ಬಹುರಾಜ್ಯ ಸಹಕಾರ ಸೊಸೈಟಿ; ಮೂರು ಹೊಸ ಸಂಸ್ಥೆಗಳ ಸ್ಥಾಪನೆಗೆ ಕೇಂದ್ರ ಸಂಪುಟ ನಿರ್ಧಾರ

45635
Published on

ನವದೆಹಲಿ: ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಹ ಸಾವಯವ, ರಫ್ತು ಮತ್ತು ಬೀಜ ಕುರಿತ ಬಹುರಾಜ್ಯಗಳ ಸಹಕಾರ ಸೊಸೈಟಿಗಳ ಸ್ಥಾಪನೆಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ. ಈ ಸೊಸೈಟಿಗಳು 2022ರ ಬಹುರಾಜ್ಯ ಸಹಕಾರ ಸೊಸೈಟಿಗಳ (ಎಂಎಸ್​ಸಿಎಸ್) ಕಾಯ್ದೆ ಅಡಿಯಲ್ಲಿ ಸ್ಥಾಪಿತವಾಗಲಿದ್ದು, ಪ್ರಾಥಮಿಕ ಪತ್ತಿನ ಸಹಕಾರ ಸಂಘ, ಜಿಲ್ಲಾ, ರಾಜ್ಯಗಳ ಸಹಕಾರ ಸಂಘಗಳಿಂದ ಹಿಡಿದು ರಾಷ್ಟ್ರಮಟ್ಟದ ಅಪೆಕ್ಸ್​ವರೆಗೆ ಸಹಕಾರಗಳು ಹಾಗೂ ಕೃಷಿ ಉತ್ಪನ್ನ ಸಂಸ್ಥೆ (ಎಫ್​ಪಿಒ)ಗಳು ಸಾವಯವ ಸೊಸೈಟಿಗಳಾಗಿ ನೋಂದಣಿ ಆಗ ಬಹುದು. ಈ ಸೊಸೈಟಿಗಳಲ್ಲಿ ಚುನಾಯಿತ ಪ್ರತಿನಿಧಿಗಳಿದ್ದು, ಇದಕ್ಕೊಂದು ಆಡಳಿತ ಮಂಡಳಿ ಇರಲಿದೆ.

ಇದರ ಉದ್ದೇಶ ಗ್ರಾಮೀಣ ಪ್ರಗತಿ ಮತ್ತು ರೈತರ ಆದಾಯ ಹೆಚ್ಚಿಸುವುದಾಗಿದೆ ಎಂದು ಸಂಪುಟ ಸಭೆಯ ನಂತರ ಸಚಿವ ಭೂಪೇಂದ್ರ ಸಿಂಗ್ ಯಾದವ್ ಹೇಳಿದರು. ಕೃಷಿ ಮತ್ತು ರೈತರ ಕಲ್ಯಾಣ, ವಾಣಿಜ್ಯ ಮತ್ತು ಕೈಗಾರಿಕೆ, ಆಹಾರ ಸಂಸ್ಕರಣಾ ಉದ್ದಿಮೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಗಳು ಇನ್ನಿತರ ಇಲಾಖೆಗಳು ಒಟ್ಟಾಗಿ ಶ್ರಮಿಸಲಿವೆ ಎಂದ ಯಾದವ್, ದೇಶದಲ್ಲಿ 8.50 ಲಕ್ಷ ನೋಂದಾಯಿತ ಸಹಕಾರ ಸಂಘಗಳಿದ್ದು, 29 ಕೋಟಿ ಸದಸ್ಯರು ಇದ್ದಾರೆಂದು ಮಾಹಿತಿ ನೀಡಿದರು.

ಸಾವಯವ ಸೊಸೈಟಿ
ಬಹುರಾಜ್ಯ ಸಾವಯವ ಸೊಸೈಟಿಗಳು ಸಾವಯವ ಕೃಷಿಗೆ ಉತ್ತೇಜನ ನೀಡುವ ಕಾರ್ಯವನ್ನು ಮಾಡುತ್ತವೆ. ಸಾವಯವ ಬೆಳೆಯ ಖರೀದಿ, ಪ್ರಮಾಣೀಕರಣ, ಪರಿಶೀಲನೆ, ಉತ್ಪನ್ನದ ಬ್ರಾ್ಯಂಡ್, ಮಾರುಕಟ್ಟೆಗಾಗಿ ಕೇಂದ್ರಕ್ಕೆ ಸಂಬಂಧಿಸಿದ ಸಚಿವಾಲಯಗಳ ಬೆಂಬಲ ದೊಂದಿಗೆ ಈ ಸೊಸೈಟಿಗಳು ಕಾರ್ಯ ನಿರ್ವಹಿಸಲಿವೆ. ಈ ಕಾರ್ಯಗಳಿಗೆ ಅಗತ್ಯ ಲ್ಯಾಬ್​ಗಳ ಸ್ಥಾಪನೆಗೂ ಇದರಿಂದ ಸಹಾಯವಾಗಲಿದೆ.

