

ಮುಂಡಕಶ್ರುತಿಯಲ್ಲಿಯೂ (2-2-5) ‘‘ಅಮೃತಸ್ಯೈಷ ಸೇತುಃ’’ ಎಂದೂ, ಬೃಹದಾರಣ್ಯಕ ಶ್ರುತಿಯಲ್ಲಿ (4-1-22) ‘‘ಏಷ ಸೇತುರ್ವಿಧರಣಃ’’ ಎಂದೂ ಹೀಗೆಯೇ ಭಗವಂತನನ್ನು ‘‘ಸೇತುವೆ’’ ಎಂದೇ ಕೊಂಡಾಡಲಾಗಿದೆ. ಶ್ರೀ ವಿಷ್ಣುಸಹಸ್ರನಾಮದಲ್ಲಿಯೂ ‘‘ಜಗತಃ ಸೇತುಃ’’ (ಶ್ರೀನಾಮ 289) ಎಂದು ಭೀಷ್ಮರು ಸ್ತುತಿಸಿದ್ದಾರೆ. ಶ್ರೀ ವೇದಾಂತದೇಶಿಕರೂ, ‘‘ಜಯತಿ ಜಗದೇಕ ಸೇತುಃ’’, ‘‘ವಿಭಾತು ಮೇ ಚೇತಸಿ ವಿಷ್ಣುಸೇತುಃ’’, ‘‘ವಿಶ್ವರಕ್ಷೆ ೖಕ ಹೇತುಃ’’ ಎಂದು ತಮ್ಮ ‘‘ವೇಗಾಸೇತು’’ ಸ್ತೋತ್ರದಲ್ಲಿ ಸ್ತುತಿಸಿದ್ದಾರೆ. ಶ್ರೀಮದ್ರಾಮಾಯಣದಲ್ಲಿ ‘‘ಸೇತು’’ವಿಗೆ ವಿಶಾಲವಾದ ಸಾಂಕೇತಿಕ ಅರ್ಥ ಇರುವುದೂ ಈ ಹಿನ್ನೆಲೆಯಲ್ಲೇ. (ಶ್ರುತಿಯ ಒಂದೊಂದು ಅಕ್ಷರಕ್ಕೂ ಹೀಗೆ ಗೂಢವಾದ, ಗಾಢವಾದ ಅರ್ಥ ಇರುವುದೆಂದು ತಿಳಿಯಬೇಕು.)
ಹಾಗಾದರೆ, ನಮ್ಮ ಶರೀರದ ಬಗೆಗೆ ಈಗ ಅತ್ಯಂತ ಗೌರವದ ಭಾವನೆ ಉದಿಸಿದಂತಾಯಿತು. ಸಂಸಾರವನ್ನು ದಾಟುವವನಿಗೆ ಇದೇ ದೋಣಿಯ, ಬಹು ದೂರವಾದ ‘‘ವಿಷ್ಣುಪದ’’ಕ್ಕೆ ಪಯಣ ಬೆಳೆಸಲು ಇದೇ ರಥವೆಂದೂ ಉಪನಿಷತ್ತು ಘೊಷಿಸುತ್ತದೆ.
‘‘ಜೀವಾತ್ಮನೇ ರಥಿಕ ಎಂಬುದಾಗಿ ತಿಳಿ. ಶರೀರವೇ ರಥ, ಬುದ್ಧಿಯೇ ಸಾರಥಿ, ಮನಸ್ಸೇ ಹಗ್ಗ, ಇಂದ್ರಿಯಗಳನ್ನು ಕುದುರೆಗಳೆನ್ನುವರು. ಅವುಗಳಿಗೆ ಕಂಡದ್ದೇ ಅವುಗಳ ಮಾರ್ಗವೆಂದೂ, ಹೀಗೆ ಆತ್ಮ, ಇಂದ್ರಿಯ, ಮನಸ್ಸುಗಳಿಂದ ಕೂಡಿದ ‘‘ದೇಹಿ’’ಯನ್ನೇ ‘‘ಭೋಕ್ತ ೃ ಎಂದೂ ಜ್ಞಾನಿಗಳು ಹೇಳುವರು. ಯಾವನು ಯಾವಾಗಲೂ ಅಜ್ಞಾನಿಯಾಗಿದ್ದು, ಮನಸ್ಸನ್ನು ಯೋಗದಲ್ಲಿ ಹಾಕದೆ ಇರುವನೋ ಅವನ ಇಂದ್ರಿಯಗಳು ಅವನಿಗೆ ವಶವಾಗದೆ ಸಾರಥಿಯ ಪಾಲಿಗೆ ತುಂಟ ಕುದುರೆಗಳಂತೆ ಮಾತ್ರ ಆಗುತ್ತವೆ.
ಆದರೆ ಯಾವನು ಪ್ರಜ್ಞಾಶಾಲಿಯಾಗಿ, ಮನಸ್ಸನ್ನು ಹದಗೊಳಿಸಿರುವನೋ ಅವನಿಗೆ, ಒಳ್ಳೆಯ ಕುದುರೆಗಳು ಸಾರಥಿಗೆ ವಶವಾಗುವಂತೆ, ಅವನ ಇಂದ್ರಿಯಗಳು ವಶವಾಗಿರುತ್ತವೆ. ಅಶುಚಿಯೂ, ಅಮನಸ್ಕನೂ, ಅವಿಜ್ಞಾನವಂತನೂ ಆದವನಿಗೆ, ಆ (ಪ್ರಸಿದ್ಧವಾದ) ‘‘ಪರಮ ಪದವಿ’’ಯು ದೊರೆಯದೆ ಸಂಸಾರವೇ ಕೊರಳಿಗೆ ಬೀಳುತ್ತದೆ. ಹೀಗಲ್ಲದೆ ವಿಜ್ಞಾನವಂತನಾಗಿಯೂ, ಸಮನಸ್ಕನಾಗಿಯೂ, ಸರ್ವದಾ ಶುಚಿಯಾಗಿಯೂ ಇರತಕ್ಕವನು ಯಾವ ‘‘ಪದವಿ’’ಯನ್ನು ಹೊಂದಿದರೆ, ಪುನರ್ಜನ್ಮವಿಲ್ಲವೋ ಆ ‘‘ಪದವಿ’’ಯನ್ನು ಹೊಂದುತ್ತಾನೆ.
ಹೀಗೆ ವಿಜ್ಞಾನವನ್ನೇ ಸಾರಥಿಯನ್ನಾಗಿಯೂ ಮನಸ್ಸನ್ನೇ ಕಡಿವಾಣವನ್ನಾಗಿಯೂ ಉಳ್ಳವನು, ಸಂಸಾರದ ದಾರಿಯ ಕಡೆಯಾದ ವಿಷ್ಣುಪದವೆಂಬ ಪರಮಪದವಿಯನ್ನು ಸೇರುತ್ತಾನೆ!
(ಲೇಖಕರá- ಬಹುಶ್ರುತ ವಿದ್ವಾಂಸರು, ಪ್ರವಚನಕಾರರು)