

ಬಾಂಗ್ಲಾದೇಶದ ನೂತನ ಸರ್ಕಾರ ಉದ್ದೇಶಪೂರ್ವಕವಾಗಿ ಮತ್ತು ದ್ವೇಷಭಾವನೆಯಿಂದ ಅಲ್ಲಿನ ಹಿಂದುಗಳು ಮತ್ತು ಇತರ ಅಲ್ಪಸಂಖ್ಯಾತರನ್ನು ಗುರಿಯಾಗಿಸುತ್ತಿದೆ. ಮತ್ತು ಇಂಥ ಕೃತ್ಯಗಳನ್ನು ವಿರೋಧಿಸುವವರನ್ನೇ ದಮನಿಸಲು ಹೊರಟಿರುವುದು ಅದರ ಹತಾಶೆ ಮತ್ತು ಉದ್ಧಟತನಕ್ಕೆ ಸಾಕ್ಷಿಯಾಗಿದೆ. ನ್ಯಾಯಕ್ಕಾಗಿ ದನಿ ಎತ್ತುವವರ ಮೇಲೆ ಅದು ಬಲಪ್ರಯೋಗ ಮಾಡುತ್ತಿದ್ದು, ಅಲ್ಪಸಂಖ್ಯಾತರು ಆತಂಕದಿಂದ ಬದುಕುವಂತಾಗಿದೆ. ದೌರ್ಜನ್ಯದ ಇಂಥ ಘಟನೆಗಳು ಹೆಚ್ಚುತ್ತಲೇ ಇರುವುದು, ಅಲ್ಲಿನ ಕಾನೂನು ಸುವ್ಯವಸ್ಥೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಪ್ರಬಲವಾಗಿ ಧ್ವನಿ ಎತ್ತಿದ ಸ್ವಾಮಿ ಚಿನ್ಮಯ ಕೃಷ್ಣದಾಸ ಪ್ರಭು ಅವರನ್ನು ಅಲ್ಲಿನ ಸರ್ಕಾರ ಢಾಕಾ ವಿಮಾನ ನಿಲ್ದಾಣದಲ್ಲಿ ಬಂಧಿಸಿ, ದೇಶದ್ರೋಹದ ಪ್ರಕರಣ ದಾಖಲಿಸಿದೆ. ಅವರಿಗೆ ಜಾಮೀನು ಕೂಡ ಸಿಗದಂತೆ ಮಾಡಿ, ನ್ಯಾಯಾಂಗ ವಶಕ್ಕೆ ಕಳಿಸಲಾಗಿರುವುದು, ನಿಜಕ್ಕೂ ಕಳವಳಕಾರಿ ಘಟನೆ. ಅಲ್ಲಿನ ಸರ್ಕಾರದ ಈ ಸರ್ವಾಧಿಕಾರಿ ಧೋರಣೆ ಭಾರಿ ಆಕ್ರೋಶವನ್ನು ಹುಟ್ಟುಹಾಕಿದೆ. ಹಿಂದುಗಳಿಗೆ ರಕ್ಷಣೆ ನೀಡಿ, ಅವರಲ್ಲಿ ಸ್ಥೈರ್ಯ ತುಂಬುವುದನ್ನು ಬಿಟ್ಟು, ಹಿಂದುಗಳ ಮೇಲೆ ದೌರ್ಜನ್ಯ ಎಸಗುತ್ತಿರುವುದು, ಹೋರಾಟಗಾರರನ್ನು ಬಂಧಿಸುತ್ತಿರುವುದು ತೀವ್ರ ಖಂಡನೀಯ. ಹಿಂಸೆಯನ್ನು ವಿರೋಧಿಸಿದರೆ ಅವರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸುವುದು ದಬ್ಬಾಳಿಕೆಯ ಪರಮಾವಧಿ.
