ಅಮೂಲ್ಯಾಳ ದೇಶ ದ್ರೋಹಕ್ಕೆ ಹೆಚ್ಚು ಪ್ರಚಾರ ನೀಡಿ ಬಿಜೆಪಿ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿದೆ: ಎಚ್​ಡಿಕೆ ಆರೋಪ

H D Kumaraswamy
Published on

ರಾಮನಗರ: ನಿನ್ನೆ ಫ್ರೀಡಂ ಪಾರ್ಕ್​ನಲ್ಲಿ ನಡೆದ ಸಿಎಎ ವಿರೋಧಿ ಹೋರಾಟದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಅಮೂಲ್ಯಾಳ ಕುರಿತಾಗಿ ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಮಾತನಾಡಿದ್ದಾರೆ. ಆಕೆಯ ದೇಶದ್ರೋಹಿ ತನವನ್ನು ಹೆಚ್ಚೆಚ್ಚು ಪ್ರಚಾರ ಮಾಡುವ ಮೂಲಕ ಬಿಜೆಪಿ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ರಾಮನಗರದ ಹೊಲವಲಯದಲ್ಲಿರುವ ಜಾನಪದ ಲೋಕದಲ್ಲಿ ಮಾತನಾಡಿದ ಕುಮಾರಸ್ವಾಮಿ, "ಅಮೂಲ್ಯಾ ನಿನ್ನೆ ಹೇಳಿದ ದೇಶದ್ರೋಹಿ ಹೇಳಿಕೆಯನ್ನು ಹೆಚ್ಚು ಪ್ರಚಾರ ಮಾಡುವ ಮೂಲಕ ಬಿಜೆಪಿ ತನ್ನ ವೈಫಲ್ಯಗಳನ್ನು ಮುಚ್ಚುವ ಪ್ರಯತ್ನ ಮಾಡುತ್ತಿದೆ. ದೇಶಭಕ್ತಿಯ ಬಗ್ಗೆ ನಮಗೆ ಬಿಜೆಪಿಯಿಂದ ಪಾಠ ಕಲಿಯುವ ಅವಶ್ಯಕತೆಯಿಲ್ಲ. ಹೋರಾಟದಲ್ಲಿ ರಾಷ್ಟ್ರ ಧ್ವಜ ಹಿಡಿದು ಹೋರಾಟ ಮಾಡಿದ್ದಾರೆಯೇ ಹೊರೆತು ಪಾಕಿಸ್ತಾನದ ಧ್ವಜವನ್ನಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಹಾರಾಡಿದ ಧ್ವಜಗಳಿಗಿಂತ ಹೆಚ್ಚು ಧ್ವಜಗಳು ಈ ಹೋರಾಟದಲ್ಲಿ ಹಾರಾಡಿವೆ." ಎಂದು ಹೇಳಿದ್ದಾರೆ.

ಸಂವಿಧಾನ ಕೊಟ್ಟ ಹಕ್ಕನ್ನು, ಸಂವಿಧಾನದ ಆಶಯವನ್ನು ಮತ್ತು ದೇಶವನ್ನು ಯಾರಿಂದಲೂ ಛಿದ್ರಗೊಳಿಸಲಾಗದು. ಯಾರೋ ಒಬ್ಬ ಕಿಡಿಗೇಡಿ ಘೋಷಣೆ ಕೂಗಿದ ಮಾತ್ರಕ್ಕೆ ಅದರ ಗಮನವನ್ನು ಬೇರೆ ಕಡೆಗೆ ಸೆಳೆಯುವ ಅವಶ್ಯಕತೆ ಇಲ್ಲ ಎಂದು ಅವರು ನುಡಿದಿದ್ದಾರೆ,

ಅಮೂಲ್ಯಾಳ ಕುರಿತಾಗಿ ಮಾತನಾಡಿದ ಅವರು, "ಅಮೂಲ್ಯಾ ಪಾಕಿಸ್ತಾನ ಪರವಾಗಿ ಘೋಷಣೆ ಕೂಗಿರುವುದು ಖಂಡನೀಯ. ಆ ರೀತಿಯ ವರ್ಗಕ್ಕೆ ಸೇರಿದವರ ಬಗ್ಗೆ ಸಂಘಟಕರು ಎಚ್ಚರದಿಂದ ಇರಬೇಕು. ಭಾರತೀಯರಾಗಿ ನಮ್ಮ ದೇಶಕ್ಕೆ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯ. ಆಕೆ ಉದ್ದೇಶಪೂರ್ವಕವಾಗಿ ಹೀಗೆ ಮಾಡಿದ್ದಾಳೋ ಇಲ್ಲ ಪ್ರಚಾರಕ್ಕಾಗಿ ಮಾಡಿದ್ದಾಳೋ? ಆಕೆಗೆ ಈ ಬಗ್ಗೆ ತಿಳಿವಳಿಕೆ ಇದೆಯೋ ಇಲ್ಲವೋ ಗೊತ್ತಿಲ್ಲ. ಸಂಘಟನಾಕಾರರು ಇಂತಹ ದೇಶ ದ್ರೋಹದ ಕೆಲಸ ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು. ನಮ್ಮ ಪಕ್ಷದ ಕಾರ್ಯಕರ್ತರಾದ ಇಮ್ರಾನ್ ಸಹ ಕಾರ್ಯಕ್ರಮದ ಸಂಘಟನೆ ಹೊಣೆ ಹೊತ್ತಿದ್ದರು. ಘೋಷಣೆ ಕೂಗಿದ ಕೂಡಲೇ ಆಕೆಯ ಮೈಕ್ ಕಸಿದುಕೊಂಡಿದ್ದಾರೆ. ಹೀಗಾಗಿ ಸಂಘಟಕರಿಂದ ಆ ರೀತಿಯ ಪ್ರಯತ್ನ ಆಗಿಲ್ಲ ಎಂಬುದು ಸ್ಪಷ್ಟವಾಗಿದೆ. ಮೊದಲು ನಾನು ಭಾರತೀಯ ಎಂಬ ಭಾವನೆ ಇದ್ದಾಗ ಮಾತ್ರ ಹೋರಾಟಕ್ಕೆ ಇತರರು ಕೈ ಜೋಡಿಸುತ್ತಾರೆ. ಈ ರೀತಿಯ ಅಪಪ್ರಚಾರ ಯಾರಿಗೂ ಬೇಡ." ಎಂದು ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net