

ಶಿವಮೊಗ್ಗ: ಕಟ್ಟಡ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಕಾರ್ಮಿಕರಲ್ಲಿ ಜಾಗೃತಿ ಮೂಡಿಸಲು ನಿರ್ಧರಿಸಲಾಗಿದೆ. ಹೀಗಾಗಿ ಆ.19ರ ಬೆಳಗ್ಗೆ 10.30ಕ್ಕೆ ನಗರದಲ್ಲಿ ಬೈಕ್ ರ‌್ಯಾಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ಕಟ್ಟಡ ಕಾರ್ಮಿಕರ ಮತ್ತು ಅಸಂಘಟಿತ ಕಾರ್ಮಿಕರ ಹಿತರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ದೇವು(ಎಚ್.ಸತೀಶ್) ತಿಳಿಸಿದರು.
ನಗರದ ಮುಖ್ಯ ಬಸ್ ನಿಲ್ದಾಣದ ಎದುರಿನ ಅಶೋಕ ವೃತ್ತದಿಂದ ಆರಂಭವಾಗುವ ಬೈಕ್ ರ‌್ಯಾಲಿ, ಶಿವಪ್ಪನಾಯಕ ವೃತ್ತ, ಎಂಆರ್‌ಎಸ್, ಬೈಪಾಸ್ ರಸ್ತೆ ಮಾರ್ಗವಾಗಿ ಮಂಡ್ಲಿ, ಗೋಪಾಳ, ವಿನೋಬನಗರ, ಉಷಾ ನರ್ಸಿಂಗ್ ಹೋಂ, ಜೈಲ್ ವೃತ್ತ, ದುರ್ಗಿಗುಡಿ, ಗೋಪಿ ವೃತ್ತದ ಮೂಲಕ ತೆರಳಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮುಕ್ತಾಯವಾಗಲಿದೆ. ಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶಿವಮೊಗ್ಗದಲ್ಲಿ ಬೇರೆ ರಾಜ್ಯದಿಂದ ಬಂದವರಿಗೆ ಕೆಲಸದಲ್ಲಿ ಆದ್ಯತೆ ನೀಡಲಾಗುತ್ತಿದೆ. ಅಂತವರ ಹಿನ್ನೆಲೆ ಇಲ್ಲಿ ಕೆಲಸ ನೀಡುವವರಿಗೆ ತಿಳಿದಿರುವುದಿಲ್ಲ. ಅಪರಾಧ ಹಿನ್ನೆಲೆ ಉಳ್ಳವರು ಇಲ್ಲಿ ಬಂದು ಆಶ್ರಯ ಪಡೆಯುವ ಅಪಾಯವಿದೆ. ಯಾವುದೇ ಮಾಹಿತಿ ಪಡೆಯದೇ ಕೆಲಸಕ್ಕೆ ಜನರನ್ನು ನೇಮಕ ಮಾಡಿಕೊಳ್ಳಬಾರದು. ಆಧಾರ್ ಕಾರ್ಡ್, ಭಾವಚಿತ್ರ, ವಿಳಾಸ ಇಲ್ಲದ ಯಾರನ್ನೂ ಕೆಲಸಕ್ಕೆ ನಿಯೋಜಿಸಿಕೊಳ್ಳಬಾರದು ಎಂದು ಹೇಳಿದರು.
ಬೇರೆ ರಾಜ್ಯಗಳ ಕಾರ್ಮಿಕರ ಹಾವಳಿಯಿಂದ ಸ್ಥಳೀಯರಿಗೆ ಕೆಲಸವೇ ಇಲ್ಲದಂತಾಗಿದೆ. ಸ್ಥಳೀಯರಿಗೆ ಮೊದಲ ಆದ್ಯತೆ ನೀಡಬೇಕು. ಕಾರ್ಮಿಕರಿಗೆ ಅನೇಕ ಸಮಸ್ಯೆಗಳಿವೆ. ಕಾರ್ಮಿಕರ ಮಕ್ಕಳಿಗೆ ನೀಡುವ ವಿದ್ಯಾರ್ಥಿ ವೇತನ ನಿಲ್ಲಿಸಲಾಗಿದೆ. ಅನರ್ಹರಿಗೂ ಕಾರ್ಮಿಕ ಕಾರ್ಡ್ ನೀಡಲಾಗಿದೆ. ಇದೆಲ್ಲದರ ಮೇಲೆ ಬೆಳಕು ಚೆಲ್ಲುವುದು ಬೈಕ್ ರ‌್ಯಾಲಿಯ ಮುಖ್ಯ ಉದ್ದೇಶ ಎಂದರು. ವೇದಿಕೆ ಪದಾಧಿಕಾರಿಗಳಾದ ಶಿವರಾಜ್, ಶ್ರೀನಿವಾಸ್, ಮುರಳಿ, ಅಣ್ಣಪ್ಪ, ಮಹೇಶ್, ಕಲ್ಲೇಶ್, ಅನಂತ್ ಸುದ್ದಿಗೋಷ್ಠಿಯಲ್ಲಿದ್ದರು.