

ಇದೇ ಸೆಪ್ಟೆಂಬರ್ 6ರ ಬೆಳಗಿನ ಸಮಯ. ದೇಶದಲ್ಲಿ 26 ಸಾಮಾಜಿಕ ಮಾಧ್ಯಮಗಳನ್ನು ನಿಷೇಧಿಸಲಾಗಿದೆ ಎಂಬ ಸುದ್ದಿ ನಿಧಾನಕ್ಕೆ ಪಸರಿಸುತ್ತ ನೇಪಾಳದಲ್ಲಿ ಉದ್ವಿಗ್ನ ಸನ್ನಿವೇಶ ಹೆಪ್ಪುಗಟ್ಟತೊಡಗಿತ್ತು. ಆ ಸಮಯಕ್ಕೆ, ಕೋಷಿ ಪ್ರಾಂತೀಯ ಸಚಿವ ಇದ್ದ ಜೀಪು ಲಲಿತಪುರ ನಗರದ ಹರಿಸಿದ್ಧಿ ಸೆಕೆಂಡರಿ ಸ್ಕೂಲಿನ ಉಷಾ ಮಗರ್ ಸುನುವಾರ್ ಎಂಬ 11 ವರ್ಷದ ಬಾಲಕಿಗೆ ಬಡಿದು ಮುಂದೆ ಸಾಗಿತು. ಈ ಡಿಕ್ಕಿಯ ರಭಸಕ್ಕೆ ಆಕೆ ರಸ್ತೆಪಕ್ಕ ಹಾರಿಬಿದ್ದಿದ್ದು ಸಿಸಿಟಿವಿಯಲ್ಲಿ ದಾಖಲಾಗಿತ್ತು. ಅದೃಷ್ಟವಶಾತ್ ಆಕೆ ಬದುಕುಳಿದಳು. ಆದರೆ ವಾಹನವನ್ನು ನಿಲ್ಲಿಸದೆ ಸಾಗಿದ್ದು ಜನರ ಆಕ್ರೋಶಕ್ಕೆ ಕಾರಣವಾಯಿತು. ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರು ‘ಇದೊಂದು ಸಾಮಾನ್ಯ ಅಪಘಾತ’ಎಂದು ಹೇಳಿಕೆ ನೀಡಿ, ಗಾಯಾಳು ವಿದ್ಯಾರ್ಥಿನಿಯ ವೈದ್ಯಕೀಯ ವೆಚ್ಚವನ್ನು ಮಾತ್ರ ಸರ್ಕಾರದಿಂದ ಭರಿಸುವುದಾಗಿ ಹೇಳಿದ್ದು, ಆಕ್ರೋಶಕ್ಕೆ ತುಪ್ಪ ಸುರಿಯಿತು. ಈ ಘಟನೆ ಕೇವಲ ಒಂದು ಅಪಘಾತವಾಗಿರದೆ, ಸರ್ಕಾರದಲ್ಲಿರುವವರು ಮತ್ತು ಜನಸಾಮಾನ್ಯರ ನಡುವಿನ ಅಂತರ ಹಾಗೂ ಜನರ ಬಗ್ಗೆ ಸರ್ಕಾರದ ಉಪೇಕ್ಷೆಯ ಸಂಕೇತವಾಗಿಯೂ ಪರಿಗಣಿತವಾಯಿತು. ಮೊದಲೇ ಸಾಮಾಜಿಕ ಮಾಧ್ಯಮ ನಿಷೇಧದ ಕಾರಣಕ್ಕೆ ಕೋಪಗೊಂಡಿದ್ದ ಜನರು ಈ ಘಟನೆಯಿಂದ ಮತ್ತಷ್ಟು ಕೆರಳಿದರು. ವಾರದ ಹಿಂದೆ ದೇಶದ ಯುವಜನರು ಬೀದಿಗಿಳಿದು ಪ್ರತಿಭಟಿಸುವುದಕ್ಕೆ ಸಾಮಾಜಿಕ ಮಾಧ್ಯಮಗಳ ನಿಷೇಧ ಒಂದು ಕಾರಣ ಮಾತ್ರ. ಈ ಸಿಟ್ಟು, ಅಸಹನೆಯ ಹಿಂದೆ ಆಳವಾದ ಬೇರೆ ಬೇರೆ ಸಂಗತಿಗಳು ಹುದುಗಿಕೊಂಡಿವೆ.
