

ಬೆಂಗಳೂರು: ನೇಮಕಾತಿ ಅಕ್ರಮ ಸಂಬಂಧ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ವಿರುದ್ಧ ಚಾಟಿ ಬೀಸಿರುವ ಹೈಕೋರ್ಟ್, ಪೂರ್ಣವಾಗಿ ಆಯೋಗವನ್ನು ಸ್ವಚ್ಛಗೊಳಿಸಬೇಕು. ಆ ಕೆಲಸವನ್ನು ನ್ಯಾಯಾಲಯವೇ ಆರಂಭಿಸುತ್ತದೆ ಎಂದು ಕಿಡಿಕಾರಿದೆ.
ಸಹಾಯಕ ಇಂಜಿನಿಯರ್‌ಗಳ ನೇಮಕದಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಅವರನ್ನು ವಜಾಗೊಳಿಸುವಂತೆ ಆಯೋಗ ಮಾಡಿರುವ ಶಿಾರಸಿಗೆ ತಡೆ ನೀಡಲು ನಿರಾಕರಿಸಿರುವ ಕೆಎಟಿ ಆದೇಶವನ್ನು ಪ್ರಶ್ನಿಸಿ ವಿಶ್ವಾಸ್ ಮತ್ತಿತರರು ಸಲ್ಲಿಸಿರುವ ಮೇಲ್ಮನವಿಗಳನ್ನು ಹಿರಿಯ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ನ್ಯಾಯಪೀಠ ‘ಸರ್ಕಾರ ಆಯೋಗವನ್ನು ಶುದ್ಧೀಕರಿಸಬೇಕಿತ್ತು, ಅದು ಮಾಡದ ಹಿನ್ನೆಲೆಯಲ್ಲಿ ನಾವೇ ಸ್ವಚ್ಛತೆಗೆ ಮುಂದಾಗುತ್ತೇವೆ. ಈ ಪ್ರಕರಣವನ್ನು ಇಲ್ಲಿಗೆ ಬಿಡುವುದಿಲ್ಲ’ ಎಂದಿತು.
ಮುಂದುವರಿದು, ಸಗಣಿ ತಿನ್ನುವ ಜನರನ್ನು ಸುಮ್ಮನೆ ಬಿಡೋದಿಲ್ಲ. ಈ ವಿಚಾರದಲ್ಲಿ 4-5 ತಲೆ ಉರುಳಿದರೆ ಸರಿ ಹೋಗೋದು. ಎಲ್ಲ ಕಡೆ ಕೆಟ್ಟವರು ಇರುತ್ತಾರೆ ಅಂತಲ್ಲ, ಕೆಟ್ಟ ಜನರು ಒಳ್ಳೆಯವರನ್ನು ಬದುಕಲು ಬಿಡುವುದಿಲ್ಲ. ಹಾಗಾಗಿ ನಾವು ಆಯೋಗದ ನೇಮಕದಲ್ಲಿ ಪಾರದರ್ಶಕತೆ ತರಲು ಏನೆಲ್ಲಾ ಮಾಡಬೇಕೋ ಅದನ್ನು ಮಾಡೋಣ ಎಂದು ಹೇಳಿತು.
ಪ್ರಭಾವಿ ವ್ಯಕ್ತಿಗಳ ಕೈವಾಡ ಇಲ್ಲದೆ ಅಕ್ರಮಗಳು ನಡೆಯುವುದಿಲ್ಲ ಎಂದು ಮೌಖಿಕವಾಗಿ ಹೇಳಿದ ನ್ಯಾಯಪೀಠ, ಆಯೋಗದ ಯಾವ್ಯಾವ ಸದಸ್ಯ, ಸಿಬ್ಬಂದಿ ಮೇಲೆ ಎಷ್ಟು ಕ್ರಿಮಿನಲ್ ಕೇಸುಗಳು ಬಾಕಿ ಇವೆ. ಅವುಗಳು ಯಾವ ಹಂತದಲ್ಲಿವೆ ಎಂಬ ವಿವರಗಳನ್ನು ಮುಂದಿನ ವಿಚಾರಣೆ ವೇಳೆ ಒದಗಿಸುವಂತೆ ಎಜಿಗೆ ನಿರ್ದೇಶನ ನೀಡಿತು.