

ಯಾವಾಗ ಮನುಷ್ಯನು ಮತ್ತೊಬ್ಬ ಮನುಷ್ಯನೊಂದಿಗೆ ಹೃದಯ ಬೆಸುಗೆಯಿಲ್ಲದೆ ದ್ವೇಷ, ಅಸೂಯೆಗಳಂತಹ ವಿಷ ವರ್ತಲದಲ್ಲಿ ಸಿಲುಕಿ ಬಸವಳಿಯುತ್ತಿರುವನೋ ಅಂಥ ಜನರನ್ನು ಭಗವಾನ್ ಶ್ರೀರಾಮಕೃಷ್ಣ ಪರಮಹಂಸರು ದೂರವಿಡುತ್ತಿದ್ದರು. ಕಾರಣ, ಶುದ್ಧ ಸತ್ತ್ವ, ಹೃದಯ, ಮನಸ್ಸುಳ್ಳ ಪರಮಹಂಸರಿಗೆ ಈ ತೆರನಾದ ಪ್ರಾಪಂಚಿಕ ಪ್ರಾಣಿಗಳ ಮಧ್ಯೆ ಇರಲು ಸುತರಾಂ ಇಷ್ಟವಿರಲಿಲ್ಲ. ರಾಮಕೃಷ್ಣರ ಈ ಮಾತುಗಳನ್ನು ಕೇಳಿ: ಕೆಲವೊಮ್ಮೆ ನಾನು ರಸ್ತೆಯಲ್ಲಿ ಹೋಗುತ್ತಿರುವಾಗ ಕೆಲವರನ್ನು ನೋಡಿ ಅಸಹ್ಯವೆನಿಸುವುದು. ಅಷ್ಟೊಂದು ಲೋಭ ಅವರ ಮುಖದಲ್ಲಿ ಎದ್ದು ಕಾಣುತ್ತದೆ! ಅವರ ಹತ್ತಿರ ಹೋದರೆ ಅವರ ತರಂಗ ನನ್ನನ್ನು ತಾಕುತ್ತದೆ. ಅಂತಹವರೊಡನೆ ವ್ಯವಹರಿಸುವಾಗ ಎಚ್ಚರದಿಂದಿರಬೇಕು!
ನಿಜ, ಪರಮಹಂಸರ ನುಡಿ ಅರ್ಥಗರ್ಭಿತವಾಗಿದೆ. ಇಂದಿನ ಸ್ಥಿತಿಯಂತೂ ಹೇಳತೀರದು. ಈ ಜಗತ್ತಿನಲ್ಲಿ ಅಧ್ಯಾತ್ಮಕ್ಕೆ, ಸಂಸ್ಕೃಗೆ, ಸಂಸ್ಕಾರಕ್ಕೆ ಬೆಲೆಯೇ ಇಲ್ಲದಂತಾಗಿದೆ.ಇದಕ್ಕೆ ಮೂಲ ಕಾರಣ ಮಾನವ ತನ್ನ ಗುರಿ ಸುಖ-ಭೋಗ ಎಂದು ನಂಬಿ ತನ್ನ ಮೂಲ ಜೀವನದ ಗುರಿಯನ್ನೇ ಮರೆತಿರುವುದು. ಈಗಿನ ಕಾಲಘಟ್ಟದ ಮೂಲ ಉದ್ದೇಶವೇ ಸುಖ-ಭೋಗ. ಆದರೆ ಯಾವುದು ಸತ್ಯ, ಯಾವುದು ಅಸತ್ಯ ಎಂಬುದರ ಅರಿವೇ ಇಲ್ಲದೆ ಸುಖದ ಹಿಂದೆ ಓಡುತ್ತಿರುವ ಮಾನವನ ಸ್ಥಿತಿ ನಿಜಕ್ಕೂ ವಿಷಾದನೀಯ. ಈ ಸಂದರ್ಭದಲ್ಲಿ ರಾಮಕೃಷ್ಣರು ತಿಳಿಸಿದ ಉದಾಹರಣೆ ಅತ್ಯಂತ ಸಮಂಜಸವೆನಿಸುತ್ತದೆ. ಅದೆಂದರೆ...