‘ನೇಪಾಳದಲ್ಲಿ ಅತ್ಯಂತ ಸುಲಭವಾಗಿ ಸಿಗುವುದು ರಹದಾನಿ (ಪಾಸ್ಪೋರ್ಟ್) ಮಾತ್ರ’ ಎಂಬುದು ಭಾರತದ ಆ ನೆರೆನಾಡಲ್ಲೀಗ ಚಾಲ್ತಿಯಲ್ಲಿರುವ ಜೋಕಿನ ಸ್ವರೂಪದ ಮಾತು. ಆದರಿದು ತಮಾಷೆಯಲ್ಲ ವಾಸ್ತವ ಎಂಬುದಕ್ಕೆ ಅಲ್ಲಿನ ಪರಿಸ್ಥಿತಿಯೇ ಕೈಗನ್ನಡಿ. ಇತಿಹಾಸವನ್ನು ಹುಡುಕುತ್ತ ಹೋದರೆ, ವಲಸೆಯೆಂಬುದು ಈ ದೇಶದ ಜನರಿಗೆ ಬಹು ಹಿಂದಿನಿಂದ ಇರುವ ರೂಢಿ ಎಂಬುದು ಮನದಟ್ಟಾಗುತ್ತದೆ. 1814-16ರಲ್ಲಿ ನಡೆದ ಆಂಗ್ಲೋ-ನೇಪಾಳ ಯುದ್ಧದ ತರುವಾಯ ಶುರುವಾದ ವಲಸೆಪರ್ವ ಇಂದಿಗೂ ಮುಂದುವರಿದಿದೆ.
ಪರದೇಶದತ್ತ ಪ್ರಯಾಣ: ದೇಶದಲ್ಲಿ ಬಡತನದ ಪ್ರಮಾಣ ವಿಪರೀತವಾಗಿದ್ದು, ಸ್ಥಳೀಯವಾಗಿ ಕೆಲಸ ಸಿಗದಿರುವುದರಿಂದ ವಿದೇಶಗಳಿಗೆ ಹೋಗಿ ಚಿಕ್ಕಪುಟ್ಟ ಉದ್ಯೋಗ ಮಾಡಿ ಕುಟುಂಬದವರಿಗೆ ಹಣ ಕಳಿಸುವುದು ಇಲ್ಲಿ ಸಾಮಾನ್ಯ. ವಿದೇಶಗಳಿಂದ ಬರುವ ಹಣದ ಪ್ರಮಾಣ ಶೇ.33ರಷ್ಟಿದ್ದು, ಇದೇ ದೇಶದ ಆರ್ಥಿಕತೆಗೆ ಮೂಲವಾಗಿದೆಯೆಂದರೆ ಅಲ್ಲಿನ ಆರ್ಥಿಕ ಸ್ಥಿತಿಗತಿಯ ಚಿತ್ರಣ ಸಿಗುತ್ತದೆ. 2024ರ ಅಂಕಿಅಂಶದ ಪ್ರಕಾರ, ದೇಶದಲ್ಲಿನ 15-24 ವಯೋಮಾನದವರಲ್ಲಿ ನಿರುದ್ಯೋಗ ಪ್ರಮಾಣ ಶೇ.20.8ರಷ್ಟಿತ್ತು. ಇದು ದಕ್ಷಿಣ ಏಷ್ಯಾ ದೇಶಗಳಲ್ಲಿಯೇ ಅಧಿಕ. ಅಂದಾಜಿನ ಪ್ರಕಾರ, ಪ್ರತಿವರ್ಷ ಸುಮಾರು 8 ಲಕ್ಷ ನೇಪಾಳಿಗಳು ಅಂದರೆ, ಪ್ರತಿನಿತ್ಯ ಸರಾಸರಿ ಸುಮಾರು 2 ಸಾವಿರ ಯುವಕರು ಜೀವನೋಪಾಯಕ್ಕಾಗಿ ಅನ್ಯದೇಶಗಳಿಗೆ ತೆರಳುತ್ತಾರೆ. ಸುಮಾರು ಮೂರು ಕೋಟಿ ಜನಸಂಖ್ಯೆಯ ದೇಶವೊಂದರ ಅನಿವಾರ್ಯತೆಯ ಈ ದಯನೀಯ ಸ್ಥಿತಿ ಅಲ್ಲಿನ ಜನರಲ್ಲಿ ಆಳವಾಗಿ ಮನೆಮಾಡಿದೆ.
