ಬೆಳೆಯುತ್ತಿರುವ ವಾರ್ಡ್‌ಗೆ ಸೌಲಭ್ಯದ್ದೇ ಸವಾಲು

8ckm1- ward -3C
ರಾಷ್ಟ್ರೀಯ ಹೆದ್ದಾರಿಯಲ್ಲಿ ಪೈಪ್‌ಲೈನ್ ಕಾಮಗಾರಿಗೆ ರಸ್ತೆ ಅಗೆದು ಹಾಗೆ ಬಿಟ್ಟಿರುವುದು.
Published on

ಚಿಕ್ಕಮಗಳೂರು: ನಗರದ ಮೂರನೇ ವಾರ್ಡ್‌ನ ವಿಸ್ತೀರ್ಣ ಪ್ರತಿವರ್ಷ ಹೆಚ್ಚಾಗುತ್ತಿದ್ದು ಆದ್ಯತೆ ಮೇರೆಗೆ ಸಮಸ್ಯೆಗಳನ್ನು ಬಗೆಹರಿಸಲಾಗುತ್ತಿದೆ. ಚರಂಡಿ ಹಾಗೂ ಉದ್ಯಾನಗಳಲ್ಲಿ ಗಿಡಗಂಟಿಗಳು ಬೆಳೆದಿದ್ದು ಸೂಕ್ತ ನಿರ್ವಹಣೆ ಇಲ್ಲದೆ ಸಾರ್ವಜನಿಕರಿಗೆ ತೊಂದರೆಯಾಗಿದೆ.
ಈ ಭಾಗದ ಮುಕ್ಕಾಲು ಭಾಗ ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಸಿಡಿಎ), ಉಳಿದ ಭಾಗ ನಗರಸಭೆ ವ್ಯಾಪ್ತಿಗೆ ಒಳಪಡುತ್ತದೆ. 3,600ಕ್ಕೂ ಹೆಚ್ಚು ಮತದಾರರು ಇದ್ದಾರೆ. ಮೂಲ ಸೌಲಭ್ಯಗಳ ಸಮಸ್ಯೆ ಹೆಚ್ಚಿಲ್ಲ. ಚಿಕ್ಕಮಗಳೂರು-ಕಡೂರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಈ ವಾರ್ಡ್ ವ್ಯಾಪ್ತಿಗೆ ಕಲ್ಯಾಣನಗರ, ಚಿಕ್ಕಕುರುಬರಹಳ್ಳಿ, ದೊಡ್ಡ ಕುರುಬರಹಳ್ಳಿ, ಆಶ್ರಯ ಬಡಾವಣೆ, ತುಳಸಿ ಬಡಾವಣೆಗಳು ಬರುತ್ತವೆ. ಗ್ರಾಮಾಂತರ ಪೊಲೀಸ್ ಠಾಣೆ, ಎಐಟಿ ವಿದ್ಯಾರ್ಥಿನಿಲಯ, ಕುಡಿಯುವ ನೀರು ಸರಬರಾಜು ಹಾಗೂ ಒಳಚರಂಡಿ ವಿಭಾಗ, ಸಮುದಾಯ ಭವನ, ಉದ್ಯಾನಗಳು, ದೇವಾಲಯಗಳು, ಓವರ್‌ಹೆಡ್ ಟ್ಯಾಂಕ್‌ಗಳು ಇವೆ. ನಿವಾಸಿಗಳಿಗೆ ದಿನನಿತ್ಯ ಬೇಕಾಗಿರುವ ಅಗತ್ಯ ವಸ್ತುಗಳ ಮಳಿಗೆಗಳೂ ಇವೆ.
ಕಲ್ಯಾಣ ನಗರದಲ್ಲಿನ ಬಡಾವಣೆಗಳಲ್ಲಿ ತೆರಿಗೆ ವಸೂಲಿ, ಬೀದಿ ದೀಪಗಳ ನಿರ್ವಹಣೆ ಸಿಡಿಎ ಮಾಡುತ್ತಿದೆ. ಪೌರಕಾರ್ಮಿಕರು ಪ್ರತಿದಿನ ಮನೆ ಮನೆಯಿಂದ ಕಸ ಸಂಗ್ರಹಿಸಿ ಸ್ವಚ್ಛತೆಗೆ ಆದ್ಯತೆ ನೀಡುತ್ತಿದ್ದಾರೆ. ಇಲ್ಲಿ ಸ್ಥಳೀಯರು ಸಹ ನೈರ್ಮಲ್ಯಕ್ಕೆ ಹೆಚ್ಚು ಒತ್ತು ನೀಡುತ್ತಾರೆ.
ಉದ್ಯಾನಗಳ ನಿರ್ವಹಣೆಯಿಲ್ಲದೆ ಗಿಡಗಂಟಿ ಬೆಳೆದಿವೆ. ಇದರಿಂದ ನಾಗರಿಕರು, ಮಕ್ಕಳು ಉದ್ಯಾನಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಸ್ವಚ್ಛತೆ ಮಾಡಿಸಿದರೆ ವಾಯುವಿಹಾರ ಮಾಡಲು, ಮಕ್ಕಳು ಆಟವಾಡಲು ಅನುಕೂಲವಾಗುತ್ತದೆ. ಅಳವಡಿಸಿರುವ ಮಲ್ಟಿ ಜೀಮ್ ಉಪಕರಣಗಳು ಸಂಪೂರ್ಣ ಹಾಳಾಗಿವೆ.
ವಾರ್ಡ್‌ನಲ್ಲಿ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯಿಂದ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಕಾಮಗಾರಿ ಬಹುತೇಕ ಮುಗಿದಿದ್ದು ಬಾಕಿ ಇರುವ ಕಾಮಗಾರಿಗೆ ಹೆಚ್ಚುವರಿ ಅನುದಾನ ಬೇಕಾಗಿದೆ. ಈ ಸಂಬಂಧ ಇತ್ತೀಚೆಗೆ ಶಾಸಕ ಎಚ್.ಡಿ.ತಮ್ಮಯ್ಯ, ಕ್ರೀಡಾ ಇಲಾಖೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸರ್ಕಾರದ ಗಮನಕ್ಕೆ ತಂದು ಅನುದಾನ ಮಂಜೂರು ಮಾಡಿಸುವ ಭರವಸೆ ನೀಡಿದ್ದಾರೆ. ಕ್ರೀಡಾಂಗಣ ಉಪಯೋಗಕ್ಕೆ ಶೀಘ್ರ ಲಭ್ಯವಾಗಲಿದೆ.
ನಗರಸಭೆಯಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಕಲ್ಯಾಣ ನಗರದಲ್ಲಿ ಸುಸಜ್ಜಿತ ರಸ್ತೆಗಳು, ಯುಜಿಡಿ, ಚರಂಡಿ ವ್ಯವಸ್ಥೆಯಿದೆ. ಇಲ್ಲಿ ಹೆಚ್ಚಾಗಿ ಸರ್ಕಾರಿ ನೌಕರರು, ಉದ್ಯಮಿಗಳು ವಾಸವಿದ್ದು, ವರ್ಷದಿಂದ ವರ್ಷಕ್ಕೆ ಬಡಾವಣೆಯೂ ಬೆಳೆಯುತ್ತಿದ್ದು ಜನಸಂಖ್ಯೆ ಹೆಚ್ಚಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net