ಮನೆ ಹಿಂಬಾಗಿಲು ಮುರಿದು ಚಿನ್ನಾಭರಣ, 1.80 ಕೋಟಿ ರೂ. ಕಳವು

Published on

ಹುಣಸೂರು: ನಗರದ ಮಂಜುನಾಥ ಬಡಾವಣೆಯಲ್ಲಿ ಭಾನುವಾರ ಸಂಜೆ ಮನೆ ಹಿಂಬಾಗಿಲು ಒಡೆದು ತಿಜೋರಿಯಲ್ಲಿದ್ದ 1.80 ಕೋಟಿ ರೂ. ನಗದು ಮತ್ತು 440 ಗ್ರಾಂ.ಚಿನ್ನಾಭರಣ ಕಳ್ಳತನವಾಗಿದೆ.

ನಗರದ ಗೋಕುಲ ರಸ್ತೆಯಲ್ಲಿ ರಸಗೊಬ್ಬರ ವ್ಯಾಪಾರಿ ಗಿರೀಶ್ ಅವರ ಮನೆಯಲ್ಲಿ ಕಳ್ಳತನವಾಗಿದ್ದು, ಸಂಜೆ ವೇಳೆ ಜನರ ಓಡಾಟವಿದ್ದ ಸಮಯದಲ್ಲೇ ಕಳ್ಳತನವಾಗಿರುವುದು ನಾಗರಿಕರಲ್ಲಿ ಆತಂಕ ಮೂಡಿಸಿದೆ.

ಭಾನುವಾರ ಸಂಜೆ ಗಿರೀಶ್ ಅವರ ಮನೆಯಲ್ಲಿ ಅವರ ತಾಯಿಯನ್ನು ಹೊರತುಪಡಿಸಿ ಇನ್ಯಾರು ಇರಲಿಲ್ಲ. ಸಂಜೆ 5ರ ಸುಮಾರು ಅಂಗಡಿಯಿಂದ ಬಂದ ಗಿರೀಶ್ ಮನೆಯಲ್ಲಿದ್ದ ತಮ್ಮ ತಾಯಿಯನ್ನು ಹಳ್ಳಿಗೆ ಕರೆದುಕೊಂಡು ಹೋಗಿ ಬಿಟ್ಟು ಬಂದರು. ಮನೆಗೆ ಬಂದ ವೇಳೆ ಮನೆ ಹಿಂಬಾಗಿಲು ಒಡೆದಿರುವುದನ್ನು ಕಂಡರು. ಕಳ್ಳತನವಾಗಿರುವುದನ್ನು ಅರಿತು ಅವರು ಒಳಗೆ ಹೋಗಿ ಪರಿಶೀಲಿಸಿದಾಗ ತಿಜೋರಿ ಬಾಗಿಲು ಒಡೆದು ಚಿನ್ನಾಭರಣ ಮತ್ತು ಹಣವನ್ನು ಕಳ್ಳರು ದೋಚಿರುವುದು ಗೊತ್ತಾಯಿತು.

ಸ್ಥಳಕ್ಕೆ ಜಿಲ್ಲಾ ಎಎಸ್‌ಪಿ-2 ನಾಗೇಶ್ ಧಾವಿಸಿ ಬಂದು ಘಟನೆ ಕುರಿತು ಮನೆಯವರಿಂದ ಮಾಹಿತಿ ಪಡೆದರು. ಬೆರಳಚ್ಚು ತಜ್ಞರು ಮತ್ತು ಶ್ವಾನದಳ ಬಂದು ಇಡೀ ಮನೆಯನ್ನು ಪರಿಶೀಲನೆ ನಡೆಸಿದರು. ಸೋಮವಾರ ಬೆಳಗ್ಗೆ ಅಡಿಷನಲ್ ಎಸ್‌ಪಿ ನಂದಿನಿ ಕಳ್ಳತನವಾದ ಮನೆಗೆ ಭೇಟಿ ನೀಡಿ ಸುಮಾರು ಮಧ್ಯಾಹ್ನದವರೆಗೂ ಪರಿಶೀಲನೆ ನಡೆಸಿದರು. ಪೊಲೀಸರು ಮಹಜರು ಕಾರ್ಯ ಕೈಗೊಂಡರು.

ಈ ವೇಳೆ ವಿಜಯವಾಣಿಗೆ ಮಾಹಿತಿ ನೀಡಿದ ಡಿವೈಎಸ್‌ಪಿ ಗೋಪಾಲಕೃಷ್ಣ, ಎರಡಕ್ಕಿಂತ ಹೆಚ್ಚು ಜನರು ಕೃತ್ಯದಲ್ಲಿ ಭಾಗಿಯಾಗಿರುವ ಅನುಮಾನಗಳಿವೆ. ಪ್ರಕರಣವನ್ನು ಬೇಧಿಸಲು ನಗರಠಾಣೆ ಇನ್ಸ್‌ಪೆಕ್ಟರ್ ಸಂತೋಷ್ ಕಶ್ಯಪ್, ಗ್ರಾಮಾಂತರ ಠಾಣೆ ಇನ್ಸ್‌ಪೆಕ್ಟರ್ ಮುನಿಯಪ್ಪ ಮತ್ತು ಬೈಲಕುಪ್ಪೆ ಪಿಎಸ್‌ಐ ಅಜಯ್‌ಕುಮಾರ್‌ರ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಲಾಗಿದ್ದು, ಎಎಸ್‌ಪಿ ಮಾರ್ಗದರ್ಶನದಂತೆ ತನಿಖೆ ಮುಂದುವರೆಯಲಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net