ನೇಪಾಳಿ ಯುವಜನರು ಮತ್ತು ರಾಜಕೀಯ ನಾಯಕರ ನಡುವೆ ಸಂಪರ್ಕಸೇತು ಇರಲಿಲ್ಲ ಎಂಬುದು ಸ್ಪಷ್ಟ. ಯುವಜನರ ಮನಸ್ಸಿನಲ್ಲಿ ಏನಿದೆ ಎಂದು ನಾಯಕರು ಓದುವ ಗೋಜಿಗೆ ಹೋಗಲಿಲ್ಲ ಅಥವಾ ಇದೆಲ್ಲ ಇರೋದೇ ಎಂಬ ಉದಾಸೀನದ ನಿಲುವಿಗೆ ಬಂದಿದ್ದರಾ ಎಂದು ಗೊತ್ತಿಲ್ಲ. ದೇಶದ ಚುಕ್ಕಾಣಿ ಹಿಡಿದವರು ಜನರ ಮನೋಗತ ಅರಿತು, ಅದಕ್ಕೆ ತಕ್ಕಂತೆ ಆಡಳಿತ ನಡೆಸುವ ಕೌಶಲ ಕರಗತ ಮಾಡಿಕೊಳ್ಳದಿದ್ದರೆ ಕಷ್ಟ. ನೇಪಾಳದ ಯುವಜನರು ಕೊರಿಯಾ, ಇಂಡೋನೇಷ್ಯಾ, ಜಪಾನ್ ಮತ್ತು ದಕ್ಷಿಣ ಏಷ್ಯಾ ದೇಶಗಳಲ್ಲಿ ದೇಶಗಳಲ್ಲಿ ಕೆಲಸ ಅರಸಿಕೊಂಡು ಹೋಗುತ್ತಿದ್ದಾರೆ. ಇದಲ್ಲದೆ, ದೊಡ್ಡ ಸಂಖ್ಯೆಯ ನೇಪಾಳಿ ಯುವಕರು ಹೊರ ದೇಶಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಕುಟುಂಬದವರು ಹಾಗೂ ಪರಿಚಯಸ್ಥರ ಜತೆ ಸಂಪರ್ಕಕ್ಕೆ ಸಾಮಾಜಿಕ ಮಾಧ್ಯಮಗಳೇ ಇವರಿಗೆ ಮುಖ್ಯ ಸಾಧನಗಳಾಗಿದ್ದವು. ಇದ್ದಕ್ಕಿದ್ದಂತೆ ಸೋಷಿಯಲ್ ಮೀಡಿಯಾಗಳನ್ನು ಬಂದ್ ಮಾಡುವ ಸರ್ಕಾರದ ನಿರ್ಣಯ ಸಹಜವಾಗಿಯೇ ಇವರನ್ನು ಕೆರಳಿಸಿತು. ಆದರೆ ಯುವಜನರ ಕೋಪ ಆಂದೋಲನದ ರೂಪ ತಳೆದು ತಮ್ಮ ಕುರ್ಚಿಗೇ ಭಂಗ ತರಬಹುದೆಂದು ಸರ್ಕಾರದ ಉನ್ನತ ನಾಯಕರು ಅಂದಾಜಿಸಿರಲಿಕ್ಕಿಲ್ಲ.
