

ಬೆಂಗಳೂರು: ಮನೋರಂಜನಾ ಆ್ಯಪ್ ಆಗಿರುವ ಟಿಕ್ಟಾಕ್ನಲ್ಲಿ ಇನ್ನುಮುಂದೆ ನಿಮ್ಮ ಮಕ್ಕಳು ಯಾವ ರೀತಿಯ ವಿಡಿಯೋ ನೋಡಬೇಕು, ಎಷ್ಟೊತ್ತು ಕಾಲ ಕಳೆಯಬೇಕು ಎನ್ನುವುದನ್ನು ನೀವು ನಿರ್ವಹಣೆ ಮಾಡಬಹುದು. ಅಂತದ್ದೊಂದು ಹೊಸ ಫೀಚರ್ ಬಿಡುಗಡೆ ಮಾಡಿದೆ ಟಿಕ್ಟಾಕ್ ಸಂಸ್ಥೆ.
ಬೈಟ್ ಡ್ಯಾನ್ಸ್ ಸಂಸ್ಥೆಯ ಟಿಕ್ಟಾಕ್ ಆ್ಯಪ್ ನೂತನ ಫೀಚರ್ ಬಿಡುಗಡೆ ಮಾಡಿದೆ. ಫ್ಯಾಮಿಲಿ ಸೇಫ್ಟಿ ಮೋಡ್ನ್ನು ಪರಿಚಯಿಸಲಾಗಿದ್ದು ಅದರಲ್ಲಿ ನಿಮ್ಮ ಮಕ್ಕಳ ಟಿಕ್ಟಾಕ್ ಅಕೌಂಟ್ ಮತ್ತು ನಿಮ್ಮ ಟಿಕ್ ಟಾಕ್ ಅಕೌಂಟನ್ನು ಲಿಂಕ್ ಮಾಡಿಟ್ಟುಕೊಳ್ಳಬಹುದು.
ಒಮ್ಮೆ ನಿಮ್ಮ ಮಕ್ಕಳ ಅಕೌಂಟನ್ನು ಲಿಂಕ್ ಮಾಡಿದರೆ ನಂತರ ಅದರ ಕಂಟ್ರೋಲ್ ನಿಮ್ಮ ಕೈನಲ್ಲಿರುತ್ತದೆ. ನಿಮ್ಮ ಮಕ್ಕಳು ಎಷ್ಟು ಸಮಯ ಟಿಕ್ಟಾಕ್ನಲ್ಲಿ ಕಾಲ ಕಳೆಯಬೇಕು ಎನ್ನುವುದನ್ನು ನೀವು ನಿರ್ಧರಿಸಬಹುದು. ಯಾವ ರೀತಿಯ ವಿಡಿಯೋಗಳು ಮಾತ್ರ ನಿಮ್ಮ ಮಕ್ಕಳ ಟಿಕ್ಟಾಕ್ ಅಕೌಂಟ್ನ ವಾಲ್ನಲ್ಲಿ ಕಾಣಿಸಿಕೊಳ್ಳಬೇಕು ಎನ್ನುವುದನ್ನು ಸಹ ನಿರ್ಧರಿಸುವ ಆಯ್ಕೆ ನಿಮಗಿರುತ್ತದೆ. ಅದರ ಜತೆ ನಿಮ್ಮ ಮಕ್ಕಳಿಗೆ ಯಾರು ಮೆಸೇಜ್ ಮಾಡಬಹುದು ಯಾರು ಮಾಡಬಾರದು ಎನ್ನುವ ನಿರ್ಧಾರವನ್ನು ಸಹ ನೀವು ತೆಗೆದುಕೊಳ್ಳಬಹುದಾಗಿದೆ. (ಏಜೆನ್ಸೀಸ್)