‘ಒಮ್ಮೆ ತಿರುಕನೊಬ್ಬ ಪ್ರವಾಹದಿಂದ ತುಂಬಿ ಹರಿಯುತ್ತಿದ್ದ ನದಿಯ ದಂಡೆಯ ಮೇಲೆ ಸಾಗುತ್ತಿದ್ದ. ಅಲ್ಲಿ ಒಂದು ಸುಂದರವಾದ ಕಂಬಳಿ ತೇಲುತ್ತಾ ನದಿಯಲ್ಲಿ ಸಾಗುತ್ತಿತ್ತು. ಹಿಂದೆ ಮುಂದೆ ನೋಡದೆ ಈ ತಿರುಕ ಆ ಕಂಬಳಿಯನ್ನು ಹಿಡಿಯಲು ಪ್ರವಾಹದಿಂದ ಹರಿಯುತ್ತಿದ್ದ ನದಿಗೆ ಹಠಾತ್ ಧುಮುಕಿದ. ಕಂಬಳಿಯನ್ನು ಭದ್ರವಾಗಿ ಹಿಡಿದು ದಡಕ್ಕೆ ಈಜಿ ಬರಲು ಪ್ರಯತ್ನಿಸಿದ, ಆದರೆ ಸಾಧ್ಯವಾಗಲಿಲ್ಲ. ದಡದ ಮೇಲಿನವರು ಕಂಬಳಿಯನ್ನು ಬಿಟ್ಟು ಬಾ ಎಂದು ಅರಚುತ್ತಿದ್ದರು. ಕಂಬಳಿಯನ್ನು ಬಿಟ್ಟು ಬರಲು ಸಾಧ್ಯವಾಗುತ್ತಿಲ್ಲ ಎಂದು ತಿರುಕ ಕೂಗುತ್ತಿದ್ದ. ಕೊನೆಗೆ ತಿರುಕ ಹೇಳಿದ: ‘ನಾನು ಕಂಬಳಿಯನ್ನು ಬಿಟ್ಟು ಬಿಟ್ಟಿದ್ದೇನೆ. ಆದರೆ ಅದು ನನ್ನನ್ನು ಬಿಡುತ್ತಿಲ್ಲ! ಭದ್ರವಾಗಿ ಹಿಡಿದಿದೆ!’ ಎಂದು. ಇಲ್ಲಿ ವಾಸ್ತವವಾಗಿ ನಡೆದಿದ್ದೇ ಬೇರೆ. ಈ ಬಡ ತಿರುಕ ಕಂಬಳಿ ನೀರಿನಲ್ಲಿ ತೇಲುತ್ತಿದೆ ಎಂದು ಭಾವಿಸಿ ನೀರಿಗೆ ಹಾರಿ ಅದನ್ನು ಹಿಡಿದ. ಆದರೆ ಅದು ಕಂಬಳಿಯಾಗಿರಲಿಲ್ಲ! ಬದಲಾಗಿ ಕರಡಿಯಾಗಿತ್ತು! ಅದು ಇವನನ್ನೇ ಹಿಡಿದುಕೊಂಡಿತು.
ಈ ಉದಾಹರಣೆಯ ಮೂಲಕ ಪರಮಹಂಸರು ಸುಖಭೋಗವನ್ನು ಕಂಬಳಿಯಂತೆ ಕಂಡ ಕರಡಿಗೆ ಹೋಲಿಸಿದ್ದಾರೆ. ಹೀಗೆಯೇ ಈ ಭವಸಾಗರದಲ್ಲಿ ದಾಟುವ ಬದಲು ಬಹುತೇಕ ಮಂದಿ ದೂರದಿಂದ ಕಾಣುವ ಆಸೆ, ಲಾಲಸೆ, ಸುಖ-ಭೋಗಗಳೆಂಬ ಕರಡಿಗಳನ್ನು ಅಲ್ಪ ಸುಖಕ್ಕೆ ಹಿಡಿಯಲು ಧಾವಿಸಿ ನಂತರ ಕಂಬಳಿಯನ್ನು ಬಿಟ್ಟರೂ ಕಂಬಳಿ ಬಿಡುತ್ತಿಲ್ಲ! ಎಂಬಂತೆ ಈ ಪ್ರಾಪಂಚಿಕ ಸುಳಿಯಲ್ಲಿ ಸಿಲುಕಿ ವೃಥಾ ಜೀವನವನ್ನು ವ್ಯಯ ಮಾಡುತ್ತಿದ್ದಾರೆ ಎಂದು