ಭೂತಾಯಿಗೆ ಚೆರಗ ಚೆಲ್ಲುವ ರೈತರ ಸಂಭ್ರಮ

ವಿಜಯವಾಣಿ (4)
Published on

ಕೊಯ್ಲು ಮಾಡಿ ಬೆಳೆದ ಬೆಳೆಗಳನ್ನೆಲ್ಲ ಒಂದೆಡೆ ಕೂಡಿಟ್ಟು, ಪೂಜಿಸಿ ಭೂಮಿತಾಯಿಗೆ ಕೃತಜ್ಞತೆ ಸಲ್ಲಿಸುವ ವಿಶೇಷ ದಿನವಿದು. ಬೇಸಾಯ ಉತ್ತಮ ರೀತಿಯಲ್ಲಿ ಸಾಗಿ ಎಲ್ಲರಿಗೂ ಲಾಭದಾಯಕವಾಗಲಿ ಎಂದು ದೇವರಲ್ಲಿ ಬೇಡಿಕೊಳ್ಳುವ ಭೂಮಿ ತಾಯಿಯ ಹಬ್ಬವೇ ಈ ಎಳ್ಳಮಾವಾಸ್ಯೆ.

| ಸವಿತಾ ನಾಗೇಶ್

ಉತ್ತರ ಕರ್ನಾಟಕದ ಬೆಳಗಾವಿ, ಧಾರವಾಡ, ಹಾವೇರಿ, ಕೊಪ್ಪಳ, ಬಳ್ಳಾರಿ, ಗದಗ, ರಾಯಚೂರು, ವಿಜಯನಗರ, ಬೀದರ್, ಕಲಬುರಗಿ, ಯಾದಗಿರಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿನ ಜನ ಎಳ್ಳಮಾವಾಸ್ಯೆ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ಜತೆಗೆ, ಚರಗ ಚೆಲ್ಲುವ ಆಚರಣೆಯೂ ಬಹಳ ಪ್ರಸಿದ್ಧವಾಗಿದೆ.

ಹಬ್ಬದ ಹಿಂದಿನ ದಿನ ಮಹಿಳೆಯರೆಲ್ಲ ಸೇರಿ ಮಾಗಿಯ ಚಳಿಗೆ ತಕ್ಕುದಾದ, ವೈಜ್ಞಾನಿಕ ಹಿನ್ನೆಲೆಯ ಪರಂಪರಾಗತ ಹಬ್ಬದಡುಗೆಯನ್ನು ಅಣಿ ಮಾಡಿಕೊಳ್ಳುತ್ತಾರೆ. ಸಜ್ಜೆ ಹಾಗೂ ಜೋಳದ ರೊಟ್ಟಿ, ಹಸಿ ಈರುಳ್ಳಿ, ಶೇಂಗಾ-ಅಗಸಿ ಚಟ್ನಿಗಳು, ಎಣಗಾಯಿ, ಅಂಬಲಿ, ಬೆಲ್ಲದ ಕರ್ಚಿಕಾಯಿ, ಜೋಳದ ಅನ್ನ, ಕಡುಬು, ಶೇಂಗಾ ಹೂರಣದ ಹೋಳಿಗೆ, ಎಳ್ಳಿನ ಪುಡಿ, ಎಳ್ಳಿನ ಉಂಡೆ, ಭರ್ತಾ, ಪುಂಡಿ ಪಲ್ಯ, ಹಿಂಡಿ ಪಲ್ಯ, ಹಸಿಗಡಲೆ ಪಲ್ಯ, ಸೊಪ್ಪು, ಕಾಳುಗಳಿಂದ ತಯಾರಿಸಿದ ಬಜ್ಜಿ ಮುಂತಾದವುಗಳನ್ನು ಸಿದ್ಧಪಡಿಸಿಕೊಳ್ಳುತ್ತಾರೆ.

ಬುತ್ತಿ ಕಟ್ಟಿಕೊಂಡು ಕುಟುಂಬ ಹಾಗೂ ಸ್ನೇಹಿತರೊಟ್ಟಿಗೆ ಎತ್ತಿನಗಾಡಿಯಲ್ಲಿ ಹೊಲಗಳಿಗೆ ತೆರಳಿ, ಅಲ್ಲಿ ಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ ಅರಿಶಿಣ, ಕುಂಕುಮ, ಹೂವು, ಹಣ್ಣು, ಕಾಯಿ, ಬಳೆ, ಬಿಚ್ಚೋಲೆ, ಸೀರೆ, ರವಿಕೆಗಳಿಂದ ಭೂತಾಯಿ ಹಾಗೂ ಲಕ್ಷ್ಮಿಗೆ ಉಡಿ ತುಂಬಿ ಆಶೀರ್ವಾದ ಪಡೆಯುತ್ತಾರೆ. ಅಡುಗೆಯ ಸ್ವಲ್ಪ ಭಾಗವನ್ನು ಉಂಡೆ ಉಂಡೆ ಮಾಡಿ ಹೊಲದ ಎಲ್ಲ ದಿಕ್ಕುಗಳಲ್ಲಿ ಎರಚುತ್ತಾರೆ. ಇದಕ್ಕೆ ಚರಗ ಚೆಲ್ಲುವುದು ಎನ್ನುತ್ತಾರೆ. ನಂತರ, ತಾವು ತಂದ ತರಹೇವಾರಿ ಭಕ್ಷ್ಯಭೋಜ್ಯಗಳನ್ನು ಪಾಂಡವರಿಗೆ ಹಾಗೂ ಲಕ್ಷ್ಮಿದೇವಿಗೆ ನೈವೇದ್ಯ ಮಾಡುತ್ತಾರೆ. ಬಳಿಕ ಕುಟುಂಬದವರಿಗೂ ಉಣಬಡಿಸಿ ತಾವೂ ಉಂಡು ಸಂಭ್ರಮಿಸುತ್ತಾರೆ. ಜೋಳದ ತೆನೆಗಳನ್ನು ಬೆಂಕಿಯಲ್ಲಿ ಸುಟ್ಟು ತಿನ್ನುವುದೂ ಇದೆ (ಶಿತನಿ).

