

ನನಗೀಗ 18 ವರ್ಷ. 9ನೇ ತರಗತಿಯಿಂದಲೇ ಸಮಸ್ಯೆಯೊಂದು ಶುರುವಾಯಿತು. ನನ್ನ ಸುತ್ತ ನಡೆಯುತ್ತಿರುವುದೆಲ್ಲಾ ಕನಸಿನಂತೆ ಭಾಸವಾಗುವುದು. ಯಾವುದೂ ನಿಜವಲ್ಲವೆನಿಸುವುದು. ಮೂರು ವರ್ಷಗಳಿಂದ ಅದು ಜಾಸ್ತಿಯಾಗಿದೆ. ಮನೋರೋಗ ತಜ್ಞರಿಂದ 2 ವರ್ಷ ಔಷಧಿ ತೆಗೆದುಕೊಂಡರೂ ಪ್ರಯೋಜನವಾಗಲಿಲ್ಲ. ಮಿದುಳು ಸ್ಕ್ಯಾನಿಂಗ್ನಲ್ಲಿಯೂ ಏನೂ ತೊಂದರೆಯಿಲ್ಲವೆಂದು ತಿಳಿಯಿತು. ಆದರೆ ಸಮಸ್ಯೆ ಪರಿಹಾರವಾಗಲಿಲ್ಲ. ಒಮ್ಮೊಮ್ಮೆ ತಲೆಯ ಹಿಂಬದಿ ಭಾರವಾದಂತೆ ಎನಿಸುತ್ತದೆ. ಇದು ಮನೋರೋಗವಾಗಿದ್ದರೆ ಔಷಧಿಯಿಂದ ಗುಣವಾಗಬೇಕಿತ್ತಲ್ಲವೇ? ನನಗೆ ಹುಚ್ಚುಹಿಡಿದಂತೆ ಆಗುತ್ತಿದೆ. ಕಾಲೇಜಿಗೆ ಹೋಗಲೂ ಕಷ್ಟವಾಗುತ್ತಿದೆ. ಕಾಲೇಜಿನಲ್ಲಿರುವುದೂ ಕನಸಿನಲ್ಲೆಂಬಂತೆ ಭಾಸವಾಗುತ್ತಿದೆ. ಮಂತ್ರ ಮಾಡಿಸಿ ನೂಲನ್ನೂ ಕಟ್ಟಿಕೊಂಡಿದ್ದೇನೆ. ಆದರೂ ಸಮಸ್ಯೆ ಪರಿಹಾರವಾಗಿಲ್ಲ. ಈ ಸಮಸ್ಯೆಗೆ ನೀವೇನಾದರೂ ಪರಿಹಾರ ನೀಡುತ್ತೀರಾ?
ಇನ್ನು ನಿಮ್ಮ ಸಮಸ್ಯೆ. ಇದು. ಡಿ-ಪರ್ಸನಲೈಜೇಷನ್ ಡಿಸಾರ್ಡರ್. ಇದೊಂದು ಅಪರೂಪದ ಡಿಸಾರ್ಡರ್. ಇದರ ಲಕ್ಷಣವೇನೆಂದರೆ ಮಿದುಳು ಹೊರಜಗತ್ತಿನಿಂದ ಆಗಾಗೆ ವಿಮುಖವಾಗುತ್ತದೆ. ನಾವೆಲ್ಲರೂ ಹೊರಜಗತ್ತಿಗೆ ಕನೆಕ್ಟ್ ಆಗಿಯೇ ಇರುತ್ತೇವೆ. ರಸ್ತೆಯಲ್ಲಿ ನಡೆದು ಹೋಗುತ್ತಿರುವಾಗ ಹೂವುಗಳ ಸುವಾಸನೆ, ಮಸಾಲೆ ದೋಸೆ ಪರಿಮಳ ಮೂಗಿಗೆ ಬಡಿದರೆ ನಮ್ಮ ಮಿದುಳು ಭಾವನೆಗಳಿಂದ ಸ್ಪಂದಿಸುತ್ತದೆ. ಸುವಾಸನೆ ಹರ್ಷವನ್ನು, ಮಸಾಲೆದೋಸೆಯ ಆಸ್ವಾದ ಸುಖವನ್ನು ಮಿದುಳು ತಾನಾಗಿಯೇ ನೆನಪಿಸುತ್ತದೆ. ಹೀಗಾಗದಿದ್ದರೆ ಮಿದುಳು ಹೊರಜಗತ್ತಿನಿಂದ ಸಂಪರ್ಕ ಕಳಕೊಂಡಿದೆ ಎಂದರ್ಥ. ಆಗ ಎಲ್ಲವೂ ಕಾಣಿಸುತ್ತಾ ಇರುತ್ತದೆ ಆದರೆ ನಮ್ಮ ಭಾವನೆಗಳು ಸ್ಪಂದಿಸುವುದಿಲ್ಲ. ಆದ್ದರಿಂದಲೇ ಅದು ಕನಸೆನಿಸುತ್ತದೆ. ಇನ್ನೊಂದು ಉದಾಹರಣೆ ಕೊಡುತ್ತೇನೆ. ಸತ್ತ ಇಲಿಯೊಂದನ್ನು ಕಾಗೆಯೊಂದು ತಿನ್ನುತ್ತಿರುವ ದೃಶ್ಯವನ್ನು ನೋಡಲಾಗದೇ ಕಣ್ಣುಗಳು ತಾನಾಗಿಯೇ ಮುಚ್ಚಿಕೊಳ್ಳುತ್ತವೆ. ಅಥವಾ ಮುಖವನ್ನು ಬೇರೆಕಡೆಗೆ ತಿರುಗಿಸುತ್ತೇವೆ. ಅಂದರೆ ಆ ಬೀಭತ್ಸ ದೃಶ್ಯವನ್ನು ಮನಸ್ಸಿನ ಭಾವನೆಯಾದ ಅಸಹನೆ ನೋಡದಂತೆ ಮಾಡುತ್ತದೆ. ಹೊರಗಿನ ದೃಶ್ಯವೊಂದಕ್ಕೆ ಮಿದುಳಿನ ಭಾವನೆಯೊಂದು ಲಿಂಕ್ ಆದಾಗ ಪ್ರತಿಕ್ರಿಯೆ ತಾನಾಗಿ ಬರುತ್ತದೆ. ಇದು ನಮ್ಮ ಮಾನಸಿಕ ವ್ಯಕ್ತಿತ್ವ ( ಶರೀರಕ್ಕೆ ವ್ಯಕ್ತಿತ್ವವಿರುವಂತೆ ಮನಸ್ಸಿಗೂ ಒಂದು ವ್ಯಕ್ತಿತ್ವವಿರುತ್ತದೆ). ಹೊರಗಿನ ವಾಸ್ತವದ ಜತೆ ಕೊಂಡಿ ಹಾಕಿಕೊಂಡು ಬದುಕುವ ರೀತಿ. ಇದೊಂದು ಸಹಜವಾದ ನಡವಳಿಕೆ. ಇದಾಗದಿದ್ದರೆ ಕಾಣಿಸುವ ಎಲ್ಲವೂ ಕನಸಿನಂತೆ ತೋರುತ್ತದೆ.
ಪ್ರತಿಯೊಬ್ಬರೂ ಒಮ್ಮೊಮ್ಮೆ ಸಹಜವಾಗಿಯೇ ಹೊರಗಿನ ವಿಷಯದೊಂದಿಗೆ ಡೀಲಿಂಕ್ ಆಗುತ್ತಾರೆ. ಉದಾಹರಣೆಗೆ ನಮ್ಮ ಮನಸ್ಸು ಯಾವುದೋ ಗಹನವಾದ ವಿಚಾರದಲ್ಲಿ ಮುಳುಗಿರುತ್ತದೆ. ಆಗ ಯಾರಾದರೂ ಕರೆದರೆ ಅಥವಾ ಏನಾದರೂ ಕೆಲಸ ಹೇಳಿದರೆ ಅದು ತಲೆಯಲ್ಲಿ ರಿಜಿಸ್ಟರ್ ಆಗುವುದೇ ಇಲ್ಲ. ಆಗ ಯಾರಾದರೂ ರೇಗಿದರೆ ಎಚ್ಚೆತ್ತುಕೊಳ್ಳುತ್ತೇವೆ. ಪಾಠಕೇಳಿಸಿಕೊಳ್ಳದೇ ಯಾವುದೋ ಲೋಕದಲ್ಲಿ ವಿಹರಿಸಿ, ನಂತರ ಪರೀಕ್ಷೆ ಬಂದಾಗ ಏನೂ ಅರ್ಥವಾಗದೇ ಪರಿತಪಿಸುವುದು ಕೂಡ ಇಂಥದ್ದೇ. ಇದು ಮಿದುಳಿನ ಡಿಫೆನ್ಸ್ ಮೆಕ್ಯಾನಿಸಮ್ ಸಹ ಆಗಿದೆ. ಒಂದೆರಡು ಗಂಟೆ ಸತತವಾಗಿ ಪಾಠ ಮನಸ್ಸಿಟ್ಟುಕೇಳಿದ ಮೇಲೆ, ಮತ್ತೆ ಪಾಠ ಕೇಳಿದರೆ ತಲೆ ಚಿಟ್ಟುಹಿಡಿಯುತ್ತದೆ ಎನಿಸಿದಾಗ, ನೀವು ತರಗತಿಯಲ್ಲೇ ಇದ್ದರೂ ಮಿದುಳು ಪಾಠಕೇಳಲು ಬಿಡದೇ ಬುದ್ಧಿಯನ್ನು ಎಲ್ಲಿಗೋ ಓಡಿಸುತ್ತದೆ. ಇದರಿಂದ ಮಿದುಳಿಗೆ ಚಿಟ್ಟುಹಿಡಿಯುವುದು ತಪ್ಪುತ್ತದೆ. ಇದು ಆಗೊಮ್ಮೆ ಈಗೊಮ್ಮೆ ಆದರೆ ಅದು ಸಹಜ. ಆದರೆ ಪ್ರತಿ ದಿನವೂ ಆದರೆ ಅದು ಸಮಸ್ಯೆ. ಆದರೆ ನೀವು ಹೆದರಬೇಕಿಲ್ಲ. ಇದು ನೀವೆಂದುಕೊಂಡಂತೆ ಮಿದುಳಿನ ರೋಗ ಅಲ್ಲ. ಇದಕ್ಕೆ ಪರಿಹಾರಗಳೂ ಇವೆ. ಮೊದಲನೆಯದಾಗಿ ನೀವು ನನಗೆ ಹೀಗೇಕೆ ಆಗುತ್ತಿದೆ? ಇದು ದೊಡ್ಡ ಸಮಸ್ಯೆಯೇ ಎನ್ನುವ ಭಯವನ್ನು ನಿವಾರಿಸಿಕೊಳ್ಳಲು ಸಂಗೀತ ಕೇಳುವುದು, ಒಳ್ಳೆಯ ಪುಸ್ತಕಗಳನ್ನು ಓದುವುದು ಮುಂತಾದ ಚಟುವಟಿಕೆಗಳಿಂದ ಭಯವನ್ನು ದೂರ ಮಾಡಿಕೊಳ್ಳಬೇಕು. ಈ ಭಯ ಹೆಚ್ಚಾದಷ್ಟೂ ಮಿದುಳಿನ ಮೇಲೆ ಒತ್ತಡ ಜಾಸ್ತಿಯಾಗುತ್ತದೆ. ನಿಮಗೆ ಆಗಾಗ ತಲೆಯ ಹಿಂದೆ ಭಾರವೆನಿಸುವುದು ಈ ಒತ್ತಡದಿಂದಲೇ. ಈ ಕಾರಣದಿಂದಲೇ ನಿಮ್ಮ ಮಿದುಳು ವಾಸ್ತವದಿಂದ ಮತ್ತಷ್ಟು ದೂರ ಓಡುತ್ತದೆ. ಮತ್ತೆ ಎಲ್ಲವೂ ನಿಮಗೆ ಕನಸಿನಂತೆ ಕಾಣುತ್ತದೆ. ಇದನ್ನು ನಿವಾರಿಸಿಕೊಳ್ಳಲು ಇನ್ನೂ ಕೆಲವು ಚಟುವಟಿಕೆಗಳನ್ನೂ ನೀವು ಮಾಡಬೇಕು. ಪರಿಮಳಯುಕ್ತವಾದ ಹೂವನ್ನು ಕೈಲಿ ಹಿಡಿದು ‘ಹೌದು ಈ ಹೂವು ಘಂ ಎನ್ನುತ್ತಿದೆ ಮತ್ತು ಈ ವಾಸನೆ ನನಗೆ ಇಷ್ಟವಾಗುತ್ತಿದೆ’ ಎಂದು ಪದೇಪದೇ ಹೇಳಿಕೊಳ್ಳುತ್ತಾ ನಿಮ್ಮ ಭಾವನೆಗಳನ್ನು ಹೊರಜಗತ್ತಿಗೆ ಪ್ರಯತ್ನಪೂರ್ವಕವಾಗಿ ಲಿಂಕ್ ಮಾಡಿಕೊಳ್ಳಬೇಕು. ಈ ರೀತಿಯ ಟ್ರೖೆನಿಂಗ್ ಪದೇಪದೇ ನಿಮ್ಮ ಮಿದುಳಿಗೆ ಕೊಟ್ಟರೆ ಕನಸು ಎನಿಸುವ ಭಾವ ಮರೆಯಾಗುತ್ತಾ ಹೋಗುತ್ತದೆ.
