ಸೂಚ್ಯಂಕ ಕುಸಿತಕ್ಕೆ ಕಾರಣ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಇನ್ನೂ ಎಲ್ಲೆಲ್ಲಿ ಕುಸಿತ: ಆಡಳಿತ ಸೂಚ್ಯಂಕದ ಕುಸಿತ ಜತೆಗೆ ಸಾರ್ವಜನಿಕ ಆಡಳಿತದಲ್ಲಿ 7ನೇ ಸ್ಥಾನಕ್ಕೆ ಕುಸಿದಿದ್ದರೆ, ನೀತಿ ಸ್ತಂಭದಲ್ಲಿ 12 ರಿಂದ 16 ನೇ ಸ್ಥಾನಕ್ಕೆ ಇಳಿದಿದೆ. ರಾಜ್ಯವು 5.109 ಅಂಕದೊಂದಿಗೆ 6 ನೇ ಸ್ಥಾನಕ್ಕೆ ಇಳಿದಿದೆ. ಗುಜರಾತ್, ಮಹಾರಾಷ್ಟ್ರ, ಗೋವಾ ರಾಜ್ಯಗಳು ಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿವೆ.

ಎಚ್ಚೆತ್ತ ಸರ್ಕಾರ: ಈ ವರ್ಷದ ಉತ್ತಮ ಆಡಳಿತ ಸೂಚ್ಯಂಕ ಮತ್ತು ಸಾರ್ವಜನಿಕ ಆಡಳಿತ ಸೂಚ್ಯಂಕಗಳು ಹೊರ ಬೀಳುವುದಕ್ಕೆ ಮುನ್ನವೇ ಮುಖ್ಯಮಂತ್ರಿ ಎಚ್ಚೆತ್ತಿದ್ದಾರೆ. ಆಡಳಿತವನ್ನು ಸರಿದಾರಿಗೆ ತರುವ ಮೂಲಕ ರಾಜ್ಯವನ್ನು ಮೊದಲ ಮೂರು ಸ್ಥಾನದೊಳಗೆ ತರುವುದಕ್ಕೆ ಪ್ರಯತ್ನ ಆರಂಭಿಸಿದ್ದಾರೆ. ಅಧಿಕಾರಿಗಳು ಮತ್ತು ಸಂಪುಟ ಸಹೋದ್ಯೋಗಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕವೇ ಆ ಪ್ರಯತ್ನ ಮಾಡುತ್ತಿದ್ದಾರೆ. ಆಡಳಿತ ಯಂತ್ರದಲ್ಲಿ ಒಂದಷ್ಟು ಸುಧಾರಣಾ ಕ್ರಮಗಳೊಂದಿಗೆ ಚಾಟಿ ಬೀಸುವ ಮೂಲಕ ಸಜ್ಜಾಗುತ್ತಿದ್ದಾರೆ.

ನೌಕರರ ವಿಶ್ವಾಸ ಮುಖ್ಯ: ರಾಜ್ಯ ಸರ್ಕಾರಿ ನೌಕರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯುವುದು ಮುಖ್ಯವಾಗಿದೆ. ಇನ್ನೂ ವೇತನ ಪರಿಷ್ಕರಣೆ ಆಯೋಗ ರಚನೆಯಾಗದಿರುವುದು, ಆಡಳಿತ ಸುಧಾರಣೆಯ ಹೆಸರಿನಲ್ಲಿ ಹುದ್ದೆಗಳ ರದ್ದು ಸೇರಿದಂತೆ ಕೆಲವೊಂದು ವಿಚಾರಗಳಲ್ಲಿ ನೌಕರರಿಗೆ ಅಸಮಾಧಾನ ಇದ್ದೇ ಇದೆ. ಸಚಿವಾಲಯ ಬಂದ್ ಸಹ ನಡೆದಿದೆ. ಆದ್ದರಿಂದಲೇ ನೌಕರರ ಸಹಕಾರವನ್ನು ಬೊಮ್ಮಾಯಿ ಯಾವ ರೀತಿಯಲ್ಲಿ ಪಡೆಯಲಿದ್ದಾರೆ ಎಂಬುದು ಕುತೂಹಲದ ಸಂಗತಿಯಾಗಿದೆ.

ಗೊಂದಲಗಳಿಗೆ ತೆರೆ ಅಗತ್ಯ; ಸಚಿವ ಸಂಪುಟ ಪುನಾರಚನೆಯೋ, ವಿಸ್ತರಣೆಯೋ ಎಂಬ ಗೊಂದಲ ಇದೆ. ಗೊಂದಲ ಸರಿಯಾಗಿದ್ದಲ್ಲಿ ಜಡ್ಡುಗಟ್ಟಿದ ವ್ಯವಸ್ಥೆ ಸುಧಾರಣೆ ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ಪಕ್ಷದ ಹೈಕಮಾಂಡ್ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. ಅನೇಕ ಸಚಿವರು ವಿಧಾನಸೌಧಕ್ಕೆ ಬರುವುದಿಲ್ಲ, ಸಭೆಗಳನ್ನು ನಡೆಸುವುದಿಲ್ಲ, ಕ್ಷೇತ್ರ ಬಿಟ್ಟು ಜಿಲ್ಲೆ ಹಾಗೂ ರಾಜ್ಯದ ಪ್ರವಾಸ ಮಾಡುತ್ತಿಲ್ಲ. ಆಡಳಿತ ಚುರುಕಾಗಲು ಸಚಿವರು ಚುರುಕಾಗುವುದು ಅಗತ್ಯವಿದೆ ಎಂಬ ಮಾತು ಕೇಳಿ ಬರುತ್ತಿದೆ.