ಜಾಗತಿಕ ಭೂಪಟದಲ್ಲಿ ಭ್ರಷ್ಟಾಚಾರ ಇಲ್ಲದ ದೇಶ ಕಾಣಲಿಕ್ಕಿಲ್ಲ. ಸಾವಿಲ್ಲದ ಮನೆಯಿಂದ ಸಾಸಿವೆ ತಂದ ಹಾಗೆ ಇದು. ಆದರೆ ನೇಪಾಳದಲ್ಲಿ ಭ್ರಷ್ಟಾಚಾರ ಎಲ್ಲ ಹಂತಗಳನ್ನೂ ಮೀರಿಹೋಗಿದೆ ಎಂಬುದು ಯುವಜನರ ಆಕ್ರೋಶಕ್ಕೆ ಇನ್ನೊಂದು ಮುಖ್ಯ ಕಾರಣ. ಗಿರಿಬಂಧು ಟೀ ಎಸ್ಟೇಟ್ ಹಗರಣ, ಸಹಕಾರ ನಿಧಿಯ ದುರುಪಯೋಗ, ನಿರ್ಮಾಣ ವಲಯದಲ್ಲಿನ ಭ್ರಷ್ಟಾಚಾರ ಪ್ರಕರಣಗಳು- ಹೀಗೆ ಸಾಲು ಸಾಲು ಹಗರಣಗಳು ಹೊರಬರುತ್ತಲೇ ಇದ್ದವು.
ಸಿರಿವಂತರ ದರ್ಬಾರು: ಜೆನ್ -ಝಿ ಆಕ್ರೋಶಕ್ಕೆ ಇನ್ನೂ ಒಂದು ಮುಖ್ಯ ಕಾರಣವಿದೆ. ಲಕ್ಷಾಂತರ ಮಂದಿ ಸಾಮಾನ್ಯ ನೇಪಾಳಿಗಳು ಜೀವನಕ್ಕೊಂದು ಸರಿಯಾದ ಕೆಲಸ ಇಲ್ಲದೆ ಪರದಾಡುತ್ತಿರುವಾಗ ಉನ್ನತ ರಾಜಕೀಯ ನಾಯಕರ ಮಕ್ಕಳು ದೇಶವಿದೇಶಗಳಲ್ಲಿ ಐಷಾರಾಮಿ ಜೀವನ ನಡೆಸುತ್ತಿರುವುದು ಸಹಜವಾಗಿಯೇ ಸಿಟ್ಟಿಗೆ ಕಾರಣವಾಗಿದೆ. ‘ರಾಜಕೀಯ ನಾಯಕರ ಮಕ್ಕಳು ವಿದೇಶಗಳಿಂದ ದುಬಾರಿ ಬ್ಯಾಗುಗಳೊಂದಿಗೆ ವಿಮಾನ ಇಳಿದರೆ, ಬಡವರ ಮಕ್ಕಳ ಮೃತದೇಹಗಳು ವಿದೇಶಗಳಿಂದ ವಾಪಸ್ ಬರುತ್ತವೆ’ ಎಂಬಂಥ ಚರ್ಚೆಗಳು ಆರ್ಥಿಕ ಅಸಮಾನತೆಯನ್ನು ಬಿಂಬಿಸುತ್ತಿದ್ದವು. ರಾಜಕಾರಣಿಗಳ ಮಕ್ಕಳು ತಮ್ಮ ವೈಭವದ ಜೀವನವನ್ನು ಆನ್ಲೈನ್ ವೇದಿಕೆಗಳಲ್ಲಿ ಢಾಳಾಗಿ ಪ್ರದರ್ಶನ ಮಾಡುವುದರ ಬಗ್ಗೆಯೂ ಜನರಲ್ಲಿ ಅಸಹನೆಯಿದೆ. ‘ಇಷ್ಟೆಲ್ಲ ಹಣದ ಮೂಲ ಯಾವುದು ಎಂಬುದನ್ನು ಅವರು ವಿವರಿಸಬಲ್ಲರೆ?’ ಎಂಬುದು ಜನರ ಪ್ರಶ್ನೆ. ಸಿರಿವಂತರು ಲಕ್ಷುರಿ ಕಾರುಗಳು, ವಿದೇಶಗಳಲ್ಲಿ ಭರ್ಜರಿ ಭೋಜನ, ದುಬಾರಿ ತಾಣಗಳಿಗೆ ರಜಾದಿನ ಕಳೆಯಲು ತೆರಳುವುದು- ಮುಂತಾದವನ್ನು ಜನರು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿ, ಟೀಕಿಸುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ, ಜನಸಾಮಾನ್ಯರು ಪ್ರವಾಹ, ಬೆಲೆಯೇರಿಕೆ, ವಿದ್ಯುತ್ ಕಡಿತಗಳಿಂದ ಬವಣೆಪಡುವ ಚಿತ್ರಗಳನ್ನು ಪೋಸ್ಟ್ ಮಾಡಿ, ವ್ಯವಸ್ಥೆಯ ವೈರುಧ್ಯವನ್ನು ಬಿಂಬಿಸಲಾಗುತ್ತಿದೆ.
