ಬೆಂಗಳೂರು: ಮನೆಯ ಸ್ನಾನದ ಕೊಣೆಯಲ್ಲಿ ಕೈ ಹಾಗೂ ಕತ್ತು ಕೊಯ್ದ ಸ್ಥಿತಿಯಲ್ಲಿ ವಿದ್ಯಾರ್ಥಿನಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾಳೆ.
ಸುಬ್ರಮಣ್ಯಪುರದ ಬೃಂದಾವನ ಲೇಔಟ್ ನಿವಾಸಿ ಪ್ರಭುದ್ಯಾ (20) ಮೃತರು.
ಬುಧವಾರ ಸಂಜೆ ಮನೆಯ ಸ್ನಾನಗೃಹದಲ್ಲಿ ಕತ್ತು ಮತ್ತು ಕೈ ಕೊಯ್ದ ಸ್ಥಿತಿಯಲ್ಲಿ ಪ್ರಭುದ್ಯಾ ಮೃತದೇಹ ಪತ್ತೆಯಾಗಿದೆ.
ಕೌಟುಂಬಿಕ ಕಾರಣದಿಂದ ತಂದೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ತಾಯಿ ಸೌಮ್ಯಾ, ಮಗಳು ಮತ್ತು ಮಗನೊಂದಿಗೆ ನೆಲೆಸಿದ್ದರು. ಸೌಮ್ಯಾ ಅವರು ಎನ್‌ಜಿಒ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರಭುದ್ಯಾ ನಗರದ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಬಿಎ ಪದವಿ ವ್ಯಾಸಂಗ ಮಾಡುತ್ತಿದ್ದಳು. ಬುಧವಾರ ಮಧ್ಯಾಹ್ನ ತಾಯಿ ಸೌಮ್ಯಾಗೆ ಕರೆ ಮಾಡಿದ್ದ ಪ್ರಭುದ್ಯಾ, ಸ್ನೇಹಿತರ ಜತೆ ಪಾನಿಪೂರಿ ತಿನ್ನಲು ಹೊರಗೆ ತೆರಳುತ್ತಿದ್ದೇನೆ. ಸಂಜೆ ೪ ಗಂಟೆ ವೇಳೆಗೆ ಮನೆಗೆ ಬರುತ್ತೇನೆ ಎಂದು ಹೇಳಿದ್ದಳು ಎಂದು ತಿಳಿದು ಬಂದಿದೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದಳು:
ಜಿಮ್‌ಗೆ ಹೋಗಿದ್ದ ಸಹೋದರ ಸಂಜೆ ೭.೩೦ರ ಸುಮಾರಿಗೆ ಮನೆಗೆ ವಾಪಾಸ್ ಬಂದಾಗ ಮನೆಯ ಮುಖ್ಯದ್ವಾರ ಲಾಕ್ ಆಗಿರುವುದು ಕಂಡು ಬಂದಿದೆ. ಮನೆಯ ಹಿಂಬದಿ ಬಾಗಿಲು ತೆರೆದಿದ್ದರಿಂದ ಮನೆ ಪ್ರವೇಶಿಸಿ ನೋಡಿದಾಗ ಸ್ನಾನದ ಕೋಣೆಯಲ್ಲಿ ಅಕ್ಕ ಪ್ರಭುದ್ಯಾ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ಕೂಡಲೇ ತಾಯಿ ಸೌಮ್ಯಾಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಬಳಿಕ ಮನೆಗೆ ಬಂದ ಸೌಮ್ಯಾ, ನೆರೆಹೊರೆಯವರ ಸಹಾಯ ಪಡೆದು ರಕ್ತದ ಮಡುವಿನಲ್ಲಿ ಬಿದ್ದಿದ್ದ ಪ್ರಭುದ್ಯಾಳನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು ಪ್ರಭುದ್ಯಾ ಈಗಾಗಲೇ ಮೃತಪಟ್ಟಿರುವುದಾಗಿ ದೃಢಪಡಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಮನೆ ಪರಿಶೀಲಿಸಿದ್ದಾರೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪ್ರಭುದ್ಯಾ ಕತ್ತು ಮತ್ತು ಕೈ ಕೊಯ್ದು ರಕ್ತಸ್ರಾವವಾಗಿ ಮೃತಪಟ್ಟಿದ್ದಾಳೆ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ಖಚಿತವಾಗಿಲ್ಲ. ಮರಣೋತ್ತರ ಪರೀಕ್ಷೆ ಬಳಿಕ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ. ಈ ಸಂಬಂಧ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.