ಬೊಕ್ಕಸಕ್ಕೆ ಎತ್ತಿನಹೊಳೆ ಹೊರೆ; ರೂ. 12,000 ಕೋಟಿಯಿಂದ ರೂ. 23,251 ಕೋಟಿಗೆ ಏರಿಕೆ | ಪರಿಷ್ಕೃತ ವೆಚ್ಚಕ್ಕೆ ಒಪ್ಪಿಗೆ

ಎತ್ತಿನಹೊಳೆ
Published on

ಬೆಂಗಳೂರು: ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ 23,251 ಕೋಟಿ ರೂ. ಮೊತ್ತದ ಪರಿಷ್ಕೃತ ಯೋಜನಾ ವರದಿಗೆ ಸಚಿವ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಈ ಯೋಜನೆ ಆರಂಭಿಸುವ ಸಂದರ್ಭದಲ್ಲಿ 12,000 ಕೋಟಿ ಆಗಬಹುದೆಂದು ನಿರೀಕ್ಷೆ ಮಾಡಿದ್ದೆವು. ಟೆಂಡರ್, ಕಾಲ ಮುಂದೆ ಹೋದಂತೆಲ್ಲ ಈ ಮಟ್ಟಕ್ಕೆ ಬಂದಿದೆ. ಇದು ಅಂತಿಮವಾಗಬಹುದು ಎಂದು ತಿಳಿದುಕೊಂಡಿದ್ದೇವೆ. ಈಗಾಗಲೆ ಸುಮಾರು ಶೇ.99 ಟೆಂಡರ್ ಆಗಿವೆ ಎಂದರು.

ದರ ಹೆಚ್ಚಳ ಆಗುವುದು ಷೆಡ್ಯೂಲ್, ಮಾರುಕಟ್ಟೆ ದರ ಆದರಿಸುತ್ತದೆ. ಭೂಸ್ವಾಧೀನ ದರ ಹೆಚ್ಚಾದಾಗಲೂ ಯೋಜನಾ ವೆಚ್ಚ ಹೆಚ್ಚಾಗುತ್ತವೆ. ಈ ಯೋಜನೆ ಕೈಗೆತ್ತಿಕೊಂಡಾಗ ಭೂಮಿ ದರ 2 ರಷ್ಟಿತ್ತು. 2013ರ ಕಾಯ್ದೆ ಪ್ರಕಾರ 4 ಪಟ್ಟಾಗಿದೆ. ಭೂಸ್ವಾಧೀನದಿಂದಲೇ ದರ ಹೆಚ್ಚಾಗಿದೆ. ಕಬ್ಬಿಣ, ಸಿಮೆಂಟ್, ಮರಳು ದರ ಏರಿಕೆ ಕೂಡ ಎತ್ತಿನಹೊಳೆ ಯೋಜನೆ ದರ ಪರಿಷ್ಕರಣೆಗೆ ಕಾರಣವಾಗಿದೆ ಎಂದು ಹೇಳಿದರು.

ಸಿವಿಲ್ ಸೇವೆ ತಿದ್ದುಪಡಿ:

ರಾಜ್ಯ ಸಿವಿಲ್ ಸೇವಾ ನೌಕರರು ಆಸ್ತಿ ವಿವರ ಸಲ್ಲಿಸುವ ನಿಯಮ ತಿದ್ದುಪಡಿಗೆ ಸಚಿವ ಸಂಪುಟ ಸಭೆ ಸಮ್ಮತಿ ನೀಡಿದೆ. ರಾಜ್ಯ ಸಿವಿಲ್ ಸೇವಾ ನೌಕರರು ಪ್ರತಿ ವರ್ಷದ ಡಿಸೆಂಬರ್ ಅಂತ್ಯಕ್ಕೆ ಆಸ್ತಿ ವಿವರ ಸಲ್ಲಿಸಬೇಕಿತ್ತು. ಈಗ ಅದನ್ನು ಮಾರ್ಚ್ ಅಂತ್ಯಕ್ಕೆ ಸಲ್ಲಿಸುವ ಕುರಿತು ಕರ್ನಾಟಕ ಸಿವಿಲ್ ಸೇವೆಗಳು(ನಡತೆ)(2ನೇ ತಿದ್ದುಪಡಿ) ನಿಯಮಗಳು-2022ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಜೆ.ಸಿ.ಮಾಧುಸ್ವಾಮಿ ಹೇಳಿದರು.