ರಫ್ತು ಸೊಸೈಟಿ
ಬಹುರಾಜ್ಯಗಳ ರಫ್ತು ಸೊಸೈಟಿಗಳ ಮೂಲಕ ಭಾರತದ ಸಹಕಾರ ವಲಯದ ಸಾಮರ್ಥ್ಯವು ಜಾಗತಿಕ ಮಾರುಕಟ್ಟೆಗೆ ತೆರೆದುಕೊಳ್ಳಲಿದೆ. ಈ ಸೊಸೈಟಿಗಳು ನಿರ್ಯಾತಕ್ಕೆ ಸಂಬಂಧಿಸಿದ ಯೋಜನೆ ಮತ್ತು ನೀತಿಯ ಲಾಭಗಳನ್ನು ಸಹಕಾರ ವಲಯಕ್ಕೆ ತಂದು ಕೊಡಲಿದೆ. ಕೇಂದ್ರದ ವಿವಿಧ ಸಚಿವಾಲಯಗಳು ಇದಕ್ಕೆ ಬೆಂಬಲವಾಗಿ ನಿಲ್ಲಲಿವೆ. ಇದರಿಂದ ಉದ್ಯೋಗಾವಕಾಶ ಕೂಡ ಹೆಚ್ಚಲಿದೆ. ಭಾರತದಲ್ಲೇ ತಯಾರಿಸಿದ ವಸ್ತುಗಳ ರಫ್ತಿಗೂ ಅನುಕೂಲ ಆಗಲಿದೆ.

ಬೀಜ ಸೊಸೈಟಿ
ಬೀಜಗಳ ಖರೀದಿ, ಸಂಸ್ಕರಣೆ, ಬ್ರಾ್ಯಂಡ್, ಲೇಬಲ್ ಮತ್ತು ಪ್ಯಾಕಿಂಗ್, ಸಂಗ್ರಹಣೆ, ಮಾರುಕಟ್ಟೆ, ವಿತರಣೆ, ಗುಣಮಟ್ಟದ ಬೀಜಗಳ ಅಭಿವೃದ್ಧಿಗೆ ಸಂಶೋಧನೆ, ದೇಶೀಯ ನೈಸರ್ಗಿಕ ಬೀಜಗಳ ಬಳಕೆಗೆ ಉತ್ತೇಜನ ಮತ್ತು ಅವುಗಳನ್ನು ಕಾಪಿಡುವಿಕೆಯು ಬಹುರಾಜ್ಯ ಬೀಜ ಸೊಸೈಟಿಗಳ ಕಾರ್ಯವಾಗಲಿದೆ. ಹೆಚ್ಚು ಇಳುವರಿ ನೀಡುವಂತಹ ಮತ್ತು ಫಸಲಿನ ಅವಧಿಯನ್ನು ತಗ್ಗಿಸುವಂತಹ ಬೀಜಗಳ ಬಳಕೆ ಉತ್ತೇಜಿಸಲು ಬೀಜ ವಿನಿಮಯ ಬೆಲೆ (ಎಸ್​ಆರ್​ಆರ್) ತಳಿ ವಿನಿಮಯ ಬೆಲೆ (ವಿಆರ್​ಆರ್)ಗೆ ಈ ಸೊಸೈಟಿಗಳು ಪ್ರೋತ್ಸಾಹದಾಯಕವಾಗಿರಲಿವೆ.

ಸಹಕಾರ ವಲಯವು ಸದೃಢ ಆರ್ಥಿಕತೆಯ ನಿರ್ವಣದಲ್ಲಿ ಮಹತ್ವದ ಪಾತ್ರವಹಿಸುವೆ. ಹಾಗೆಯೇ ಗ್ರಾಮೀಣಾಭಿವೃದ್ಧಿಯಲ್ಲಿ ಇವುಗಳ ಪಾತ್ರ ಹಿರಿದು. ಸಹಕಾರದಿಂದ ಸಮೃದ್ಧಿ ದೃಷ್ಟಿಕೋನದಿಂದ ಬಹುರಾಜ್ಯಗಳ ಸೊಸೈಟಿ ಸ್ಥಾಪನೆ ಕುರಿತು ಸಂಪುಟ ಮಹತ್ವದ ತೀರ್ವನವನ್ನು ಕೈಗೊಂಡಿದೆ.
| ನರೇಂದ್ರ ಮೋದಿ ಪ್ರಧಾನಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net