ದೇಶದ ಚುಕ್ಕಾಣಿ ಹಿಡಿದವರು ತೆರೆದ ಕಣ್ಣುಗಳಿಂದ ದೇಶೀಯ, ಪ್ರಾದೇಶಿಕ, ಜಾಗತಿಕ ವಿದ್ಯಮಾನಗಳನ್ನು ಗಮನಿಸಬೇಕಾಗುತ್ತದೆ. ಆದರೆ ನೇಪಾಳದ ನಾಯಕರಿಗೆ ಪ್ರಾದೇಶಿಕ ಭೂ-ರಾಜಕೀಯ ಸಂಗತಿಗಳ ಸ್ಪಷ್ಟ ಅರಿವು ಇರಲಿಲ್ಲವೆನಿಸುತ್ತದೆ. ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳಲ್ಲಿ ಏನಾಯಿತು, ಇದಕ್ಕೇನು ಕಾರಣ ಎಂಬುದನ್ನು ಅವರು ಗಮನಿಸಿ, ತಮ್ಮ ದೇಶದಲ್ಲಿನ ಸ್ಥಿತಿಗತಿಗೆ ಅನ್ವಯಿಸಿಕೊಂಡಿದ್ದರೆ ಒಂದು ಚಿತ್ರ ಸಿಗುತ್ತಿತ್ತು. ಹಾಗೆನೋಡಿದರೆ, ನೇಪಾಳದಲ್ಲೇ ಈ ಹಿಂದೆ ಎರಡು ಜನಾಂದೋಲನಗಳು (1990 ಮತ್ತು 2006) ನಡೆದಿದ್ದವು. ನೇಪಾಳದಲ್ಲಿ ಈಗ ಯುವಶಕ್ತಿ ಸಿಡಿದೆದ್ದಿದೆ ನಿಜ. ಆದರೆ ಇದು ಎಲ್ಲಿಗೆ ಹೋಗಿ ತಲುಪುತ್ತದೆ? ದೇಶದ ರಾಜಕೀಯ-ಆರ್ಥಿಕ-ಸಾಮಾಜಿಕ ಜೀವನದಲ್ಲಿ ಕಣ್ಣು ಕೋರೈಸುವ ಬದಲಾವಣೆ ಸಾಧ್ಯವಾಗುವುದೇ ಎಂಬುದು ಬಹುಮುಖ್ಯ ಪ್ರಶ್ನೆ.
ಅರಬ್ ವಸಂತ: ಭ್ರಷ್ಟಾಚಾರ, ನಿರುದ್ಯೋಗ, ಸ್ವಜನಪಕ್ಷಪಾತ, ದುರಾಡಳಿತ... ಇವೆಲ್ಲ ಜಾಗತಿಕವಾಗಿ ಕಂಡುಬರುವ ಪ್ರವೃತ್ತಿಗಳು. ಹೀಗಾಗಿ ಇಂಥ ಆಂದೋಲನಗಳು ಎಲ್ಲಿ ಯಾವಾಗ ಬೇಕಾದರೂ ಸಂಭವಿಸಬಹುದು ಎಂಬ ಎಚ್ಚರ ಆಳುಗರಲ್ಲಿರಬೇಕಾಗುತ್ತದೆ. 2010ರಿಂದಾರಂಭಿಸಿ ಅನೇಕ ಅರಬ್ ದೇಶಗಳಲ್ಲಿ ಯುವಜನರ ದಂಗೆ ಘಟಿಸಿತ್ತು. ಇದನ್ನು ‘ಅರಬ್ ವಸಂತ’ ಎಂದು ಕರೆಯುತ್ತಾರೆ. ಹೊಸದೊಂದು ಆರಂಭಕ್ಕೆ ನಾಂದಿಹಾಡಿದ ಆಂದೋಲನ ಎಂಬರ್ಥದಲ್ಲಿ ಈ ಪದ ಠಂಕಿಸಲಾಗಿದೆ. ಭ್ರಷ್ಟಾಚಾರ ಮತ್ತು ಆರ್ಥಿಕ ಅವ್ಯವಸ್ಥೆ ವಿರೋಧಿಸಿ ಟ್ಯುನಿಷಿಯಾದಲ್ಲಿ ಶುರುವಾಗಿ ಕ್ರಮೇಣ ಲಿಬಿಯಾ, ಈಜಿಪ್ಟ್, ಯೆಮೆನ್, ಸಿರಿಯಾ ಮತ್ತು ಬಹರೈನ್ ಮುಂತಾದ ದೇಶಗಳಿಗೂ ಈ ಅಭಿಯಾನ ವ್ಯಾಪಿಸಿತು. ಇದರ ಪರಿಣಾಮವಾಗಿ ಅನೇಕ ದೇಶಗಳ ಮುಖ್ಯಸ್ಥರು ರಾಜೀನಾಮೆ ನೀಡಬೇಕಾಯಿತು; ಸರ್ಕಾರಗಳು ಉರುಳಿದವು. ಸರ್ಕಾರಗಳೇನು ಸುಮ್ಮನೆ ಕೂರುತ್ತವಾ? ಪ್ರತಿಭಟನೆ ಹತ್ತಿಕ್ಕಲು ಎಲ್ಲ ಪ್ರಯತ್ನವನ್ನೂ ಮಾಡುತ್ತವೆ. ಪರಿಣಾಮ ಒಂದೊಂದು ದೇಶದಲ್ಲಿ ಸಾವಿರಾರು ಜನರು ಸಾವನ್ನಪ್ಪಿದರು. ದೇಶದಲ್ಲಿ ಅರಾಜಕತೆ, ಅಶಾಂತಿ ತಾಂಡವವಾಡಿದವು. ಆದರೆ ಈ ಕಾಲಘಟ್ಟದಲ್ಲಿ ನಿಂತು ನೋಡಿದರೆ, ಅನೇಕ ದೇಶಗಳಲ್ಲಿ ‘ಅರಬ್ ವಸಂತ’ ಎದ್ದುತೋರುವಂಥ ಬದಲಾವಣೆಗಳನ್ನೇನೂ ತರಲಿಲ್ಲ ಎಂದು ಇತಿಹಾಸಕಾರರು ಗುರುತಿಸುತ್ತಾರೆ.
ಯುವಜನರು ದಂಗೆಯೆದ್ದಾಗ ಅಥವಾ ಪ್ರತಿಭಟನೆ ನಡೆಸಿದಾಗ ಅವರಿಗೆ ಮುಂದೆ ಸಾಗುವ ಹಾದಿಯ ಬಗ್ಗೆ ಸ್ಪಷ್ಟವಾದ ಮಾರ್ಗದರ್ಶನ ಮತ್ತು ತಿಳಿವಳಿಕೆ ನೀಡುವವರಿರಬೇಕಾಗುತ್ತದೆ. ಏಕೆಂದರೆ, ಇಂಥ ಪ್ರತಿಭಟನೆಗಳು ದಿಢೀರನೆ, ಯಾವುದೋ ಒಂದು ಕಾರಣದಿಂದ ತಕ್ಷಣದ ಪ್ರತಿಕ್ರಿಯೆಯಾಗಿ ಹೊರಹೊಮ್ಮಿದಾಗ ಈ ಅಭಿಯಾನವನ್ನು ಮುಂದೆ ಎಲ್ಲಿಗೆ ಕೊಂಡೊಯ್ಯಬೇಕು, ಗೊತ್ತುಗುರಿಗಳೇನು ಎಂಬುದರ ಬಗ್ಗೆ ಸ್ಪಷ್ಟ ನೀಲಿನಕ್ಷೆ ಅಥವಾ ಪರಿಕಲ್ಪನೆಗಳಿರುವುದಿಲ್ಲ. ಇದಲ್ಲದೆ, ಗದ್ದಲಗಲಭೆ ಸಂದರ್ಭದಲ್ಲಿ ಸಮಾಜವಿರೋಧಿ ಶಕ್ತಿಗಳೂ ಸೇರಿಕೊಂಡು ಆಸ್ತಿಪಾಸ್ತಿ ಹಾನಿ, ದೌರ್ಜನ್ಯ ಇತ್ಯಾದಿ ದುಷ್ಕೃತ್ಯ ನಡೆಸುವ ಸಾಧ್ಯತೆಯೂ ಇರುತ್ತದೆ. ಇದರಿಂದಾಗಿ, ಪ್ರತಿಭಟನೆ ದಾರಿತಪ್ಪಿ, ಗುರಿವಿಹೀನವಾಗುವ ಅಪಾಯವೂ ಇಲ್ಲದಿಲ್ಲ.
