

ಶಿವಮೊಗ್ಗ: ನಗರದ ಹೊಸಮನೆ ಬಡಾವಣೆಯ ಜೈಲ್ ವೃತ್ತದ ಸಮೀಪ ಗೆಳೆಯ ಬಳಗದ ಆಟೋ ನಿಲ್ದಾಣ ಹಾಗೂ ಹೊಸಮನೆ ಒಂದನೇ ಮುಖ್ಯ ರಸ್ತೆಯಲ್ಲಿ ಬನಶಂಕರಿ ಆಟೋ ನಿಲ್ದಾಣವನ್ನು ಪಾಲಿಕೆ ಪ್ರತಿಪಕ್ಷ ನಾಯಕಿ ರೇಖಾ ರಂಗನಾಥ್ ಸೋಮವಾರ ಉದ್ಘಾಟಿಸಿದರು. ಪಾಲಿಕೆ ಸದಸ್ಯರ ಅನುದಾನದಲ್ಲಿ ಈ ನಿಲ್ದಾಣಗಳನ್ನು ಅಚ್ಚುಕಟ್ಟಾಗಿ ನಿರ್ಮಾಣ ಮಾಡಲಾಗಿದೆ.
ಈ ನಿಲ್ದಾಣಗಳು ಸಂಪೂರ್ಣ ಕನ್ನಡಮಯವಾಗಿವೆ. ಸಾಹಿತಿಗಳು, ಕನ್ನಡ ಚಿತ್ರನಟರು, ರಾಜ್ಯದ ಸಾಧಕರ ಭಾವಚಿತ್ರಗಳನ್ನು ನಿಲ್ದಾಣದ ಸುತ್ತಲೂ ಅಳವಡಿಸಲಾಗಿದೆ. ಮೈಸೂರು ಸಂಸ್ಥಾನವನ್ನು ಅಭಿವೃದ್ಧಿಪಥದಲ್ಲಿ ಕೊಂಡೊಯ್ದ ನಾಲ್ವಡಿ ಕೃಷ್ಣರಾಜ ಒಡೆಯರ್, ವಿಶ್ವೇಶ್ವರಯ್ಯ, ಹಿರಿಯ ಸಾಹಿತಿಗಳಾದ ಕುವೆಂಪು, ದ.ರಾ.ಬೇಂದ್ರೆ, ಶಿವರಾಮ ಕಾರಂತರು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿ.ಕೃ. ಗೋಕಾಕ್, ಯು.ಆರ್.ಅನಂತಮೂರ್ತಿ ಅವರ ಭಾವಚಿತ್ರಗಳು ಇಲ್ಲಿವೆ.
ಕನ್ನಡ ಚಿತ್ರರಂಗದ ದಿಗ್ಗಜರಾದ ಡಾ.ರಾಜ್‌ಕುಮಾರ್, ಶಂಕರನಾಗ್, ಡಾ.ವಿಷ್ಣುವರ್ಧನ್ ಅಂಬರೀಷ್, ಪುನೀತ್ ರಾಜ್‌ಕುಮಾರ್, ಸಮಾಜಕ್ಕೆ ಅಪರಿಮಿತ ಕೊಡುಗೆ ನೀಡಿದ ಸಾಲುಮರದ ತಿಮ್ಮಕ್ಕ, ಮಂಜಮ್ಮ ಜೋಗತಿ ಚಿತ್ರಗಳಿದ್ದು ಗಮನಸೆಳೆಯುತ್ತಿವೆ.
ಪಾಲಿಕೆ ಸದಸ್ಯ ಎಚ್.ಸಿ.ಯೋಗೇಶ್, ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಪ್ರಸನ್ನಕುಮಾರ್ ಮುಂತಾದವರು ಈ ಸಂದರ್ಭದಲ್ಲಿದ್ದರು.