ಸಮ್ಮಿಳಿತ ಸನಾತನ ಜಾಗರಣ ವೇದಿಕೆಯ ವಕ್ತಾರರೂ ಆಗಿರುವ ಸ್ವಾಮಿ ಚಿನ್ಮಯ ಕೃಷ್ಣದಾಸ ಪ್ರಭು ಅವರ ಬಂಧನವನ್ನು ವಿರೋಧಿಸಿ ಅಲ್ಲಿರುವ ಹಿಂದುಗಳು ತೀವ್ರ ಪ್ರತಿಭಟನೆ ಆರಂಭಿಸಿದ್ದಾರೆ. ಜತೆಗೆ, ಭಾರತ ಸರ್ಕಾರ ಕೂಡ ತನ್ನ ತೀವ್ರ ಪ್ರತಿಭಟನೆಯನ್ನು ರಾಜತಾಂತ್ರಿಕ ಮಾರ್ಗದಲ್ಲಿ ದಾಖಲಿಸಿದೆ. ‘ಚಿನ್ಮಯ್ ಕೃಷ್ಣದಾಸ್ ಅವರ ಬಂಧನ ಮತ್ತು ಜಾಮೀನು ನಿರಾಕರಣೆ ಪ್ರಕರಣವನ್ನು ನಾವು ತೀವ್ರ ಕಳವಳದಿಂದ ಗಮನಿಸಿದ್ದೇವೆ. ಈ ಘಟನೆಯು ಬಾಂಗ್ಲಾದೇಶದಲ್ಲಿ ಹಿಂದುಗಳು ಮತ್ತು ಇತರ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದಾಳಿಗಳಿಗೆ ಮತ್ತಷ್ಟು ಪ್ರಚೋದನೆ ನೀಡಿದಂತಾಗುತ್ತದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಬೇಸರ ಹೊರಹಾಕಿದೆ.
ಅಲ್ಪಸಂಖ್ಯಾತರಾದ ಹಿಂದುಗಳಿಗೆ ಬಾಂಗ್ಲಾ ಸರ್ಕಾರ ಮತ್ತು ಅಲ್ಲಿನ ನಾಗರಿಕರು ಕಿರುಕುಳ ನೀಡುತ್ತಿರುವುದು ಇದೇ ಮೊದಲೇನಲ್ಲ. ಕೆಲವೇ ತಿಂಗಳುಗಳ ಹಿಂದೆ ಹಿಂದುಗಳ ಮನೆಗಳು, ದೇವಸ್ಥಾನಗಳಿಗೆ ನುಗ್ಗಿ ದಾಂಧಲೆ ನಡೆಸಲಾಗಿತ್ತು. ಬೆಂಕಿ ಹಚ್ಚಿ, ಲೂಟಿ ಮಾಡಿದ ಪ್ರಕರಣಗಳಂತೂ ಆತಂಕ ಹುಟ್ಟುಹಾಕಿದ್ದವು. ಅದರ ವಿರುದ್ಧ ಬಾಂಗ್ಲಾ ಸರ್ಕಾರ ಯಾವುದೇ ಕಠಿಣ ಕ್ರಮ ಕೈಗೊಳ್ಳಲಿಲ್ಲ. ಹೀಗಾಗಿ, ಇಂಥ ಘಟನೆಗಳು ಮತ್ತೆಮತ್ತೆ ನಡೆಯುತ್ತಿವೆ. ಈ ವಿಷಯವನ್ನು ಕೇಂದ್ರ ಸರ್ಕಾರ ಇಷ್ಟಕ್ಕೇ ಬಿಡದೆ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಗಟ್ಟಿದನಿಯಲ್ಲಿ ಪ್ರಸ್ತಾಪಿಸಬೇಕು. ಆ ಮೂಲಕ ಬಾಂಗ್ಲಾ ಸರ್ಕಾರದ ಮೇಲೆ ಒತ್ತಡ ತರಬೇಕು. ಬಾಂಗ್ಲಾದೇಶದಲ್ಲಿರುವ ಹಿಂದುಗಳ ರಕ್ಷಣೆಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು. ಸಂತರು ಮತ್ತು ಹೋರಾಟಗಾರರನ್ನು ಬಾಂಗ್ಲಾ ಸರ್ಕಾರ ವಿಳಂಬವಿಲ್ಲದೆ ಬಿಡುಗಡೆಗೊಳಿಸಬೇಕು. ಭವಿಷ್ಯದಲ್ಲಿ ಇಂಥ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ವಹಿಸಬೇಕು.