

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸ್ಲ್ಯಾಬ್ ಇಳಿಕೆ ಲಾಭವು ಗ್ರಾಹಕರಿಗೆ ದೊರೆಯುತ್ತಿದ್ದು, ಕೆಲ ವಸ್ತುಗಳ ಬೆಲೆ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ತಗ್ಗಿದೆ. ಕೇಂದ್ರ ಸರ್ಕಾರವು 54 ವಸ್ತುಗಳ ದರದ ಬಗ್ಗೆ ನಿಕಟವಾಗಿ ಮೇಲ್ವಿಚಾರಣೆ ನಡೆಸುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ಜಿಎಸ್ಟಿ ಬಚತ್ ಉತ್ಸವ್ ಪ್ರಗತಿ ಕುರಿತು ಅವರು ಸಚಿವರಾದ ಅಶ್ವಿನಿ ವೈಷ್ಣವ್ ಮತ್ತು ಪಿಯೂಷ್ ಗೋಯಲ್ ಅವರ ಜೊತೆಗೂಡಿ ಶನಿವಾರ ಸುದ್ದಿಗೋಷ್ಠಿ ನಡೆಸಿದರು. ನವರಾತ್ರಿ ಮೊದಲನೇ ದಿನ ಇದನ್ನು ಆರಂಭಿಸಲಾಯಿತು. ದೇಶದ ಜನರು ಈ ಉಪ್ರಕಮವನ್ನು ಉತ್ತಮವಾಗಿ ಸ್ವೀಕರಿಸಿದ್ದಾರೆ. ಕೆಲ ವಸ್ತುಗಳ ವಿಚಾರದಲ್ಲಿ ಹೇಳುವುದಾದರೆ, ಉದ್ಯಮಿಗಳು ನಿರೀಕ್ಷೆಗಿಂತ ಹೆಚ್ಚಿನ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸಿದ್ದಾರೆ ಎಂದು ಅವರು ವಿವರಿಸಿದರು.
ಸೆಪ್ಟೆಂಬರ್ ತಿಂಗಳ ಕೊನೆಯ ಒಂಬತ್ತು ದಿನಗಳಲ್ಲಿ ಖರೀದಿ ಭರಾಟೆ ಹೆಚ್ಚಿತ್ತು. 3.72 ಲಕ್ಷ ಪ್ರಯಾಣಿಕ ವಾಹನಗಳು, 21.60 ಲಕ್ಷ ದ್ವಿಚಕ್ರ ವಾಹನಗಳು ಮಾರಾಟವಾಗಿದ್ದು, ತ್ರಿಚಕ್ರ ವಾಹನಗಳ ಮಾರಾಟದಲ್ಲಿ ಕಳೆದ ವರ್ಷಕ್ಕಿಂತ ಶೇ.5.5 ಏರಿಕೆ ಕಂಡುಬಂದಿದೆ. ಜಿಎಸ್ಟಿ ಬಚತ್ ಉತ್ಸವ್ ಮೊದಲ ದಿನದಂದು ಟಿವಿ ಮಾರಾಟ ಶೇ.30-35 ಹೆಚ್ಚಿದ್ದರೆ, ಎಸಿಗಳ ಮಾರಾಟ ದುಪ್ಪಟ್ಟಾಗಿತ್ತು ಎಂದು ಸಚಿವೆ ನಿರ್ಮಲಾ ಹೇಳಿದರು. ಉದ್ಯಮ, ಮಾರುಕಟ್ಟೆ ಹಾಗೂ ಜನಸಾಮಾನ್ಯರು ಹೀಗೆ ಎಲ್ಲ ವಲಯಗಳಲ್ಲಿಯೂ ಜಿಎಸ್ಟಿ ಸ್ಲ್ಯಾಬ್ ಇಳಿಕೆಯಿಂದ ಹೊಸ ಉತ್ಸಾಹ ಕಂಡುಬಂದಿದೆ ಎಂದು ಸಚಿವ ಪಿಯೂಷ್ ಗೋಯಲ್ ಹೇಳಿದರು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ನವರಾತ್ರಿ ಅವಧಿಯಲ್ಲಿ ಎಲೆಕ್ಟ್ರಾನಿಕ್ ಸಾಮಗ್ರಿಗಳ ಮಾರಾಟ ಶೇ.20-25 ಹೆಚ್ಚಿದೆ. ಸತತ ನಾಲ್ಕು ತಿಂಗಳುಗಳಿಂದ ಬೆಲೆಯಲ್ಲಿನ ಇಳಿಕೆಯಿಂದಾಗಿ ಆಹಾರ ಹಣದುಬ್ಬರದಲ್ಲಿ ಶೇ.2 ಇಳಿಕೆ ಗೋಚರಿಸಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ಹೇಳಿದರು.
ಪ್ರಮುಖಾಂಶ