39 ಮೊಕದ್ದಮೆ ವಾಪಸ್:

ರಾಜ್ಯದ ವಿವಿಧ ಠಾಣೆಗಳಲ್ಲಿ ದಾಖಲಾದ 39 ಮಂದಿ ವಿರುದ್ಧದ ವಿವಿಧ ಮೊಕದ್ದಮೆ ವಾಪಸ್ ಪಡೆಯಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಹಿಂಪಡೆದುಕೊಂಡ ಮೊಕದ್ದಮೆಗಳು ಗಂಭೀರ ಸ್ವರೂಪದ್ದಲ್ಲ, ಜನ ಪರ ಹೋರಾಟದಲ್ಲಿ ಪಾಲ್ಗೊಂಡವರ ವಿರುದ್ಧ ದಾಖಲಾಗಿದ್ದ ಸಾಮಾನ್ಯ ಪ್ರಕರಣಗಳಾಗಿವೆ. ಒಟ್ಟು 41 ಪ್ರಕರಣಗಳಲ್ಲಿ 2 ಪ್ರಕರಣಗಳು ಜನ ಪ್ರತಿನಿಧಿ ಕಾಯ್ದೆ ವ್ಯಾಪ್ತಿಯಲ್ಲಿ ಇರುವುದರಿಂದ ಅವನ್ನು ವಾಪಸ್ ಪಡೆಯುತ್ತಿಲ್ಲ ಕ್ರಿಮಿನಲ್ ಮೊಕದ್ದಮೆಗಳನ್ನು ವಾಪಸ್ ಪಡೆಯಲು ನಿರ್ಧರಿಸಲಾಗಿದೆ. ಹೋರಾಟ, ಪ್ರತಿಭಟನೆ, ದೊಂಬಿಯಲ್ಲಿ ಪಾಲ್ಗೊಂಡ ವ್ಯಕ್ತಿಗಳ ಮೇಲಿನ ಸಣ್ಣ ಪುಟ್ಟ ಮೊಕದ್ದಮೆಗಳನ್ನು ವಾಪಾಸು ಪಡೆಯಲಾಗಿದೆ. ಕೊಲೆ, ಕೊಲೆ ಯತ್ನ, ಅತ್ಯಾಚಾರದಂಥ ಪ್ರಕರಣಗಳು ಇದರಲ್ಲಿ ಒಳಗೊಂಡಿಲ್ಲ ಎಂದು ಮಾಧುಸ್ವಾಮಿ ಸ್ಪಷ್ಟಪಡಿಸಿದರು.

ನಷ್ಟ ಭರಿಸಲು ನಿರ್ಧಾರ:

ವಿದ್ಯುತ್ ಕಂಪನಿಗಳ ನಷ್ಟ ಭರಿಸಲು ಸಂಪುಟ ಸಭೆ ನಿರ್ಧರಿಸಿದ್ದು, ಸರ್ಕಾರದಿಂದ 8,064 ಕೋಟಿ ರೂಪಾಯಿ ಹಣಕಾಸು ನೆರವು ನೀಡಲಾಗುತ್ತಿದೆ. ಅಮೃತ ಸ್ವಾಭಿಮಾನ ಯೋಜನೆ ಅನುಷ್ಠಾನಕ್ಕೂ ಸಂಪುಟ ಒಪ್ಪಿಗೆ ನೀಡಿದ್ದು, ಯೋಜನೆಯಡಿ 92 ಕೋಟಿ ರೂ. ಸಹಾಯಧನ ಘೊಷಣೆ ಮಾಡಲಾಗಿದೆ. ಕೆಇಬಿಗೆ ಹಣಕಾಸು ಸಂಸ್ಥೆಯಿಂದ ಸಾಲ ಪಡೆಯಲು ಖಾತರಿಯಾಗಿದ್ದು, 3,000 ಕೋಟಿ ಸಾಲ ಪಡೆಯಲು ರಾಜ್ಯ ಸರ್ಕಾರ ಖಾತರಿ ಪಡಿಸಿದೆ.

ರಾಜ್ಯದಲ್ಲಿ ಖಾಸಗಿ ಹೂಡಿಕೆ ಆಧಾರದ ಮೇಲೆ ಗ್ರಿಡ್ ಬೆಂಬಲಿತ 1000 ಮೆ.ವಾಟ್ ಪಂಪ್ ಹೈಡ್ರೋಸ್ಟೋರೇಜ್ ವಿದ್ಯುತ್ ಯೋಜನೆಯನ್ನು ವಿದ್ಯುತ್ ಕಾಯ್ದೆ -2003 ಕಲಂ 63ರ ಅಡಿ ಪಿಸಿಕೆಎಲ್ ಸಂಸ್ಥೆಯವರಿಂದ 4000 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಅನುಷ್ಠಾನಗೊಳಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಪಿಪಿಪಿ ಮಾದರಿಯಲ್ಲಿ ಈ ಯೋಜನೆ ಅನುಷ್ಠಾನಕ್ಕೆ ತರಲು ತೀರ್ವನಿಸಲಾಗಿದೆ. ನಾಲ್ಕು ಸಾರಿಗೆ ಸಂಸ್ಥೆ ಅಧಿಕಾರಿಗಳ ದರ್ಜೆ-3ರ ಮೇಲ್ವಿಚಾರಕ ಸಿಬ್ಬಂದಿ, ದರ್ಜೆ-2, ದರ್ಜೆ-1(ಕಿರಿಯ ಶ್ರೇಣಿ) ಅಧಿಕಾರಿಗಳನ್ನು ಆಯಾ ಸಾರಿಗೆ ಸಂಸ್ಥೆಗಳಿಗೆ ಶಾಶ್ವತ ಹಂಚಿಕೆ ಮಾಡಿ, ದರ್ಜೆ 1(ಹಿರಿಯ ಶ್ರೇಣಿ) ಮತ್ತು ಮೇಲ್ಪಟ್ಟ ವೃಂದಗಳ ನಿರ್ವಹಣೆಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಮುಂದುವರಿಸಲು ಸಚಿವ ಸಂಪುಟ ಸಭೆ ತೀರ್ಮಾನ ಮಾಡಿದೆ.

