ಹಸುಗಳ ಕೆಚ್ಚಲು ಕೊಯ್ದ ಪ್ರಕರಣದ ಆರೋಪಿ ಬಂಧನವೇ ಶಂಕಾಸ್ಪದ: ಭಾಸ್ಕರರಾವ್ ಹೇಳಿಕೆ | Conspiracy to grab land worth crores of rupees

Retired IPS Bhaskar rao
Published on

ಬೆಂಗಳೂರು: ಸಂಕ್ರಾಂತಿ ಹಬ್ಬಕ್ಕೆ ಮುನ್ನವೇ ಮೂರು ಹಸುಗಳ ಕೆಚ್ಚಲು ಕೊಯ್ದ ದುಷ್ಕೃತ ಘಟಿಸಿದೆ. ಪಾನಮತ್ತ, ಮಾನಸಿಕ ಅಸ್ವಸ್ಥನೆಂದು ಹೇಳಲಾದ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದು, ಪ್ರಕರಣ ಮುಚ್ಚಿ ಹಾಕುವ ಪಿತೂರಿ ನಡೆದಂತಿದೆ ಎಂದು ನಿವೃತ್ತ ಐಪಿಎಸ್ ಅಧಿಕಾರಿ, ಬಿಜೆಪಿ ಮುಖಂಡ ಭಾಸ್ಕರ್‌ರಾವ್ ಶಂಕೆ ವ್ಯಕ್ತಪಡಿಸಿದರು.

ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮರಾಜಪೇಟೆಯ ಅತಿ ಸೂಕ್ಷ್ಮ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕೋಮು ಗಲಭೆ ಹುಟ್ಟಿಹಾಕುವ ಪ್ರಯತ್ನ ದುಷ್ಕೃತ್ಯದ ಹಿಂದಿರುವ ಅನುಮಾನವಿದೆ ಎಂದರು.

ಕ್ಷೇತ್ರದ ಶಾಸಕ, ಸಚಿವರೂ ಆದ ಜಮೀರ್ ಅಹ್ಮದ್ ಅವರು ಐದು ಹಸುಗಳನ್ನು ಮಾಲೀಕನಿಗೆ ನೀಡುವುದಾಗಿ ಹೇಳಿರುವುದು ಆಘಾತಕಾರಿಯಾಗಿದೆ. ಕೃತ್ಯ ಎಸಗಿದ ನೈಜ ಆರೋಪಿಗಳ ಬಂಧನ, ದುಷ್ಕೃತ್ಯದ ಹಿಂದಿರುವ ಸಂಚು ಬಯಲಿಗೆ ಬರಬೇಕಾಗಿದೆ ಎಂದು ಒತ್ತಾಯಿಸಿದರು.

ಜಾಗ ಕಬಳಿಸುವ ಸಂಚು

ದಾನಿಗಳಾದ ಸಜ್ಜನ್‌ರಾವ್ ಅವರು ಪಶು ಚಿಕಿತ್ಸೆಗಾಗಿ 100 ವರ್ಷಗಳ ಹಿಂದೆ ಆಸ್ಪತ್ರೆಗೆ ಜಾಗ ದಾನ ಮಾಡಿದ್ದು, 2,237 ರಾಸುಗಳಿದ್ದವು. ಆದರೆ ದಿಢೀರ್ ಆಸ್ಪತ್ರೆ ಕಟ್ಟಡ ಕೆಡವಿ ಅಲ್ಪಸಂಖ್ಯಾತರ ಶಾಲೆ ನಿರ್ಮಿಸಿದ್ದು ದೊಡ್ಡ ತಪ್ಪು ಎಂದು ಭಾಸ್ಕರ್‌ರಾವ್ ದೂರಿದರು.

ದಾನಿಗಳು ನೀಡಿದ ಪಶು ಆಸ್ಪತ್ರೆ ಕಟ್ಟಡವನ್ನು ತೆರವುಗೊಳಿಸಿ ಅಲ್ಪಸಂಖ್ಯಾತರ ಸಮುದಾಯದ ಶಾಲೆಗೆ ನೀಡುವುದಕ್ಕೆ ವಿರೋಧಿಸಿ ಪ್ರತಿಭಟನೆ ನಡೆದಿತ್ತು. ಹಸುಗಳ ಮಾಲೀಕ ಕರ್ಣ ಕೂಡ ಈ ಹೋರಾಟದಲ್ಲಿ ಭಾಗಿಯಾಗಿದ್ದ.

ಪ್ರತಿಭಟನೆಯಲ್ಲಿ ಪಾಲ್ಗೊಂಡ ಕರ್ಣನಿಗೆ ಭಯ ಹುಟ್ಟಿಸಲು, ಬಹು ಕೋಟಿ ರೂ. ಬೆಲೆ ಬಾಳುವ ಜಾಗ ಕಬಳಿಸುವ ಸಂಚಿನ ಭಾಗವಾಗಿ ಗೋವುಗಳ ಕೆಚ್ಚಲು ಕೊಯ್ದು ಪಾಶವಿ ಕೃತ್ಯ ಎಸಗಲಾಗಿದೆ ಎಂದು ಆರೋಪಿಸಿದರು.

ಸಿಸಿಟಿವಿ ಕ್ಯಾಮೆರಾಗಳಿಲ್ಲ

ಚಾಮರಾಜಪೇಟೆ ಕ್ಷೇತ್ರದಲ್ಲಿ ಸ್ವಚ್ಛತೆಯಿಲ್ಲ, ಮಾದಕ ವಸ್ತುಗಳ ತಾಣವಾಗಿರುವ ಈ ಓಣಿಯಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದುಗಳನ್ನು ಓಡಿಸಲು ದುಷ್ಕೃತ್ಯ ನಡೆಸಿದ್ದಾರೆ.

ಅತಿಸೂಕ್ಷ್ಮವಾದ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿಲ್ಲ. ರೌಡಿಶೀಟರ್‌ಗಳ ಉಪಟಳ ಹೆಚ್ಚಿದ್ದು, ಸಚಿವ ಜಮೀರ್ ಅಹ್ಮದ್ ಇಂತಹ ಬ್ರಿಗೇಡ್ ತಯಾರು ಮಾಡುತ್ತಿದ್ದಾರೆ. ಅಲ್ಪಸಂಖ್ಯಾತ ಸಮುದಾಯವನ್ನು ದಾರಿ ತಪ್ಪಿಸುವ ಕೃತ್ಯಗಳು ನಡೆಯುತ್ತಿವೆ ಎಂದು ಭಾಸ್ಕರ್‌ರಾವ್ ಕಳವಳ ವ್ಯಕ್ತಪಡಿಸಿದರು.

ಪಕ್ಷದ ಬೆಂಗಳೂರು ಕೇಂದ್ರ ಜಿಲ್ಲಾ ಘಟಕದ ಅಧ್ಯಕ್ಷ ಸಪ್ತಗಿರಿ ಮಾತನಾಡಿ ಸಚಿವ ಜಮೀರ್ ಅಹ್ಮದ್ ನೋಟುಗಳನ್ನು ಹಂಚುವ ಬದಲು ಚಾಮರಾಜಪೇಟೆ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಿ, ದಾರಿ ತಪ್ಪುತ್ತಿರುವ ಅಲ್ಪಸಂಖ್ಯಾತ ಯುವ ಸಮುದಾಯದಲ್ಲಿ ಜಾಗೃತಿ ಮೂಡಿಸಲು ಕಾಳಜಿವಹಿಸಲಿ ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net