ನೇಪಾಳ ದಂಗೆಯ ತೆರೆಮರೆಯಲ್ಲಿ ವಿದೇಶಿ ಕೈವಾಡದ ಶಂಕೆಯನ್ನೂ ಕೆಲವರು ವ್ಯಕ್ತಪಡಿಸುತ್ತಾರೆ. ಪ್ರಧಾನಿಯಾಗಿದ್ದ ಕೆ.ಪಿ.ಓಲಿ ಅವರು ಚೀನಾಪರ ಒಲವಿನವರು. ಈಚೆಗೆ ಚೀನಾದಲ್ಲಿ ಸೇನಾ ಪರೇಡ್ನಲ್ಲೂ ಭಾಗವಹಿಸಿದ್ದರು. ನೇಪಾಳದಲ್ಲಿ ಚೀನಾ ಪ್ರಭಾವವನ್ನು ತಗ್ಗಿಸುವ ಸಲುವಾಗಿ ಅಮೆರಿಕವು ದಂಗೆಗೆ ಪರೋಕ್ಷ ಬೆಂಬಲ ನೀಡಿದೆ ಎಂಬ ವ್ಯಾಖ್ಯಾನವೂ ಕೇಳಿಬಂದಿದೆ. ಕೆಲ ತಿಂಗಳ ಹಿಂದೆ ಬಾಂಗ್ಲಾದೇಶದಲ್ಲಿ ನಡೆದ ಪ್ರತಿಭಟನೆಯಲ್ಲಿ ಅಮೆರಿಕ ಕೈವಾಡವಿತ್ತು ಎಂದು ಅಲ್ಲಿನ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರೇ ಆಪಾದಿಸಿದ್ದು ಇಲ್ಲಿ ನೆನಪಿಗೆ ಬರುತ್ತದೆ.
ರಾಜಪ್ರಭುತ್ವದಿಂದ ಪ್ರಜಾಪ್ರ್ರುತ್ವದತ್ತ: 1990ರ ಅವಧಿಯಲ್ಲಿ ಪ್ರತಿಭಟನೆ ನಡೆದ ಪರಿಣಾಮ ಅಂದಿನ ದೊರೆ ಬೀರೇಂದ್ರ ಅವರು ಬಹುಪಕ್ಷೀಯ ಪ್ರಜಾಪ್ರಭುತ್ವ ವ್ಯವಸ್ಥೆ ತರಲು ಒಪ್ಪಿದರು. ಹೊಸ ಸಂವಿಧಾನದ ಪ್ರಕಾರ, ರಾಜನು ದೇಶದ ಮುಖ್ಯಸ್ಥನಾಗಿದ್ದು, ನೇಪಾಳವನ್ನು ಹಿಂದು ರಾಷ್ಟ್ರ ಎಂಬುದಾಗಿ ಘೋಷಿಸಲಾಯಿತು. ಆದರೆ 1996ರಲ್ಲಿ ಮಾವೋವಾದಿಗಳು ಗಣರಾಜ್ಯ ಸ್ಥಾನಮಾನಕ್ಕೆ ಆಗ್ರಹಿಸಿ ಸಶಸ್ತ್ರ ಆಂದೋಲನ ಶುರುಮಾಡಿದರು. ಈ ನಡುವೆ, 2001ರಲ್ಲಿ ನೇಪಾಳ ಅರಮನೆಯಲ್ಲಿ ಭಾರಿ ದುರಂತ ನಡೆದು, ರಾಜಕುಮಾರ ದೀಪೇಂದ್ರನು ದೊರೆ ಬೀರೇಂದ್ರ ಹಾಗೂ ರಾಜಮನೆತನದ ಅನೇಕರನ್ನು ಸಾಯಿಸಿದ. ಬಳಿಕ ಬೀರೇಂದ್ರ ಅವರ ಸೋದರ ಜ್ಞಾನೇಂದ್ರ ರಾಜನ ಪಟ್ಟಕ್ಕೆ ಬಂದರು. ಈಗ ಅರಸೊತ್ತಿಗೆ ಇಲ್ಲದಿದ್ದರೂ ಜನರಲ್ಲಿ ಅರಸು ಮನೆತನದ ಬಗ್ಗೆ ಆದರವಿದೆ. ಪ್ರತಿ ವರ್ಷ ದಸರಾ ಸಂದರ್ಭದಲ್ಲಿ ಮತ್ತು ರಾಜನ ಜನ್ಮದಿನದ ವೇಳೆ ಜನರು ಅರಮನೆಯತ್ತ ಜಮಾಯಿಸುವುದು ಇದಕ್ಕೆ ಸಾಕ್ಷಿ. 2006ರಲ್ಲಿ ರಾಜಮನೆತನ ಮತ್ತು ಮಾವೋವಾದಿಗಳ ನಡುವೆ ಒಡಂಬಡಿಕೆ ಏರ್ಪಟ್ಟು, ಅರಸೊತ್ತಿಗೆ ಕೊನೆಗೊಂಡಿತು. ನೇಪಾಳಕ್ಕೆ ಹಿಂದು ರಾಷ್ಟ್ರ ಎಂಬ ಸ್ಥಾನಮಾನವೂ ರದ್ದಾಯಿತು. ಈಗ ಯುವಜನರ ಪ್ರತಿಭಟನೆ ನಂತರ ನೇಪಾಳದಲ್ಲಿ ರಾಜಪ್ರಭುತ್ವ ಮತ್ತೆ ಬರಬೇಕು ಮತ್ತು ನೇಪಾಳ ಹಿಂದೂ ರಾಷ್ಟ್ರ ಆಗಬೇಕು ಎಂಬ ಬೇಡಿಕೆ ಕೂಡ ದನಿಪಡೆಯತೊಡಗಿದೆ. ಬಹುಶಃ ರಾಜಕೀಯ ವ್ಯವಸ್ಥೆಯ ಅವ್ಯವಸ್ಥೆ ಕಂಡು ಕೆಲವರು ಇಂಥ ನಿಲುವಿಗೆ ಬಂದಿರಬೇಕು. ಇದೇ ವೇಳೆ, ಮಧ್ಯಂತರ ಸರ್ಕಾರದ ರಚನೆಯ ಕಸರತ್ತು ಕೂಡ ನಡೆದಿದೆ. ನೇಪಾಳ ಆಡಳಿತದ ಮುಂದಿನ ನಡೆ ಹರಳುಗಟ್ಟಲು ಇನ್ನೂ ಕೆಲ ದಿನ ಬೇಕಾಗಬಹುದು.
ಕೊನೇ ಮಾತು: ಅಸ್ಥಿರ ರಾಜಕೀಯ ಪರಿಸ್ಥಿತಿ ನೇಪಾಳವನ್ನು ಕಾಡುತ್ತಲೇ ಬಂದಿದೆ. 2008ರಲ್ಲಿ ರಾಜಪ್ರಭುತ್ವ ಹೋಗಿ ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬಂದಾಗಿನಿಂದ 17 ವರ್ಷಗಳಲ್ಲಿ 14 ಸರ್ಕಾರಗಳನ್ನು ಆ ದೇಶ ಕಂಡಿದೆ! ಈಗಿನ ದಂಗೆಯು ಹೊಸ ಶಕೆಗೆ ಕಾರಣವಾಗುವುದೇ? ಕಾದು ನೋಡೋಣ.
(ಲೇಖಕರು 'ವಿಜಯವಾಣಿ' ಡೆಪ್ಯೂಟಿ ಎಡಿಟರ್)