

ಚಿಕ್ಕಮಗಳೂರು: ಸಾಮಾಜಿಕ ಪರಿವರ್ತನಾಕಾರ ಬ್ರಹ್ಮಶ್ರೀ ನಾರಾಯಣಗುರು ಮತ್ತು ಶಿವಶರಣ ನುಲಿಯ ಚಂದಯ್ಯ ಅವರ ಆದರ್ಶಗಳು ಮತ್ತು ತತ್ವ ಸಿದ್ಧಾಂತಗಳನ್ನು ಎಲ್ಲ ಸಮುದಾಯದ ಜನರು ಮೈಗೂಡಿಸಿಕೊಂಡು ಮುನ್ನಡೆಯಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಲಹೆ ನೀಡಿದರು.
ಜಿಲ್ಲಾಡಳಿತದಿಂದ ಗುರುವಾರ ನಗರದ ಕುವೆಂಪು ಕಲಾಮಂದಿರದಲ್ಲಿ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಹಾಗೂ ಶಿವಶರಣ ನುಲಿಯ ಚಂದಯ್ಯ ಅವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಅಸ್ಪಶ್ಯತೆ ತಾಂಡವವಾಡುತ್ತಿದ್ದಂತಹ ಸಂದರ್ಭ, ಕೆಳವರ್ಗದ ಜನರಿಗೆ ದೇವಾಲಯ ಪ್ರವೇಶ ಇಲ್ಲದಂತಹ ಕಾಲದಲ್ಲಿ ನಾರಾಯಣಗುರುಗಳು ಐವತ್ತಕ್ಕೂ ಹೆಚ್ಚು ದೇವಾಲಯಗಳನ್ನು ನಿರ್ಮಿಸಿದರು. ಮಾನವತ್ವದಿಂದ ದೈವತ್ವದೆಡೆಗೆ ಹೋಗಬಹುದು ಎನ್ನುವುದಕ್ಕೆ ನಾರಾಯಣಗುರು ಮತ್ತು ನುಲಿಯ ಚಂದಯ್ಯ ಉದಾಹರಣೆ. ಮಹಾತ್ಮರ ಜಯಂತಿಯನ್ನು ಎಲ್ಲರೂ ಒಟ್ಟಾಗಿ ಆಚರಿಸಬೇಕು. ಅವರ ತತ್ವ ಸಿದ್ಧಾಂತಗಳಡಿ ಸಾಗಬೇಕು ಎಂದರು.
ನಾರಾಯಣಗುರುಗಳು ಜನಿಸದಿದ್ದರೆ ದಕ್ಷಿಣ ಭಾರತದಲ್ಲಿ ಕೆಳವರ್ಗದ ಜನ ಇಂದು ಗೌರವದಿಂದ ಬದುಕಲು ಸಾಧ್ಯವಾಗುತ್ತಿರಲಿಲ್ಲ. ನುಲಿಯ ಚಂದಯ್ಯ ಅವರು ಭಕ್ತಿ ಭಂಡಾರಿ ಬಸವಣ್ಣನ ಕಾಯಕವೇ ಕೈಲಾಸ ತತ್ವದಡಿ ಬಾಳಿದವರು. ಬಸವಣ್ಣ, ನುಲಿಯ ಚಂದಯ್ಯ ಮತ್ತು ನಾರಾಯಣಗುರು ಅವರಂತಹ ಮಹಾತ್ಮರಿಂದಾಗಿ ನಮ್ಮ ಸಂಸ್ಕೃತಿ, ಸಂಪ್ರದಾಯಗಳು ಉಳಿದಿವೆ ಎಂದು ತಿಳಿಸಿದರು.
ಸಮಾಜದ ಎಲ್ಲ ಜಾತಿಗಳ ಜನರೂ ಒಗ್ಗೂಡಿ ಬದುಕಿದಾಗ ಮಾತ್ರ ನಾರಾಯಣಗುರು, ಕನಕದಾಸ, ಬಸವಣ್ಣ, ನುಲಿಯ ಚಂದಯ್ಯ ಅವರಂತಹ ಮಹಾತ್ಮರ ಆತ್ಮಕ್ಕೆ ಶಾಂತಿ ಲಭಿಸುತ್ತದೆ ಎಂದು ತಿಳಿಸಿದರು.
ಬ್ರಹ್ಮಶ್ರೀ ನಾರಾಯಣಗುರು ಕುರಿತು ಚಿಂತಕ ಎಸ್.ವಿಜಯಕುಮಾರ್, ನುಲಿಯ ಚಂದಯ್ಯ ಕುರಿತು ಸಾಹಿತಿ ಬಿ.ತಿಪ್ಪೇರುದ್ರಪ್ಪ ಉಪನ್ಯಾಸ ನೀಡಿದರು. ಶಾಸಕ ಎಚ್.ಡಿ.ತಮ್ಮಯ್ಯ, ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಎಸ್ಪಿ ಡಾ. ವಿಕ್ರಮ ಅಮಟೆ, ಜಿಪಂ ಸಿಇಒ ಡಾ. ಗೋಪಾಲಕೃಷ್ಣ ಹಾಗೂ ಸಮುದಾಯಗಳ ಮುಖಂಡರು ಉಪಸ್ಥಿತರಿದ್ದರು.