ಸ್ವಾಭಿಮಾನದ ಬದುಕಿಗೆ ಕೇಂದ್ರದ ಯೋಜನೆ ಸಹಕಾರಿ

handicapt programme
ಶಿವಮೊಗ್ಗದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಅಂಗವಿಲಕರೊಂದಿಗೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ಸೆಲ್ಫಿ ಕ್ಲಿಕ್ಕಿಸಿಕೊಂಡರು.
Published on

ಶಿವಮೊಗ್ಗ: ಕೇಂದ್ರ ಸರ್ಕಾರ ವಿವಿಧ ಯೋಜನೆಗಳ ಮೂಲಕ ಅಂಗವಿಕಲರು ಮತ್ತು ಹಿರಿಯ ನಾಗರಿಕರು ಸ್ವಾಭಿಮಾನದಿಂದ ಬದುಕುವಂತೆ ಮಾಡುತ್ತಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ನಗರದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ಕೇಂದ್ರ ಸರ್ಕಾರದ ಅಡಿಪ್ ಮತ್ತು ವಯೋಶ್ರೀ ಯೋಜನೆಯಡಿ ಜಿಲ್ಲೆಯ ಅಂಗವಿಕಲರಿಗೆ ಹಾಗೂ ಹಿರಿಯ ನಾಗರಿಕರಿಗೆ ಅಗತ್ಯವಿರುವ ಸಾಧನ ಸಲಕರಣೆಗಳನ್ನು ವಿತರಿಸಿ ಮಾತನಾಡಿದ ಅವರು, ಜೀವನದಲ್ಲಿ ಸವಾಲುಗಳನ್ನು ಎದುರಿಸಲು ದೇವರು ಅಂಗವಿಕಲರಿಗೆ ದುಪ್ಪಟ್ಟು ಶಕ್ತಿ ನೀಡುತ್ತಾನೆ. ಜತೆಗೆ ಕೇಂದ್ರ ಸರ್ಕಾರವೂ ಅವರು ಸ್ವಾಭಿಮಾನದಿಂದ ಬದುಕಲು ಸೌಲಭ್ಯ ನೀಡುತ್ತಿದೆ ಎಂದರು.
ಅಲಿಂಕೋ ಸಂಸ್ಥೆ ಜಿಲ್ಲಾದ್ಯಂತ ಕೇವಲ ಒಂದೇ ವಾರದಲ್ಲಿ ತಾಲೂಕುವಾರು ಸರ್ವೇ ನಡೆಸಿ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿದೆ. 1,020 ಮಂದಿಗೆ 80 ಲಕ್ಷ ರೂ. ಮೊತ್ತದ ಸಾಧನ ಸಲಕರಣೆ ವಿತರಿಸಲಾಗುತ್ತಿದೆ. ಬಡವರು, ರೈತರು, ಅಂಗವಿಕಲರು, ಹಿರಿಯರು, ಯುವಜನತೆ ಸೇರಿ ಎಲ್ಲರೂ ಸ್ವಾಭಿಮಾನದಿಂದ ಬದುಕಲು ಕೇಂದ್ರ ಸರ್ಕಾರ ಹಲವು ಯೋಜನೆ ಜಾರಿಗೆ ತಂದಿದೆ. ಅಂಗವಿಕಲರಿಗೆ ಯುಡಿಐಡಿ ಕಾರ್ಡ್, ನಿರಾಮಯ ಆರೋಗ್ಯ ಯೋಜನೆ, ಅಂಗವಿಕಲ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್, ಸಾಮಾಜಿಕ ಭದ್ರತಾ ಭತ್ಯೆ, ಅಂಗವಿಕಲರಿಗೆ 5 ಲಕ್ಷ ರೂ.ವರೆಗೆ ವೈದ್ಯಕೀಯ ವೆಚ್ಚ ಭರಿಕೆ ಯೋಜನೆಗಳನ್ನು ನೀಡಿದೆ ಎಂದು ಹೇಳಿದರು.
ಎಂಎಲ್‌ಸಿ ಎಸ್.ರುದ್ರೇಗೌಡ, ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿದರು. ಅಲಿಂಕೋ ಸಂಸ್ಥೆ ಮುಖ್ಯಸ್ಥ ಶಿವಕುಮಾರ್, ಮಾಜಿ ಮೇಯರ್ ಎಸ್.ಶಿವಕುಮಾರ್, ಪಾಲಿಕೆ ಮಾಜಿ ಸದಸ್ಯರಾದ ವಿಶ್ವನಾಥ್, ಆರತಿ ಆ.ಮ.ಪ್ರಕಾಶ್, ಅಂಗವಿಕಲರ ಕಲ್ಯಾಣಾಧಿಕಾರಿ ಎನ್.ಚಂದ್ರಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಬಿ.ಕೃಷ್ಣಪ್ಪ ಇತರರಿದ್ದರು.

600 ಮಂದಿಗೆ ಸಾಧನ-ಸಲಕರಣೆ
ತ್ರಿಚಕ್ರ ವಾಹನ, ವ್ಹೀಲ್ಚೇರ್, ವಾಕಿಂಗ್ ಸ್ಟಿಕ್, ಸಿ.ಪಿ ಚೇರ್, ಸ್ಮಾರ್ಟ್‌ಚೇರ್, ಬ್ರೇಸ್, ಹಿಯರಿಂಗ್ ಏಡ್ ಸೇರಿ 500 ಫಲಾನುಭವಿಗಳಿಗೆ ವಿವಿಧ ರೀತಿಯ ಸಾಧನ-ಸಲಕರಣೆಗಳನ್ನು ನೀಡಲಾಗುತ್ತಿದೆ. ಅಡಿಪ್ ಯೋಜನೆಯಡಿ ಅಂಗವಿಕಲರಿಗೆ 243 ಸಾಧನಗಳು ಮತ್ತು ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ ಹಿರಿಯ ನಾಗರಿಕರಿಗೆ 198 ಸಾಧನಗಳು ಹಾಗೂ ಸಂಸದರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ 32 ಯಂತ್ರಚಾಲಿತ ತ್ರಿಚಕ್ರ ವಾಹನಗಳನ್ನು ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net