ಸೂಚಿಸುತ್ತಾರೆ. ರಾಮಕೃಷ್ಣರು ಆಧ್ಯಾತ್ಮಿಕ ಮಾರ್ಗದಲ್ಲಿ ಪಥಿಸುವವರಿಗೆ ಇನ್ನೊಂದು ಉದಾಹರಣೆ ನೀಡಿ ಎಚ್ಚರಿಸುತ್ತಿದ್ದರು. ಅದೆಂದರೆ... ಒಂಟೆಗಳು ತಮ್ಮ ಬಾಯಿ ಚಪಲಕ್ಕೆ ಮರುಭೂಮಿಯಲ್ಲಿ ದೊರೆ ಯುವ ನೆಗ್ಗಲು ಮುಳ್ಳು, ಕಂಟಿಗಳನ್ನು ಹರಸಾಹಸ ಪಟ್ಟು ತಿನ್ನುತ್ತವೆ. ಆದರೆ ಬಾಯಿಯಿಂದ ರಕ್ತ ಹರಿದಾಗ್ಯೂ ಮುಳ್ಳನ್ನು ತಿನ್ನುವುದನ್ನು ಬಿಡುವುದಿಲ್ಲ. ಹಾಗೆಯೇ ಪ್ರಾಪಂಚಿಕರು ಈ ಸಂಸಾರವೆಂಬ ಅರಣ್ಯದಲ್ಲಿ ಒಂದಿನಿತು ಸುಖಕ್ಕೆ ಕೋಡಿಗಟ್ಟಲೆ ರಕ್ತ ಹರಿಸಿದಾಗ್ಯೂ ಪ್ರಾಪಂಚಿಕ ಸುಖ-ಭೋಗಗಳಿಗೆ ಬಲಿಯಾಗುತ್ತಾರೆೆ.
ಪರಮಹಂಸರ ಬಹು ಪ್ರಸಿದ್ಧವಾದ ಉಪದೇಶವೆಂದರೆ ‘ಮಾನವನ ಏಕೈಕ ಗುರಿ ಭಗವಂತನನ್ನು ಸೇರುವುದು ಮಾತ್ರ. ಈ ಮಿಕ್ಕ ಕಾರ್ಯಗಳು, ಜವಾಬ್ದಾರಿಗಳು ಇತ್ಯಾದಿ ಕೇವಲ ಜೀವನೋಪಾಯಕ್ಕೆ ಮಾತ್ರ. ಚಿಕ್ಕ ವಯಸ್ಸಿನಿಂದಲೇ ಅಧ್ಯಾತ್ಮದ ಅನುಭವಕ್ಕೆ ಪ್ರಯತ್ನಿಸಬೇಕು. ಅಧ್ಯಾತ್ಮವೇ ಜೀವನ. ಪ್ರಾಪಂಚಿಕತೆಯೇ ಅನಿಶ್ಚಿತತೆಯೆಡೆಗೆ ಒಯ್ಯುವುದು. ಅಧ್ಯಾತ್ಮ ನಿಶ್ಚಿತತೆಯೆಡೆಗೆ ಕರೆದೊಯ್ಯುವುದು’. ಇಲ್ಲಿ ಪರಮಹಂಸರು ಮತ್ತೊಂದು ಸುಂದರ ಉದಾಹರಣೆ ನೀಡುತ್ತಾರೆ. ಅದೆಂದರೆ... ಆಮೆಯು ತನ್ನ ಮರಿಗಳನ್ನು ನದಿಯ ದಡದಲ್ಲಿ ಸುರಕ್ಷಿತವಾಗಿರುವಂತಹ ಸ್ಥಳದಲ್ಲಿರಿಸುತ್ತದೆ.
ದಿನವೆಲ್ಲಾ ಆಹಾರಕ್ಕಾಗಿ ನದಿಯ ಮೂಲೆ ಮೂಲೆಯಲ್ಲಿಗೆ ಪ್ರಯಾಣಿಸುತ್ತದೆ. ಆದಾಗ್ಯೂ ಅದರ ಮನಸ್ಸು ಮಾತ್ರ ತನ್ನ ಮರಿಗಳ ಮೇಲಿರುತ್ತದೆ. ಹಾಗೆಯೇ ಜೀವನದ ಕರ್ತವ್ಯಗಳಲ್ಲಿ ನಿರತರಾದಾಗಲೂ ಮನಸ್ಸು ಮಾತ್ರ ಭಗವಂತನೆಡೆಗೆ ಸದಾ ಹರಿಯುತ್ತಿರಬೇಕು. ಇದೇ ಜೀವನದ ಗುರಿ.