ಪ್ರಮುಖ ಅನುಮೋದನೆಗಳು

  • ಶಿವಮೊಗ್ಗ ಜಿಲ್ಲೆಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿ.ವಿ. ಕೇಂದ್ರ ಸ್ಥಾನವನ್ನು ಇರುವಕ್ಕಿಯಲ್ಲಿ ಸ್ಥಾಪಿಸಿ ಅಭಿವೃದ್ಧಿಪಡಿಸುವ ಕಾಮಗಾರಿ ಪರಿಷ್ಕೃತ ಯೋಜನಾ ಮೊತ್ತ 169.47 ಕೋಟಿ ರೂ.ಗೆ ಆಡಳಿತಾತ್ಮಕ ಅನುಮೋದನೆ.
  • ಒಟ್ಟು 354.50 ಕೋಟಿ ರೂ. ವೆಚ್ಚದಲ್ಲಿ ಅರ್ಹ 20 ಸಾವಿರ ಕುರಿಗಾಹಿಗಳಿಗೆ ಕುರಿ/ಮೇಕೆ ಘಟಕ ಸ್ಥಾಪಿಸಲು ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ ಅನುಷ್ಠಾನಗೊಳಿಸುವುದಕ್ಕೆ ಹೊರಡಿಸಿರುವ ಆದೇಶಕ್ಕೆ ಘಟನೋತ್ತರ ಅನುಮತಿ.
  • ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ಆಸ್ಪತ್ರೆಯನ್ನು 100 ಹಾಸಿಗೆಯಿಂದ 250 ಹಾಸಿಗೆಗೆ ಮೇಲ್ದರ್ಜೆಗೇರಿಸಲು 26.50 ಕೋಟಿ ರೂ.ಗಳ ಅಂದಾಜಿಗೆ ಅನುಮೋದನೆ.
  • ಕರ್ನಾಟಕ ಗೃಹ ಮಂಡಳಿ ಹಾವೇರಿ ತಾಲೂಕು ದೇವಗಿರಿಯಲ್ಲಾಪುರ ಗ್ರಾಮದಲ್ಲಿ ವಸತಿ ಯೋಜನೆಗಾಗಿ ಭೂಸ್ವಾಧೀನಪಡಿಸಿಕೊಂಡ 99.07 ಎಕರೆ ಜಮೀನು ಪರಿಹಾರದ ಬದಲಿಗೆ ಭೂ ಮಾಲೀಕರಿಗೆ 50:50ರ ಅನುಪಾತದಲ್ಲಿ ಅಭಿವೃದ್ಧಿಪಡಿಸಿದ ನಿವೇಶನ ನೀಡಲು ಅನುಮತಿ.
  • ಕರ್ನಾಟಕ ಗೃಹ ಮಂಡಳಿ ಧಾರವಾಡ ತಾಲೂಕು ಸತ್ತೂರು ಗ್ರಾಮದಲ್ಲಿ ಮಂಡಳಿಯು ವಸತಿ ಯೋಜನೆಗಾಗಿ ಭೂಸ್ವಾಧೀನಪಡಿಸಿಕೊಂಡ 358.09 ಎಕರೆ ಜಮೀನಿನ ಪೈಕಿ 50:50ರ ಅನುಪಾತದ ಪಾಲುಗಾರಿಕೆಯಲ್ಲಿ ಅಭಿವೃದ್ಧಿಪಡಿಸಿದ ನಿವೇಶನಗಳನ್ನು ಭೂ ಮಾಲೀಕರಿಗೆ ನೀಡುವ ಬಗ್ಗೆ ಹಾಗೂ ಪ್ರತಿ ಎಕರೆಗೆ 5 ಲಕ್ಷ ರೂ. ಮುಂಗಡ ಪಾವತಿಸಲು ಒಪ್ಪಿಗೆ.
  • ರಾಯಚೂರು ಜಿಲ್ಲೆ ದೇವದುರ್ಗ ತಾಲೂಕು ನಾರಾಯಣಪುರ ಬಲದಂಡೆ ನಾಲೆಯ ಉಪ ಕಾಲುವೆ ಬಾಧಿತ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವ 253.94 ಕೋಟಿ ರೂ.ಗಳ ಅಂದಾಜು ಮೊತ್ತದ 6 ಏತ ನೀರಾವರಿ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net