ಸವಾಲು ಏಕೆ?

ಮುಂದಿನ ವರ್ಷ ಮೇ ತಿಂಗಳಿನಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯುತ್ತಿದೆ. ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಬೇಕಾಗಿದೆ. ಆ ವೇಳೆಗೆ ಉತ್ತಮ ಆಡಳಿತ, ಸಾರ್ವಜನಿಕ ಆಡಳಿತ, ಅಭಿವೃದ್ಧಿ ಸೂಚ್ಯಂಕಗಳಲ್ಲಿ ಏರಿಕೆ ಆಗದಿದ್ದರೆ ಪ್ರತಿಪಕ್ಷಗಳ ಕೈಗೆ ಅಸ್ತ್ರ ಕೊಟ್ಟಂತಾಗುತ್ತದೆ. ಸರ್ಕಾರವಿನ್ನೂ ಟೇಕಾಫ್ ಆಗಿಲ್ಲವೆಂಬ ಆರೋಪ ಇರುವಾಗ ಅದಕ್ಕೆ ಪುಷ್ಠಿ ನೀಡದಂತೆ ನೋಡಿಕೊಳ್ಳುವುದು ಬೊಮ್ಮಾಯಿಗೆ ಇರುವ ಬಹುದೊಡ್ಡ ಸವಾಲಾಗಿದೆ. ಆದ್ದರಿಂದಲೇ ಬಜೆಟ್ ವಿಧಾನಸಭೆಯಲ್ಲಿ ಅಂಗೀಕಾರವಾದ ಬೆನ್ನ ಹಿಂದೆಯೇ ಅವರು ಕಾರ್ಯೋನ್ಮುಖರಾಗಿದ್ದಾರೆ.

ಸೂಚ್ಯಂಕ ವೃದ್ಧಿಗೆ ಸಿಎಂ ಪ್ರಯತ್ನ ಏನೇನು?

  •  ಇದೇ ಮೊದಲ ಬಾರಿಗೆ ಬಜೆಟ್ ಘೋಷಣೆಗಳು ಎರಡೇ ತಿಂಗಳಿನಲ್ಲಿ ಆದೇಶ
  •  ನಿರಂತರವಾಗಿ ಇಲಾಖೆಗಳ ಸಭೆ ನಡೆಸಿ ಬಜೆಟ್ ಅನುಷ್ಠಾನಕ್ಕೆ ವೇಗ
  •   ಬಜೆಟ್ ಘೋಷಣೆಗಳ ಜಾರಿಗೆ ಅನುದಾನ ಬಿಡುಗಡೆ
  •   ತಳಮಟ್ಟದ ಅಧಿಕಾರಿಗಳ ಸಭೆ ಹಾಗೂ ಸೂಚನೆ
  •  ಹೊರೆಯಾಗಿದ್ದ ಇಲಾಖೆಗಳ ರದ್ದು
  •  ಅನಗತ್ಯ ಹುದ್ದೆಯಲ್ಲಿದ್ದ ಅಧಿಕಾರಿ, ನೌಕರರನ್ನು ಅಗತ್ಯ ಇರುವ ಕಡೆ ಬಳಕೆ
  •   ಕಡತ ವಿಲೇವಾರಿಯ ಹಂತಗಳನ್ನು ಕಡಿಮೆ ಮಾಡುವ ಪ್ರಯತ್ನ
  •  ಕಡತ ವಿಲೇವಾರಿಗೆ ವೇಗ ನೀಡಲು ಅಧಿಕಾರಿಗಳಿಗೆ ಸೂಚನೆ
  •   ರಾಜ್ಯ ಪ್ರವಾಸಕ್ಕೂ ಸಿದ್ಧತೆ
  •  ಸಚಿವರಿಗೂ ಕಾಲಕಾಲಕ್ಕೆ ಸಭೆಗಳನ್ನು ನಡೆಸಿ ವೇಗ ನೀಡಲು ಸೂಚನೆ
  •   ಕಾನೂನು ಸುವ್ಯವಸ್ಥೆ ಎಲ್ಲಿಯೂ ಹಾಳಾಗದಂತೆ ಕಟ್ಟೆಚ್ಚರ
  •  ಅಭಿವೃದ್ಧಿ ಕಾಮಗಾರಿಗಳು ಎದ್ದು ಕಾಣುವಂತೆ ಮಾಡುವುದು
  •  ಪಕ್ಷದ ಕಾರ್ಯಕರ್ತರ ಮೂಲಕ ಅಭಿವೃದ್ಧಿಯ ಬಗ್ಗೆ ಪ್ರಚಾರ
  •  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net