

ಚೆನ್ನೈ: ರಸ್ತೆಯಲ್ಲಿ ಕೆಟ್ಟು ನಿಂತ ಬಸ್ ಅನ್ನು ವಿದ್ಯಾರ್ಥಿನಿಯರಿಂದ ದೂಡಿಸಿದ ಪ್ರಕರಣವೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಬಸ್ನ ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂಬ ಆಗ್ರಹಗಳು ಕೇಳಿಬರುತ್ತಿವೆ.
ಇತ್ತೀಚೆಗೆ ತಮಿಳುನಾಡಿನ ಸರ್ಕಾರಿ ಬಸ್ ಒಂದು ನಾಗರಕೋಯಿಲ್ನ ಅಣ್ಣಾ ಬಸ್ ನಿಲ್ದಾಣದಿಂದ ಮನಕುಡಿ ಗ್ರಾಮಕ್ಕೆ ತೆರಳುತ್ತಿತ್ತು. ಬಸ್ನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಪ್ರಯಾಣ ಮಾಡುತ್ತಿದ್ದರು. ಬಸ್ ನಾಗರಕೋಯಿಲ್ನ ತಾಲೂಕು ಕಚೇರಿ ಸಮೀಪ ಬರುತ್ತಿದ್ದಂತೆ ಬಸ್ ಇದ್ದಕ್ಕಿದ್ದಂತೆ ರಸ್ತೆಯಲ್ಲಿ ಕೆಟ್ಟು ನಿಂತಿತು. ಬಸ್ಸನ್ನು ಮರಳಿ ಸ್ಟಾರ್ಟ್ ಮಾಡಲು ಚಾಲಕ ಅನೇಕ ಬಾರಿ ಯತ್ನಿಸಿದರು ಕೂಡ ಸಾಧ್ಯವಾಗಲಿಲ್ಲ.
ಯಾವಾಗ ಬಸ್ ಸ್ಟಾರ್ಟ್ ಆಗಲಿಲ್ಲವೋ ಬಸ್ನಲ್ಲಿದ್ದ ವಿದ್ಯಾರ್ಥಿನಿಯರಿಂದ ಬಸ್ ಅನ್ನು ತಳ್ಳಿಸಿದ್ದಾರೆ. ಕೆಲ ದೂರ ಬಸ್ ದೂಡಿದ ಬಳಿಕ ಬಸ್ ಮತ್ತೆ ಸ್ಟಾರ್ಟ್ ಆಯಿತು. ಬಳಿಕ ವಿದ್ಯಾರ್ಥಿನಿಯರು ಮತ್ತೆ ಬಸ್ ಏರಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಸಾಕಷ್ಟು ಟೀಕೆಗಳು ವ್ಯಕ್ತವಾದವು.
ವಿದ್ಯಾರ್ಥಿನಿಯರಿಂದ ಬಸ್ ದೂಡಿಸಿದ ಕ್ರಮ ಸರಿಯಲ್ಲ ಎಂಬ ಅಭಿಪ್ರಾಯ ಕೇಳಿಬಂದ ಕೂಡಲೇ ಚಾಲಕ ಮತ್ತು ನಿರ್ವಾಹಕ ಸೆಲ್ವರಾಜ್ನನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಇಷ್ಟೇ ಅಲ್ಲದೆ, ರಾಜ್ಯ ಸಾರಿಗೆ ಸಂಸ್ಥೆಯ ವರ್ಕ್ಶಾಪ್ ಎಲೆಕ್ಟ್ರಿಷಿಯನ್ ವೈಕುಂದ ಕೃಷ್ಣನ್ ಮತ್ತು ಸೂಪರ್ವೈಸರ್ ಸುಬ್ರಮಣಿಯ ಪಿಳ್ಳೈ ಎಂಬುವರನ್ನೂ ಅಮಾನತು ಮಾಡಲಾಗಿದೆ. (ಏಜೆನ್ಸೀಸ್)