ಜೋಳವು ಕಡಿಮೆ ಖರ್ಚಿನಲ್ಲಿ ಉತ್ತಮ ಫಸಲು ಬರುವ ಬೆಳೆ. ಕೆಲವು ಗ್ರಂಥಗಳಲ್ಲಿ ಪಾಂಡವರು, ಕೌರವರು ಕೂಡ ಜೋಳದ ಬೆಳೆ ಬೆಳೆಯುತ್ತಿದ್ದರು ಎಂಬ ಉಲ್ಲೇಖವಿದೆ. ಇನ್ನು ಕೆಲವು ಭಾಗಗಳಲ್ಲಿ ಎಳ್ಳು ಬೆಲ್ಲವನ್ನೂ ಎರಚುತ್ತಾರೆ. ಈ ಆಹಾರಗಳು ಭೂಮಿಯ ಫಲವತ್ತತೆಯನ್ನು ಕಾಪಾಡುವ ಎರೆಹುಳುಗಳಿಗೆ ಆಹಾರವಾಗುತ್ತದೆ ಎನ್ನಲಾಗಿದೆ. ಲಕ್ಷ್ಮಿ ಹಾಗೂ ಶಿವನ ಆರಾಧನೆಗೆ ಹಾಗೂ ಪೂರ್ವಜರ ಶಾಂತಿಗೆ ಅಮಾವಾಸ್ಯೆ ಬಹಳ ಫಲಪ್ರದವಾದ ದಿನ ಎನ್ನಲಾಗುತ್ತದೆ. ಈ ದಿನ ಲಕ್ಷ್ಮಿಯ ಆರಾಧನೆ ಮಾಡುವುದರಿಂದ ಜೀವನದಲ್ಲಿ ಸಂಪತ್ತು, ಸಂತೋಷ ಲಭಿಸುತ್ತದೆ ಎಂಬ ನಂಬಿಕೆ ಇದೆ.

ವೈಜ್ಞಾನಿಕ ಕಾರಣ

ಎಳ್ಳಮಾವಾಸ್ಯೆ ಹೊತ್ತಿಗೆ ಹಿಂಗಾರು ಪೈರು ಬೆಳೆದು ನಿಂತಿರುತ್ತದೆ. ಅದರಲ್ಲಿಯೂ ಜೋಳದ ಮಧ್ಯೆ ಕಡಲೆ ಬೆಳೆಗೆ ಕಾಯಿಕೊರಕ ಎಂಬ ಹುಳ ಬಿದ್ದು ಹಾನಿ ಮಾಡುತ್ತದೆ. ಉತ್ತರ ಕರ್ನಾಟಕದಲ್ಲಿ ಅತಿ ಹೆಚ್ಚು ಜೋಳ ಮತ್ತು ಕಡಲೆಯನ್ನು ಹಿಂಗಾರು ಬೆಳೆಗಳಾಗಿ ರೈತರು ಬೆಳೆಯುತ್ತಾರೆ. ಖಾದ್ಯ ತಿನ್ನಲು ಹಕ್ಕಿಗಳು ಬರುತ್ತವೆ. ಅವು ಜೋಳದ ಮಧ್ಯೆ ಆಹಾರ ತಿನ್ನಲು ಇಳಿಯುತ್ತವೆ. ಆಗ ಖಾದ್ಯದ ಜೊತೆಗೆ ಕಡಲೆಗೆ ಬಿದ್ದಿರೋ ಕಾಯಿಕೊರಕ ಹುಳವನ್ನು ಕೂಡ ತಿನ್ನುವುದರಿಂದ ಹುಳುಗಳ ನಿಯಂತ್ರಣವೂ ಆಗುತ್ತದೆ. ಪೈರು ಸೊಂಪಾಗಿ ಬೆಳೆಯುತ್ತದೆ. ಹಾಗಾಗಿ ಚರಗ ಚೆಲ್ಲುವ ಆಚರಣೆಯನ್ನು ತಲತಲಾಂತರದಿಂದ ಮಾಡಿಕೊಂಡು ಬರಲಾಗುತ್ತಿದೆ ಎಂಬುದು ಪ್ರತೀತಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net