ರೂಮ್‌ಗೆ ಕರೆದು ಪೊಲೀಸ್ ಎಂದು ಬೆದರಿಸಿ ಟೆಕ್ಕಿಯ ಸುಲಿಗೆ ಮಾಡಿದ ಕಾಲ್‌ಗರ್ಲ್

honeytrap
Published on

ಬೆಂಗಳೂರು: ಖಾಸಗಿ ಕ್ಷಣಗಳನ್ನು ಕಳೆಯಲು ಹೋಟೆಲ್‌ಗೆ ಸ್‌ಟಾವೇರ್ ಇಂಜಿನಿಯರ್‌ನನ್ನು ಕರೆಸಿಕೊಂಡ ಕಾಲ್‌ಗರ್ಲ್, ತಾನು ಪೊಲೀಸ್ ಅಧಿಕಾರಿ ಎಂದು ಬೆದರಿಸಿ 1.10 ಲಕ್ಷ ರೂ. ಸುಲಿಗೆ ಮಾಡಿದ್ದಾಳೆ.

ಪದ್ಮನಾಭನಗರದ 30 ವರ್ಷದ ಟೆಕ್ಕಿ ವಂಚನೆಗೆ ಒಳಗಾದವ. ಈತ ಕೊಟ್ಟಿರುವ ದೂರಿನ ಮೇರೆಗೆ   ಸಿಇಎನ್ ಠಾಣೆಯಲ್ಲಿ ಶಿವಾನಿ ಎಂಬಾಕೆ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಮೆಸೇಜ್‌ಪಬ್ಲಿಕ್.ಕಾಮ್‌ನಲ್ಲಿ ಟೆಕ್ಕಿಗೆ ಯುವತಿ ಪರಿಚಯವಾಗಿದ್ದು, ವಾಟ್ಸ್‌ಆ್ಯಪ್ ಕರೆ ಮಾಡಿ ಕಾಲ್ ಗರ್ಲ್ ಎಂದು ಪರಿಚಯ ಮಾಡಿಕೊಂಡಿದ್ದಳು. 1 ಗಂಟೆಗೆ 6 ಸಾವಿರ ರೂ. ನೀಡಿದರೆ ನಿನ್ನ ಜೊತೆಗೆ ಖಾಸಗಿ ಕ್ಷಣಗಳನ್ನು ಕಳೆಯುವುದಾಗಿ ಆಮಿಷವೊಡ್ಡಿದ್ದಳು. ಇದಕ್ಕೆ ಒಪ್ಪಿಕೊಂಡ ಟೆಕ್ಕಿ, ರೂಮ್ ಬುಕ್ ಮಾಡುವಂತೆ ಸಲಹೆ ನೀಡಿದ್ದ. ಅದರಂತೆ ಆ. 27ರಂದು ಬಿಟಿಎಂ ಲೇಔಟ್‌ನಲ್ಲಿ ಹೋಟೆಲ್ ರೂಮ್ ಬುಕ್ ಮಾಡಿದ್ದು, ಸಂಜೆ 5.30ಕ್ಕೆ ಭೇಟಿ ಮಾಡಲು ಸೂಚಿಸಿದ್ದಳು. ಆದರೆ 6.25ಕ್ಕೆ ಬಂದಿದ್ದು, ಯುವಕನಿಂದ 10 ಸಾವಿರ ರೂ. ಮತ್ತು ಕ್ಯಾಬ್ ಬಾಡಿಗೆ ಸಾವಿರ ರೂ.ಗಳನ್ನು ತನ್ನ ವ್ಯಾಲೆಟ್‌ಗೆ ವರ್ಗಾವಣೆ ಮಾಡಿಸಿಕೊಂಡಿದ್ದಳು. ಇದಾದ ಮೇಲೆ ವರಸೆ ಬದಲಾಯಿಸಿ, ‘ನಾನು ಪೊಲೀಸ್. ಹೆಚ್ಚಿಗೆ ಮಾತನಾಡಿದರೆ ಕೇಸ್ ಹಾಕಿ ಜೈಲಿಗೆ ಕಳುಹಿಸುತ್ತೇನೆ’ ಎಂದು ಬೆದರಿಸಿ 1 ಲಕ್ಷ ರೂ. ನೀಡುವಂತೆ ಕೇಳಿದ್ದಳು. ಹೆದರಿದ ಟೆಕ್ಕಿ, ಆರೋಪಿ ಖಾತೆಗೆ ಹಣ ವರ್ಗಾಯಿಸಿದ್ದ.

ಬಳಿಕ, ಈ ವಿಷಯದ ಬಗ್ಗೆ ಪೊಲೀಸರಿಗೆ ದೂರು ಕೊಡದಂತೆ ಎಚ್ಚರಿಕೆ ಕೊಟ್ಟು ಹೊರಟು ಹೋಗಿದ್ದಳು. ನೊಂದ ಟೆಕ್ಕಿ, ಸಿಇಎನ್ ಠಾಣೆಗೆ ದೂರು ಸಲ್ಲಿಸಿದ್ದಾನೆ. ಇದರ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net