

ಬೆಂಗಳೂರು: ಬಿಜೆಪಿ ಶಾಸಕರ ವಿರುದ್ಧ ಇಲ್ಲದ ಸಿಬಿಐ ತನಿಖೆ ನನ್ನ ವಿರುದ್ಧ ಮಾತ್ರ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಿಡಿಮಿಡಿಗೊಂಡಿದ್ದಾರೆ.
ಸಿಬಿಐ ತನಿಖೆ ಮುಂದುವರಿಸಲು ನ್ಯಾಯಾಲಯ ಅವಕಾಶ ನೀಡಿದ್ದರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಾಜಕೀಯ ಉದ್ದೇಶಕ್ಕಾಗಿಯೇ ಯಡಿಯೂರಪ್ಪ ಅವರು ನನ್ನ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಿದೆ. ಬಿಜೆಪಿ ಶಾಸಕರ ವಿರುದ್ಧವೂ ಬೇಕಾದಷ್ಟು ಪ್ರಕರಣಗಳಿವೆ. ಬೇರೆಯವರದ್ದನ್ನು ತನಿಖೆಗೆ ನೀಡದೆ ನನ್ನದನ್ನು ಮಾತ್ರ ನೀಡಿದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಡ್ವೋಕೇಟ್ ಜನರಲ್ ಅವರೇ ಈ ಪ್ರಕರಣದ ಸಿಬಿಐ ತನಿಖೆಗೆ ಅನುಮತಿ ನೀಡಲು ಬರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು. ಆದರೆ ಈ ವಿಚಾರವನ್ನು ಸ್ಪೀಕರ್ ಬಳಿಯೂ ತೆಗೆದುಕೊಂಡು ಹೋಗದೆ ಯಡಿಯೂರಪ್ಪ ಅವರು ಸೀದಾ ಸಿಬಿಐ ತನಿಖೆಗೆ ಅನುಮತಿ ನೀಡಿದರು ಎಂದರು.
ಸಿಬಿಐ ಅವರು ಶೇ.90 ರಷ್ಟು ತನಿಖೆ ಮುಗಿದಿದೆ ಎಂದು ಹೇಳಿದ್ದಾರೆ. ನನ್ನ ಬಳಿ ಯಾವ ವಿಚಾರಣಾಧಿಕಾರಿಯೂ ಬಂದಿಲ್ಲ. ವಿವರವನ್ನೂ ಪಡೆದಿಲ್ಲ. ನೋಡೋಣ ಏನು ಮಾಡುತ್ತಾರೋ. ನಾನು ನನ್ನ ವಕೀಲರ ಬಳಿ ಚರ್ಚೆ ಮಾಡುತ್ತೇನೆ ಎಂದು ಹೇಳಿದರು.
ವಿರೋಧ ಪಕ್ಷಗಳ ಟೀಕೆ ಬಗ್ಗೆ ಮಾಧ್ಯಮಗಳು ಪ್ರತಿಕ್ರಿಯೆ ಬಯಸಿದಾಗ, ಹಾದಿ- ಬೀದಿಯಲ್ಲಿ ಹೋಗುವವರಿಗೆಲ್ಲಾ ಉತ್ತರ ಕೊಡಲು ಆಗುವುದಿಲ್ಲ. ನ್ಯಾಯಾಲಯ ಏನು ಹೇಳುತ್ತದೆಯೋ ಅದಕ್ಕೆ ಗೌರವ ಕೊಡಬೇಕು. ನೀವು ಅಷ್ಟೇ (ಮಾಧ್ಯಮದವರು) ಮಿಕ್ಕಿದವರ ಮಾತಿಗೆಲ್ಲಾ ಕಿವಿಗೊಡಬಾರದು ಎಂದು ಸಲಹೆ ನೀಡಿದರು.