ಎರಡನೆಯದಾಗಿ ಯೋಗ, ಪ್ರಾಣಾಯಾಮ ಮತ್ತು ಧ್ಯಾನವನ್ನು ನುರಿತ ಯೋಗಶಿಕ್ಷಕರಿಂದ ಅಗತ್ಯವಾಗಿ ಕಲಿಯಲೇಬೇಕು. ಇದು ಮಿದುಳಿನ ಯಾವುದೇ ರೋಗವನ್ನಾದರೂ ನಿವಾರಿಸುತ್ತದೆ. ನೆನಪಿಡಿ. ಯೋಗಕ್ಕಿರುವ ಶಕ್ತಿ ಯಾವ ಔಷಧಿಗಳಿಗೂ ಇಲ್ಲ. ಈಗಾಗಲೇ ನೀವು ಯೋಗ ಮಾಡುತ್ತಿದ್ದರೆ, ಅದನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಿ. ಸಂಗೀತ ಕೇಳುವುದು, ಒಳ್ಳೆಯ ಪುಸ್ತಕಗಳನ್ನು ಓದುವುದು ಮತ್ತು ಯೋಗ ಇವೆಲ್ಲವನ್ನೂ ಕಡಿಮೆಯೆಂದರೆ ನೀವು ಮೂರು ನಾಲ್ಕು ತಿಂಗಳು ಮಾಡಬೇಕಾಗುತ್ತದೆ. ಆಗ ನಿಮ್ಮಲ್ಲಿ ನೀವೇ ಬದಲಾವಣೆಗಳನ್ನು ಕಾಣುತ್ತೀರಿ. ಆಗಲೂ ನಿಮ್ಮ ಸಮಸ್ಯೆ ಬಗೆಹರಿದಿಲ್ಲವೆನಿಸಿದರೆ ಈ ಡಿಸಾರ್ಡರ್ ಬಗ್ಗೆಯೇ ಅರಿತಿರುವ ನುರಿತ ಮನೋವೈದ್ಯರನ್ನು ಕಾಣಬೇಕಾಗುತ್ತದೆ. ನೀವು ಹಿಂದೆ ನೋಡಿನ ಮನೋವೈದ್ಯರು ಬಹುಶಃ ನಿಮ್ಮ ಡಿಸಾರ್ಡರ್ ಅನ್ನು ಗುರುತಿಸಿಲ್ಲವೆನಿಸುತ್ತದೆ. ಈ ಸಮಸ್ಯೆಗೆ ಔಷಧಿಗಳಿಗಿಂತ ಥೆರಪಿಗಳ ಅಗತ್ಯವಿದೆ. ಅದನ್ನು ನುರಿತ ವೈದ್ಯರು ಕೊಡುತ್ತಾರೆ. ನೀವಿನ್ನೂ ಚಿಕ್ಕವರಿರುವುದರಿಂದ ಯೋಗದಿಂದಲೇ ನಿಮ್ಮ ಸಮಸ್ಯೆ ಪರಿಹಾರವಾಗಬಹುದು ಪ್ರಯತ್ನಿಸಿ.
ಮಿದುಳೇಕೆ ಹೀಗಾಡುತ್ತದೆ?
ಬಾಲ್ಯದಲ್ಲಿ ದೇಹದ ಮೇಲೆ ಏನಾದರೂ ಅಹಿತಕರವಾದ ಘಟನೆ ನಡೆದಿದ್ದರೆ, ಮಗುವಿನ ಕಣ್ಣೆದುರೇ ಅದಕ್ಕೆ ಆಪ್ತರಾದವರಿಗೆ ಏನಾದರೂ ಅನಾಹುತ ನಡೆದಿದ್ದರೆ, ಮೇಲಿನಿಂದ ಬಿದ್ದು ತಲೆಗೆ ಏನಾದರೂ ಪೆಟ್ಟು ತಗುಲಿ ಮಿದುಳಿನ ನರಮಂಡಲಕ್ಕೆ ಧಕ್ಕೆಯಾಗಿದ್ದರೆ, ಬಾಲ್ಯದಿಂದಲೇ ಹೆಚ್ಚು ಹೊತ್ತು ಟಿ.ವಿ, ಮೊಬೈಲ್, ಕಂಪ್ಯೂಟರ್ ಮುಂದೆ ಕುಳಿತುಕೊಳ್ಳುತ್ತಿದ್ದರೆ... ಹೀಗೆ ಡಿ-ಪರ್ಸನಲೈಜೇಷನ್ ಡಿಸಾರ್ಡರ್ ಸಮಸ್ಯೆ ಉಂಟಾಗುತ್ತದೆ.