ಸಮಾಜದೊಂದಿಗಿನ ವರ್ತನೆ ಬಹಳ ಮುಖ್ಯ ಎಂದ ಶ್ರೀ

JSS
Published on

ಬೆಂಗಳೂರು ಸಾಧನೆಗಳಿಂದ ಪಡೆಯುವ ಪ್ರಶಸ್ತಿಗಳನ್ನು ಕೊರಳಿಗೆ ನೇತುಹಾಕಿಕೊಂಡು ಎಲ್ಲ ಕಡೆ ಪ್ರದರ್ಶಿಸಲು ಸಾಧ್ಯವಿಲ್ಲ. ಆದರೆ, ನಮ್ಮಲ್ಲಿನ ಸರಳ ನಡೆ-ನುಡಿಗಳಿಂದ ಮಾತ್ರ ನಮ್ಮ ಜ್ಞಾನ, ವಿದ್ಯೆಯನ್ನು ಪ್ರದರ್ಶಿಸಲು ಸಾಧ್ಯ. ಈ ಕಾರಣದಿಂದ ಸಮಾಜದೊಂದಿಗೆ ವರ್ತನೆ ಬಹಳ ಮುಖ್ಯ ಎಂದು ಶಿವಗಂಗಾ ಕ್ಷೇತ್ರದ ಡಾ. ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಜಯನಗರದ ಶಿವರಾತ್ರೀಶ್ವರ ಕೇಂದ್ರದ ಚಿಂತನ ಮಂಟಪದಲ್ಲಿ ಭಾನುವಾರ ಜಯನಗರ ನಾಗರಿಕ ಒಕ್ಕೂಟ ಆಯೋಜಿಸಿದ್ದ ಬಸವೇಶ್ವರ ಜಯಂತಿ ಹಾಗೂ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಿ ಅವರು ಮಾತನಾಡಿದರು.

ಇತ್ತೀಚಿನ ವರ್ಷಗಳಲ್ಲಿ ಆಮಿಷಗಳಿಗೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳುತ್ತಿರುವವರ ಮಧ್ಯೆಯೂ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಈ ಕಾರಣಕ್ಕಾಗಿ ಅಭಿನಂದಿಸಲಾಗುತ್ತಿದೆ ಎಂದರು.

ಓದು ಪರೀಕ್ಷೆಗೆ ಮಾತ್ರ ಸೀಮಿತವಾಗಬಾರದು. ಬಸವಣ್ಣನ ಅವರ ಪಾಠದ ಮುಖ್ಯ ಉದ್ದೇಶವೇ ವಿನಯವಂತಿಕೆಯಾಗಿದೆ. ಕೇವಲ ಪುಸ್ತಕದ ಪಾಂಡಿತ್ಯದಿಂದ ಜ್ಞಾನವಂತನೆಂದು ತಿಳಿಯಸಲು ಸಾಧ್ಯವಿಲ್ಲ. ಮನುಷ್ಯನಲ್ಲಿನ ಏಕಾಗ್ರತೆ, ವಿನಯತೆ, ಔಚಿತ್ಯಪೂರ್ಣವಾದ ನಡೆ-ನುಡಿ ವ್ಯಕ್ತಿಯನ್ನು ಪ್ರತಿಭಾವಂತನನ್ನಾಗಿಸುತ್ತದೆ ಎಂದು ಹೇಳಿದರು.

ಶಾಸಕ ಸಿ.ಕೆ. ರಾಮಮೂರ್ತಿ ಮಾತನಾಡಿ, ಬಸವಣ್ಣನವರು ಲಿಂಗಾಯತರಿಗೆ, ಶಂಕರಾಚಾರ್ಯರು ಬ್ರಾಹ್ಮಣರಿಗೆ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ದಲಿತರಿಗೆ ಸೀಮಿತವಾಗಿಲ್ಲ. ಈ ಮಹಾನ್ ಚೇತನಗಳು ಇಡೀ ಸಮಾಜಕ್ಕೆ ಸೇರಿದವರಾಗಿದ್ದಾರೆ. ಅವರ ಆದರ್ಶದಲ್ಲಿ ಸಮಾಜವನ್ನು ಮುನ್ನಡೆಸುವತ್ತ ಎಲ್ಲರೂ ಚಿಂತನೆ ಮಾಡಬೇಕಿದೆ ಎಂದು ತಿಳಿಸಿದರು.

ತಮ್ಮ ಕಷ್ಟಗಳನ್ನು ತಂದೆ-ತಾಯಿಯು ಎಂದಿಗೂ ಮಕ್ಕಳ ಬಳಿ ಹೇಳಿಕೊಳ್ಳುವುದಿಲ್ಲ. ನಮ್ಮ ಮಕ್ಕಳು ಚೆನ್ನಾಗಿರಲಿ ಎಂದೇ ಆಶಿಸುತ್ತಾರೆ. ಆದ್ದರಿಂದ ಮಕ್ಕಳು ಗುರಿ ಮುಟ್ಟುವುದೇ ನಿಜವಾಗಿಯೂ ಪೋಷಕರಿಗೆ ನೀಡುವ ಕೊಡುಗೆಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಯನಗರ ನಾಗರಿಕ ಒಕ್ಕೂಟದ ಗೌರವ ಅಧ್ಯಕ್ಷ ಎಸ್. ನರೇಶ್‌ಕುಮಾರ್, ಅಧ್ಯಕ್ಷ ಬಿ. ಉಮೇಶ್ ಮತ್ತು ಗೀತಾ ಜಯಂತ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net