

ಬೆಂಗಳೂರು: ತಿದ್ದಿ, ಬುದ್ದಿವಾದ ಹೇಳಿ ಮಗುವಿನ ಭವಿಷ್ಯ ರೂಪಿಸಬೇಕಾದ ತಾಯಿಯೇ ಅಪ್ರಾಪ್ತ ಮಗನ ಮೂಲಕ ಸರಗಳ್ಳತನ ಮಾಡಿಸಿ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ.
ಸರಗಳನ್ನು ಅಪಹರಿಸಲು ಪ್ರದೇಶಗಳನ್ನು ಗುರುತಿಸಿ ನಂತರ ತನ್ನ ಮಗ ಮತ್ತು ಆತನ ಸ್ನೇಹಿತನ ಮೂಲಕ ಸರಗಳವು ಮಾಡಿಸುತ್ತಿದ್ದ ಮಹಿಳೆಯನ್ನು ಅನ್ನಪೂರ್ಣೆಶ್ವರಿ ನಗರದ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆ, ಚಿಂತಾಮಣಿ ತಾಲೂಕಿನ ಉಪಕಾರ್‌ಪೇಟೆಯ ನಿವಾಸಿ ರೋಜಾ (೩೨) ಬಂಧಿತ ಮಹಿಳೆ.ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪಿತೆ ಮಗ (೧೭) ಅಪ್ರಾಪ್ತನಾಗಿದ್ದು ಈತನನ್ನು ವಶಕ್ಕೆ ಪಡೆದು ಬಾಲಮಂದಿರದ ಸುಪರ್ದಿಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಂಗಲ್ಯ ಸರ ಕಿತ್ತುಕೊಂಡು ಪರಾರಿ:
ಮುದ್ದಿನಪಾಳ್ಯ, ವಿಶ್ವೇಶ್ವರಯ್ಯಲೇಔಟ್ ೮ನೇ ಬ್ಲಾಕ್ ನಿವಾಸಿ ನಿರ್ಮಲಾ ಎಂಬುವವರು ಮಾ.೧೫ ರಂದು ಬೆಳಿಗ್ಗೆ ೫ ಗಂಟೆಯ ವೇಳೆ ಮನೆಯ ಮುಂದೆ ನೀರು ಹಾಕುತ್ತಿದ್ದಾಗ ಇಬ್ಬರು ಅಪ್ರಾಪ್ತರು ಕಳ್ಳತನ ಮಾಡಿದ್ದಂತಹ ದ್ವಿಚಕ್ರ ವಾಹನದಲ್ಲಿ ಬಂದು ೩ ಲಕ್ಷ ರೂ. ಬೆಲೆ ಬಾಳುವ ೪೫ ರೂ. ಗ್ರಾಂ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರಿಗೆ ತಾಯಿ ಮತ್ತು ಮಗ ಈ ಕೃತ್ಯ ಎಸಗಿರುವ ಬಗ್ಗೆ ಮಾಹಿತಿ ದೊರೆಯುತ್ತದೆ. ನಂತರ ಆರೋಪಿತೆ ರೋಜಾಳನ್ನು ಬಂಧಿಸಿ ಮತ್ತು ಆತನ ಅಪ್ರಾಪ್ತ ಮಗನನ್ನು ವಶಕ್ಕೆ ಪಡೆದು ೫ ಲಕ್ಷ ರೂ ಬೆಲೆ ಬಾಳುವ ೧೦೩ ಗ್ರಾಂ ಚಿನ್ನದ ಒಡವೆಗಳನ್ನು, ಕೃತ್ಯಕ್ಕೆ ಬಳಸಿದ್ದ ಹೋಂಡಾ ಆ್ಯಕ್ಟಿವಾ ಸ್ಕೂಟರ್ ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಯ ಅಣತಿಯಂತೆ ಕೃತ್ಯ ಎಸಗುತ್ತಿದ್ದರು:
ನಗರದ ವಿವಿಧ ಪ್ರದೇಶಗಳಿಗೆ ಬೆಳಗ್ಗೆ ಮತ್ತು ಸಂಜೆ ಹೋಗುತ್ತಿದ್ದ ಆರೋಪಿತೆ ರೋಜಾ ಯಾವ ಮನೆಯವರು ಬೆಳಗ್ಗೆ ಮನೆಯ ಮುಂದೆ ರಂಗೋಲಿ ಹಾಕುತ್ತಾರೆ, ಯಾವ ಮನೆಯವರು ವಾಯು ವಿಹಾರ ಮಾಡುತ್ತಾರೆ. ಯಾವ ಮನೆಯವರು ಒಂಟಿಯಾಗಿ ಓಡಾಡುತ್ತಾರೆ ಎಂದು ತಿಳಿದುಕೊಂಡು ಇಬ್ಬರು ಅಪ್ರಾಪ್ತರಿಗೆ ಹೇಳುತ್ತಿದ್ದಳು. ಈಕೆಯ ಅಣತಿಯಂತೆ ಈ ಇಬ್ಬರು ಅಪ್ರಾಪ್ತರು ಕಳ್ಳತನ ಮಾಡಿದ ದ್ವಿಚಕ್ರದಲ್ಲಿ ಓಡಾಡಿಕೊಂಡು ಮಹಿಳೆಯರ ಸರಗಳನ್ನು ಎಗರಿಸಿಕೊಂಡು ಬಂದು ಆರೋಪಿತೆಗೆ ಕೊಡುತ್ತಿದ್ದರು. ಆ ಚಿನ್ನದ ಸರಗಳ ಪೈಕಿ ಕೆಲವನ್ನು ಮಾರಾಟ ಮಾಡಿದರೆ, ಇನ್ನು ಕೆಲವು ಆಭರಣಗಳನ್ನು ಗಿರವಿ ಇಟ್ಟು ಹಣಪಡೆದುಕೊಂಡಿರುವುದು ಪೊಲೀಸರ ವಿಚಾರಣೆಯಿಂದ ಗೊತ್ತಾಗಿದೆ. ಆರೋಪಿಗಳ ಬಂಧನದಿಂದ ಕೆಂಗೇರಿ, ಆರ್.ಆರ್.ನಗರ ಮತ್ತು ಅನ್ನಪೂರ್ಣೇಶ್ವರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ೫ ಸರಗಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ.
ಅಲ್ಲದೇ ಈ ಇಬ್ಬರು ಅಪ್ರಾಪ್ತರ ವಿರುದ್ಧ ಈಗಾಗಲೇ ಬ್ಯಾಡರಹಳ್ಳಿ, ಮಾದನಾಯಕನಹಳ್ಳಿ, ರಾಮನಗರ, ತಾವರೇಕೆರೆ, ಕುಂಬಳಗೋಡು ಪೊಲೀಸ್ ಠಾಣೆಗಳಲ್ಲಿ ಸುಮಾರು ೧೨ಕ್ಕೂ ಹೆಚ್ಚು ಡಕಾಯಿತಿ, ಸರ ಅಪಹರಣ, ಸುಲಿಗೆ ಪ್ರಕರಣಗಳು ದಾಖಲಾಗಿದ್ದು, ಬಾಲನ್ಯಾಯ ಮಂಡಳಿಯಲ್ಲಿ ವಿಚಾರಣೆಯಲ್ಲಿದೆ.