

ಶಿವಮೊಗ್ಗ: ಪತ್ರಕರ್ತರ ಮುಂದೆ ಮಾತ್ರ ಸವಾಲುಗಳಿಲ್ಲ. ಓದುಗರು ಮತ್ತು ಸಮಾಜದ ಮುಂದೆಯೂ ಸಾಕಷ್ಟು ಸವಾಲುಗಳಿವೆ ಹಿರಿಯ ಪತ್ರಕರ್ತ ಋಷಿಕೇಶ್ ಬಹದ್ದೂರು ದೇಸಾಯಿ ಹೇಳಿದರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ಶನಿವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಶಿವಮೊಗ್ಗ ಜಿಲ್ಲಾ ಶಾಖೆ, ಶಿವಮೊಗ್ಗ ಪ್ರೆಸ್‌ಟ್ರಸ್ಟ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾಧ್ಯಮ ಕ್ಷೇತ್ರಕ್ಕೆ ಭವಿಷ್ಯದ ಸವಾಲುಗಳು ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಸರಳ ಭಾಷೆಯಲ್ಲಿ ಬರೆಯುವುದು ಮತ್ತು ಜನರಿಗೆ ತಿಳಿಸುವ ಕೆಲಸ ಮಾಡಬೇಕು. ಅದು ಪತ್ರಿಕೆಗಳ ಕೆಲಸ. ಆದರೆ ಸುಳ್ಳು ಸುದ್ದಿಯಲ್ಲಿಂದು ನಿಪುಣತೆ ಹೆಚ್ಚಾಗುತ್ತಿದೆ. ನಾನಾ ಕಾರಣಕ್ಕೆ 9 ಸಾವಿರ ಪತ್ರಕರ್ತರು ದೇಶದ್ರೋಹದ ಕೇಸಿನಲ್ಲಿ ಜೈಲಿನಲ್ಲಿದ್ದಾರೆ ಎಂದರು.
ಆರ್ಟಿಫಿಶಲ್ ಇಂಟಲ್ಜೆನ್ಸಿಯಲ್ಲಿ ಬುದ್ದಿಮತ್ತೆ ಇಲ್ಲ. ನಾವು ಒಂದು ಹುಡುಕಿದರೆ ಅದು ಇನ್ನೊಂದು ಕೊಡುತ್ತದೆ. ಹೀಗಾಗಿ ಅದನ್ನು ಬಳಸಬೇಕೇ ಬೇಡವೇ ಎಂಬುದನ್ನು ನಾವೇ ತೀರ್ಮಾನಿಸಿಕೊಳ್ಳಬೇಕಿದೆ. ಮನಸು ಬದಲಾಯಿಸದೆ ಭಾಷೆ ಬದಲಾಯಿಸಿದರೆ ಉಪಯೋಗವಿಲ್ಲ ಎಂದ ಅವರು, ವಾಟ್ಸ್‌ಆ್ಯಪ್‌ಎಂಬುವುದು ಹೊಸದೇ ಆಗಿರಬಹುದು ಆದರೆ, ಅದರ ಹಿಂದಿನ ಮನಸ್ಥಿತಿ ಹಳೆಯದ್ದೇ ಎಂದರು.