ಅಂಬಾನಿ ಏಷ್ಯಾದ ನಂ.1 ಶ್ರೀಮಂತ; 'ಜಾಕ್​ ಮಾ' ರನ್ನು ಹಿಂದಿಕ್ಕಿದ ಮುಕೇಶ್​ ಅಂಬಾನಿ

Ambani 23 April 20
Published on

ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಸಮೂಹದ ಟೆಲಿಕಾಂ ವಿಭಾಗವಾದ ರಿಲಯನ್ಸ್ ಜಿಯೋದ ಶೇಕಡಾ 9.99 ಷೇರುಗಳನ್ನು ಅಮೆರಿಕದ ಫೇಸ್​ಬುಕ್ ಸಂಸ್ಥೆ ಖರೀದಿಸಿದ ಬಳಿಕ ರಿಲಯನ್ಸ್ ಒಡೆಯ ಮುಕೇಶ್ ಅಂಬಾನಿ ಸಂಪತ್ತಿನಲ್ಲಿ ಭಾರಿ ಪ್ರಮಾಣದ ಏರಿಕೆಯಾಗಿದೆ. ಚೀನಾದ ಶ್ರೀಮಂತ, ಅಲಿಬಾಬಾ ಸಂಸ್ಥೆಯ ಮುಖ್ಯಸ್ಥ ಜಾಕ್ ಮಾ ಅವರನ್ನೂ ಹಿಂದಿಕ್ಕಿ ಮುಕೇಶ್ ಅಂಬಾನಿ ಏಷ್ಯಾದ ಅಗ್ರಗಣ್ಯ ಶ್ರೀಮಂತರ ಪಟ್ಟಿಯಲ್ಲಿ ಮೊದಲನೇ ಸ್ಥಾನಕ್ಕೇರಿದ್ದಾರೆ.

ಫೇಸ್​ಬುಕ್ ಸಂಸ್ಥೆ -  43,574 ಕೋಟಿ  ರೂ.(5.7 ಬಿಲಿಯನ್ ಡಾಲರ್) ಮೊತ್ತದಲ್ಲಿ ಜಿಯೋದ ಶೇಕಡಾ 9.9ರಷ್ಟು ಷೇರುಗಳನ್ನು ಖರೀದಿಸಿದ್ದು, ಇದು ಭಾರತದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿನ ಅತೀ ದೊಡ್ಡ ವಿದೇಶಿ ನೇರ ಬಂಡವಾಳ ಹೂಡಿಕೆಯಾಗಿದೆ (ಎಫ್​ಡಿಐ). ಈ ಒಪ್ಪಂದದ ಬಳಿಕ ಮುಕೇಶ್ ಅಂಬಾನಿ ಸಂಪತ್ತಿನಲ್ಲಿ ಏರಿಕೆ ಕಂಡು ಬಂದಿದ್ದು, ಒಟ್ಟು ಸಂಪತ್ತಿನ ಮೌಲ್ಯ 3.77 ಲಕ್ಷ ಕೋಟಿ ರೂ.ಗೆ ಏರಿದೆ. ಚೀನಾದ ಜಾಕ್ ಮಾ ಅವರ ಒಟ್ಟು ಸಂಪತ್ತು 3.55 ಲಕ್ಷ ಕೋಟಿ ರೂ. ಎಂದು ಬ್ಲೂಮ್​ಗ್ ಸೂಚ್ಯಂಕ ತಿಳಿಸಿದೆ.

ವಿಶ್ವದ ಅತೀ ದೊಡ್ಡ ತೈಲ ಸಂಸ್ಕರಣಾಗಾರವನ್ನು ಹೊಂದಿರುವ ಅಂಬಾನಿ, ಬುಧವಾರಕ್ಕೂ ಮೊದಲು ಬ್ಲೂಮ್​ಗ್ನ 2020ರ ಸೂಚ್ಯಂಕದಲ್ಲಿ ಇಳಿಕೆ ದಾಖಲಿಸಿದ್ದರು. ಇದು ಏಷ್ಯಾದ ಯಾವೊಬ್ಬ ಶ್ರೀಮಂತ ಅನುಭವಿಸಿದ ಅತೀ ದೊಡ್ಡ ಸಂಪತ್ತು ಕುಸಿತವಾಗಿತ್ತು. ಜಾಕ್ ಮಾ ಕರೊನಾ ವಿರುದ್ಧ ಹೋರಾಡುವ ಸಲುವಾಗಿ ವಿಶ್ವ ಆರೋಗ್ಯ ಸಂಸ್ಥೆಗೆ 10 ಕೋಟಿ ಮಾಸ್ಕ್​ಗಳು ಹಾಗೂ ಇನ್ನಿತರ ವೈದ್ಯಕೀಯ ಸರಕುಗಳ ನೆರವು ನೀಡಿದ ಬಳಿಕ ಅವರ ಅಲಿಬಾಬಾ ಗ್ರೂಪ್ ಹೋಲ್ಡಿಂಗ್ ಲಿಮಿಟೆಡ್ ಮಂಗಳವಾರದ ವೇಳೆಗೆ ಸುಮಾರು 1 ಬಿಲಿಯನ್ ಡಾಲರ್ ನಷ್ಟ ಅನುಭವಿಸಿದೆ.

ರಿಲಯನ್ಸ್ ಷೇರು ಮೌಲ್ಯ ಏರಿಕೆ

ಫೇಸ್​ಬುಕ್ ಜತೆಗಿನ ಒಪ್ಪಂದದಿಂದಾಗಿ ರಿಲಯನ್ಸ್ ಷೇರುಗಳ ಮೌಲ್ಯ ಭಾರಿ ಏರಿಕೆ ಕಂಡಿದೆ. ಬುಧವಾರದ ವಹಿವಾಟಿನ ಮಧ್ಯದಲ್ಲಿ ರಿಲಯನ್ಸ್ ಷೇರುಗಳ ಮೌಲ್ಯ 1,375 ರೂಪಾಯಿವರೆಗೂ ಏರಿಕೆ ಕಂಡಿತ್ತು. ವಹಿವಾಟಿನ ಅಂತ್ಯಕ್ಕೆ ಶೇಕಡಾ 9.83 ಏರಿಕೆ ಕಂಡು, -ಠಿ; 1,359ಕ್ಕೆ ನಿಂತಿತ್ತು. ಬುಧವಾರ ಒಂದೇ ದಿನದ ವಹಿವಾಟಿನಿಂದ ರಿಲಯನ್ಸ್ ಇಂಡಸ್ಟ್ರೀಸ್​ನ ಮಾರುಕಟ್ಟೆ ಮೌಲ್ಯ 90 ಸಾವಿರ ಕೋಟಿ ಏರಿಕೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net